ಮರೆವು ಶಾಪವಾಗದಿರಲಿ

Update: 2018-04-17 18:49 GMT

ಮಾನವನಲ್ಲಿ ನೆನಪು ಹಾಗೂ ಮರೆವು ಸಂಬಂಧಿ ಸಮಸ್ಯೆಗಳು ಅಗಾಧ. ಮರೆವಿನಿಂದಾಗಿ ಜನರು ಪೇಚಿಗೆ ಬಿದ್ದು ಅಪಹಾಸ್ಯಕ್ಕೆ ಗುರಿಯಾಗುವುದು ಸಾಮಾನ್ಯ. ನೆನಪಿನ ಶಕ್ತಿ ಅಭಾವದಿಂದ ವಿದ್ಯಾರ್ಥಿಗಳು ಕೂಡಾ ತಲೆಕೆರೆದುಕೊಳ್ಳುವುದು ಸಾಮಾನ್ಯ. ಮರೆವು ಜೀವನದಲ್ಲಿ ಸವಾಲು ತರಬಾರದು. ನೆನಪು ನಿರಂತರ ಬೇಕಾದಷ್ಟಿರಬೇಕು. ಇವೆರಡರಲ್ಲೂ ಏರುಪೇರಾದರೆ ಮಾನವನ ಜೀವನ ಗೊಂದಲಮಯ. ತ್ರಾಸದಾಯಕ.

ಮರೆವು: ಕಾರಣ
 ಮರೆವಿಗೆ ಕಾರಣಗಳು ಹಲವು. ಶಿಸ್ತಿಲ್ಲದ ಜೀವನ ಕ್ರಮವೂ ಮಾನವನ ಮರೆವಿಗೆ ಕಾರಣವಾಗಬಹುದು. ಯೋಜನೆಯಿಲ್ಲದ ಬದುಕಲ್ಲಿ ದೈನಂದಿನ ಚಟುವಟಿಕೆ ಇಲ್ಲದಿರುವುದು ಮತ್ತೊಂದು ಕಾರಣ.

ಮಿದುಳಿನ ಆಘಾತ, ಮಿದುಳು ಸೋಂಕು, ವೃದ್ಧಾಪ್ಯ, ಮಿದುಳಿನ ರಕ್ತ ಪರಿಚಲನೆಯಲ್ಲಿ ವ್ಯತ್ಯಾಸ, ನರಕೋಶ ನಾಶ, ಖಿನ್ನತೆ, ಪಾರ್ಕಿನ್ಸನ್ಸ್ ರೋಗ, ತೀವ್ರ ನಿದ್ರಾಹೀನತೆ, ಆಹಾರ ಅಭಾವ ಹಾಗೂ ಎಡೆಬಿಡದೆ ಕಾತುರ ತುಂಬಿದ ಮನೋದುಗುಡ ಇತ್ಯಾದಿ ಮರೆವಿಗೆ ಮುಖ್ಯ ಕಾರಣಗಳಾಗುತ್ತವೆ. ಮಾದಕ ದ್ರವ್ಯಚಟ ಹಾಗೂ ಮದ್ಯ ಸೇವನೆಗಳೂ ಮರೆವು ತರುತ್ತವೆ. ಈ ಕಾರಣಗಳಿಂದ ಪೂರ್ಣ ಇಲ್ಲವೇ ಆಂಶಿಕ ಅಥವಾ ತಾತ್ಕಾಲಿಕ/ಶಾಶ್ವತ ಮರೆವು ಕಾಣಿಸಿಕೊಳ್ಳಬಹುದು. ನಿದ್ರೆ ಮಾತ್ರೆ ಸೇವನೆ ಹೆಚ್ಚಾದಂತೆಲ್ಲ ಮರೆವು ಉಪದ್ರ ನೀಡುವುದು ಸಂಭವನೀಯ.

ಮರೆವು ಒಂದು ರೋಗವೇ?
ಅನೇಕ ರೋಗಗಳಲ್ಲಿ ಮರೆವು ಒಂದು ರೋಗಲಕ್ಷಣವಾಗಿರುವುದು ಅಪರೂಪವೇನಲ್ಲ. ಆದರೆ ಮರೆವು ಒಂದು ರೋಗವೆನ್ನುವುದು ಸಮರ್ಥನೀಯವಲ್ಲ. ಮೆದುಳಿನಲ್ಲಿ ನಂಜಿನ ವಸ್ತು ಉತ್ಪತ್ತಿ ಹೇರಳವಾಗಿ ಮರೆವು ಕಾಣಿಸಿಕೊಂಡರೂ ಅದು ರೋಗ ಎಂದೆನಿಸಿಕೊಳ್ಳುವುದಿಲ್ಲ. ಆಲ್ಝೀಮರ್ಸ್‌ ರೋಗ ಪೂರ್ಣಮಟ್ಟದಲ್ಲಿ ಕಾಣಿಸಿಕೊಂಡಾಗ ಮರೆವು ಸಂಪೂರ್ಣವಾಗಿ ಆವರಿಸಿ, ರೋಗಿಯು ಜೀವಂತ ಮರದ ಕೊರಡು ಎನ್ನಿಸಿಕೊಳ್ಳುವುದು ಸಹಜ.

ನೆನಪು ವೃದ್ಧಿಸಿಕೊಂಡರೆ ಮರೆವು ಇಲ್ಲವೇ?
 ನೆನಪು ವೃದ್ಧಿಸಿಕೊಳ್ಳುವ ಉತ್ತಮ ಮಾರ್ಗವೆಂದರೆ, ಮೆದುಳನ್ನು ಹೆಚ್ಚು ಚಟುವಟಿಕೆಯಿಂದಿರಿಸುವುದು. ಮೆದುಳು ಕೆಲಸ ಮಾಡಿದಷ್ಟೂ ಮರೆವು ದೂರ. ಏಕಾಗ್ರತೆ ಚಟುವಟಿಕೆ, ಕಲಿಕೆ, ಗೃಹಿಕೆ, ಸ್ಪಷ್ಟ ಯೋಜನೆ ನೆನಪು ಶಕ್ತಿಯನ್ನು ವೃದ್ಧಿಸುತ್ತವೆ. ಕ್ರಮಬದ್ಧ, ವ್ಯವಸ್ಥಿತ ಜೀವನ ನೆನಪು ಶಕ್ತಿಗೆ ಪೋಷಕ ಮತ್ತು ಸುಖನಿದ್ರೆ ನೆನಪಿಗೆ ಪೂರಕ. ಮೆದುಳಿನಲ್ಲಿ ನೆನಪಿನ ಯಂತ್ರವೆಂದರೆ ಹಿಪ್ಟೊಕ್ಯಾಂಪಸ್ ಅನ್ನುವ ಭಾವ. ಶಿಸ್ತುಬದ್ಧ ವ್ಯಾಯಾಮವು ಹಿಪ್ಟೊಕ್ಯಾಂಪಸ್ ಹೊಸದಾಗಿ ಜೀವಕೋಶಗಳ ಸಂಖ್ಯೆಯನ್ನು ವೃದ್ಧಿಸಿ ಜ್ಞಾಪಕ ಶಕ್ತಿಯನ್ನು ಹೆಚ್ಚಿಸುತ್ತದೆಯೆಂದು ಇತ್ತೀಚಿನ ನರಶಾಸ್ತ್ರ ಸಂಶೋಧನೆ ವರದಿ ಉಲ್ಲೇಖಿಸಿದೆ.

ಜ್ಞಾಪಕಶಕ್ತಿ ಹೆಚ್ಚಿಸುವ ಔಷಧಿ ಇದೆಯೇ?

ಆಧುನಿಕ ಔಷಧಿ ಶಾಸ್ತ್ರ ಅನವರತ ಮಾನವ ಜ್ಞಾಪಕ ಶಕ್ತಿ ಹೆಚ್ಚಿಸುವ ಔಷಧಿಯನ್ನು ರೂಪಿಸಲು ಹೋರಾಡುತ್ತಿದೆ. ಎಲ್ಲರಲ್ಲೂ ಒಂದೇ ರೀತಿಯ ಪ್ರಭಾವ ಬೀರುವ ಜ್ಞಾಪಕ ಶಕ್ತಿ ಔಷಧಿಯ ಆವಿಷ್ಕಾರ ದುರ್ಗಮ. ಕಾರಣ ಮಾನವ ಮೆದುಳಿನ ಕ್ರಿಯೆ-ಪ್ರಕ್ರಿಯೆಗಳ ವಿಶಾಲ ವ್ಯಾಪ್ತಿಯ ಮೇಲೆ ನಿಯಂತ್ರಣ ಸಾಧಿಸುವುದು ಸುಲಭವಲ್ಲ. ಜ್ಞಾಪಕ ಶಕ್ತಿ ಹೆಚ್ಚಿಸುವ ಔಷಧಿಯ ಕಾರ್ಯದಕ್ಷತೆ ಮಿದುಳಿನ ಕ್ರಿಯಾಶೀಲತೆಯ ಮೇಲೆ ಪೂರ್ಣ ಅವಲಂಬಿತ. ಮನೋಗ್ರಹಿಕೆ ವೃದ್ಧಿಸಿ ನೆನಪು ಹೆಚ್ಚಿಸಿ, ಮರೆವು ದೂರ ಮಾಡುವ ಔಷಧಿಗೆ ವೈದ್ಯ ವಿಜ್ಞಾನ ನ್ಯೂಟ್ರೊಪಿಕ್ಸ್ ಎಂದು ಕರೆಯುತ್ತದೆ. (ಗ್ರೀಕ್‌ನಲ್ಲಿ ನೂ ಅಂದರೆ ಮನಸ್ಸು). ನ್ಯೂಟ್ರೊಪಿಕ್ಸ್ ಮಾನವ ಬುದ್ಧಿವಂತಿಕೆಯನ್ನು ಹೆಚ್ಚಿಸುವುದೇ? ಆಧುನಿಕ ವೈದ್ಯ ಪ್ರಪಂಚದಲ್ಲಿ ಇದೊಂದು ಯಕ್ಷಪ್ರಶ್ನೆಯಾಗಿ ಉಳಿದಿದೆ. ಅನೇಕ ವೈದ್ಯ ವಿಜ್ಞಾನಿಗಳು ನ್ಯೂಟ್ರೊಪಿಕ್ಸ್ ಮಾನವನನ್ನು ಪ್ರಯೋಗ ಪಶುವನ್ನಾಗಿ ಮಾರ್ಪಡಿಸಿದೆ ಎಂದು ಗೇಲಿ ಮಾಡುತ್ತಿರುವುದು ನಿಜ. ಅಂದರೆ, ಸ್ಥಿರ ಫಲಿತಾಂಶ ಬೀರುವ ನೆನಪು ಶಕ್ತಿ ಗುಳಿಗೆಯ ಹುಟ್ಟು ಇನ್ನೂ ಆಗಬೇಕಷ್ಟೆ. ಅಲ್ಲಿಯ ತನಕ ಈ ರೀತಿ ಔಷಧಿ ಸೇವಿಸುವ ಮಾನವ ಯಜ್ಞಪಶುವಿಗೆ ಸಮ ಎಂದರ್ಥ. ಆದಾಗ್ಯೂ ಫೈರಾಸೆಟಾಮ್, ಹೈಡರ್‌ಜೀನ್ ವ್ಯಸೊಪ್ರೆಸ್ಸಿನ್ ಔಷಧಿಗಳು ಮನೋಗೃಹಿಕೆ ವೃದ್ಧಿಸುವ, ಸ್ಮರಣಶಕ್ತಿ ಉದ್ದೀಪಕಗಳೆಂದು ಕರೆಯಲ್ಪಟ್ಟಿವೆ.

ವೃದ್ಧಾಪ್ಯದ ಮರೆವು
 ಮರೆವು ಮೊದಲು ವರ್ತಮಾನದ ಆಗುಹೋಗುಗಳಿಗೆ ಸೀಮಿತವಾಗಿರುತ್ತದೆ. ಇದು ದೈನಂದಿನ ಚಟುವಟಿಕೆಗಳಿಗೆ ಆತಂಕ ತರುವುದಿಲ್ಲ. ಆದರೆ ವ್ಯಕ್ತಿಗತ ಆಘಾತ ತರಬಹುದು. ಮರೆವು ಹೊಂದಿರುವ ವ್ಯಕ್ತಿ ಆಲ್ಜೀಮರ್ಸ್‌ ರೋಗಕ್ಕೆ ತುತ್ತಾಗುವುದು ಸಂಭವನೀಯ. ಒಂದು ನಿಖರ ವೈದ್ಯ ಅಭಿಪ್ರಾಯದಂತೆ, ವೃದ್ಧಾಪ್ಯದ ಮರೆವು ಒಂದು ರೋಗವಲ್ಲ ಹಾಗೂ ಅದಕ್ಕೆ ಮದ್ದಿಲ್ಲ.

ಅಸಹಜ ನೆನಪು ಅಳಿಸುವ ಔಷಧಿ!
 ಕೆಟ್ಟದ್ದನ್ನು ನೆನಪಿಸಿಕೊಳ್ಳುವುದು, ಆತಂಕಕಾರಿ ಸನ್ನಿವೇಶಗಳನ್ನು ಮರೆಯಲಾಗದೆ ತೊಳಲಾಡುವವರಿಗೆ ಔಷಧಿ ಚಿಕಿತ್ಸೆ ಒಂದು ಸವಾಲು. ಸಾಮಾನ್ಯವಾಗಿ ವೈದ್ಯರು ನಿದ್ರೆ ಔಷಧಿಗಳನ್ನು ಬಳಸುವುದು ರೂಢಿ. ಇದು ಫಲಕಾರಿ ಅಲ್ಲ. ಹೆಚ್ಚು ನಿದ್ರೆ ಔಷಧಿ ಸೇವನೆ ತನ್ನದೇ ವಿಷವೃತ್ತ ಸೃಷ್ಟಿಸುತ್ತದೆ. ಆದ್ದರಿಂದ ನಿದ್ರೆ ಔಷಧಿ ಬಳಕೆ ತಾತ್ಕಾಲಿಕ ಉಪಶಮನಕ್ಕೆ ಪೂರಕ.

ಇತ್ತೀಚೆಗೆ ಆತಂಕಕಾರಿ ನೆನಪು ಅಳಿಸುವ ಔಷಧಿ ಅನಿಸೊಮೈಸಿನ್ ಒಂದು ಆಶಾಭಾವ ಮೂಡಿಸಿದೆ. ಇದು ಬೆಳವಣಿಗೆಯ ಹಂತದಲ್ಲಿದೆ. ಅನಿಸೊಮೈಸಿನ್ ಔಷಧಿಗಳು ಮಾರುಕಟ್ಟೆಗೆ ಬಂದಲ್ಲಿ, ಜನರು ತಮ್ಮ ವಿಚಿತ್ರ ಅನುಭವಗಳಿಂದಾದ ಮಾನಸಿಕ ಒತ್ತಡಕ್ಕೆ ಪರಿಹಾರ ಎಂದು ಮದ್ಯಸೇವನೆಗೆ ಮೊರೆ ಹೋಗುವುದು ನಿಲ್ಲಬಹುದು. ಮನೋನ್ಮಾದಕ್ಕೆ ಸೇವಿಸುವ ಔಷಧಿಗಳ ಬಳಕೆ ಕೂಡ ಕುಗ್ಗಬಹುದು.

ಕೊನೆಯ ಮಾತು
ನೆನಪು ಮಾನವನ ಜೀವನಕ್ಕೊಂದು ವರವಾದರೆ, ಕೆಟ್ಟ ನೆನಪು ಶಾಪವೂ ಹೌದು. ನೆನಪು ಮತ್ತು ಮರೆವು ಮಾನವ ಮಿದುಳಿನ ಚಟುವಟಿಕೆಗಳ ಮೇಲೆ ಅವಲಂಬಿತ. ಸೇವಿಸುವ ಆಹಾರ, ಜೀವನ ಕ್ರಮ, ವಾತಾವರಣ ಪ್ರಭಾವ, ಸಾಮಾಜಿಕ ಒತ್ತಡಗಳು ಮಾನವನ ನೆನಪು ಶಕ್ತಿ ಮಾಪಕಗಳೆಂದು ಹೇಳುವುದು ವಾಡಿಕೆ. ನೆನಪು-ಮರೆವಿಗಾಗಿ ಹತೋಟಿಗೆ ಔಷಧಿ ಸೇವಿಸುವುದು ಲಾಭದಾಯಕವಲ್ಲ. ನೆನಪು ವೃದ್ಧಿಸುವ ಔಷಧಿ ಅತಿ ಬುದ್ಧಿವಂತಿಕೆ ನೀಡುವುದಿಲ್ಲ. ಮರೆಯಬೇಕೆಂಬ ಉದ್ದೇಶದಿಂದ ಔಷಧಿ ಸೇವನೆ ಕೂಡಾ ತರವಲ್ಲ. ಸದ್ಯ ದೊರಕಿರುವ ಅಂಕಿ-ಅಂಶಗಳು ಇದನ್ನು ನಿಸ್ಸಂದೇಹವಾಗಿ ದೃಢಪಡಿಸಿವೆ. ಜಾಹೀರಾತುಗಳಿಗೆ ಮಾರುಹೋಗಿ, ಔಷಧಿ ಸೇವಿಸುವುದು ಸರಿಯಲ್ಲ; ಮರೆವಿಗೆ ಸೇವಿಸುವ ಔಷಧಿ ಮರೆವು ಹೋಗಲಾಡಿಸುವುದಿಲ್ಲ; ನೆನಪು ವೃದ್ಧಿಗೆ ಸೇವಿಸುವ ಔಷಧಿ ನಿರಂತರ ಪ್ರಭಾವ ಬೀರುತ್ತದೆ ಎನ್ನುವ ಖಾತರಿಯೂ ಇಲ್ಲ. ಇದು ಸದ್ಯಕ್ಕೆ ಸತ್ಯ !

Writer - ಡಾ. ಕರುಣಾಕರ ಬಂಗೇರ

contributor

Editor - ಡಾ. ಕರುಣಾಕರ ಬಂಗೇರ

contributor

Similar News