ಬಹರೈನ್: ಐಎಸ್‌ಎಫ್‌ನಿಂದ ಸಮಾವೇಶ

Update: 2018-04-18 12:56 GMT

ಬಹರೈನ್, ಎ.18: ಇಂಡಿಯನ್ ಸೋಶಿಯಲ್ ಫೋರಂ(ಐಎಸ್‌ಎಫ್) ಕರ್ನಾಟಕ ಘಟಕದ ವತಿಯಿಂದ ‘ಭಾರತದ ಅಲ್ಪಸಂಖ್ಯಾತರ ಸಮಕಾಲೀನ ಸಮಸ್ಯೆ ಮತ್ತು ಪರಿಹಾರ’ ಎಂಬ ಶೀರ್ಷಿಕೆಯಡಿ ಇತ್ತೀಚೆಗೆ ಮನಾಮ ಫುಡ್ ಸಿಟಿ ರೆಸ್ಟೋರೆಂಟ್‌ನಲ್ಲಿ ಸಮಾವೇಶ ಆಯೋಜಿಸಲಾಗಿತ್ತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಇಂಡಿಯಾ ಫ್ರಟರ್ನಿಟಿ ಫೋರಂ ಬಹರೈನ್ ಇದರ ಅಧ್ಯಕ್ಷ ಜಮಾಲ್ ಮೊಯ್ದಿನ್, ಭಾರತದ ಪ್ರಸಕ್ತ ಸನ್ನಿವೇಶ ಆತಂಕಕಾರಿಯಾಗಿದೆ. ಪುಟಾಣಿ ಬಾಲೆಯನ್ನು 8 ದಿನಗಳ ಕಾಲ ದೇವಸ್ಥಾನದಲ್ಲಿ ಕೂಡಿಹಾಕಿ ಬರ್ಬರವಾಗಿ ಅತ್ಯಾಚಾರಗೈದು ಹತ್ಯೆ ಮಾಡಿರುವಂತಹ ಅಮಾನವೀಯ ಕೃತ್ಯ ಜಮ್ಮುವಿನ ಕಥುವಾ ಎಂಬಲ್ಲಿ ನಡೆದಿದೆ. ಇಂತಹ ಮತಾಂಧ ಕಾಮುಕರ ಪರವಾಗಿ ಪ್ರತಿಭಟನೆ ಮತ್ತು ಸಂತ್ರಸ್ತೆಯ ಪರವಾಗಿ ವಾದ ಮಾಡದಂತೆ ಬಾರ್ ಕೌನ್ಸಿಲ್ ನೀಡಿರುವುದು ಅಕ್ಷಮ್ಯ. ಈ ರೀತಿಯಾಗಿ ಧರ್ಮಾಧರಿತವಾಗಿ ಅಪರಾಧಿಗಳಿಗೆ ರಕ್ಷಣೆ ಮತ್ತು ಸಹಾಯವನ್ನು ನೀಡುವುದು ಅತ್ಯಂತ ಖಂಡನಾರ್ಹ. ಇಂತಹ ತಾರತಮ್ಯ ಅನ್ಯಾಯವನ್ನು ದೇಶದ ಜನತೆ ಅರಿತು ಇಂತಹದ್ದರ ವಿರುದ್ಧ ಹೋರಾಟ ನಡೆಸಬೇಕು ಎಂದರು. ಇಂಡಿಯನ್ ಸೋಶಿಯಲ್ ಫೋರಂ ಕರ್ನಾಟಕ ಇದರ ಅಧ್ಯಕ್ಷ ಇರ್ಫಾನ್ ನಂದರಬೆಟ್ಟು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಯಾಗಿ ಇಂಡಿಯಾ ಫ್ರಟರ್ನಿಟಿ ಫೋರಂ ಕರ್ನಾಟಕ ಘಟಕದ ಅಧ್ಯಕ್ಷ ಮುಹಮ್ಮದ್ ಇರ್ಷಾದ್ ತುಂಬೆ ಮಾತನಾಡಿ, ದೇಶದಲ್ಲಿ ಮುಸ್ಲಿಮ್ ಸಮುದಾಯ ರಾಜಕಾರಣಿಗಳ ಕೈಗೊಂಬೆಯಾಗಿದೆ. ನಾವು ಕೇವಲ ಓಟ್ ಬ್ಯಾಂಕ್ ಆಗದೆ ಒಗ್ಗಟ್ಟಾಗಿ ಸಮುದಾಯದ ಸಮಸ್ಯೆಗಳ ಬಗ್ಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಲು ಇದು ಸಕಾಲ ಎಂದರು.

ಎಸ್‌ಡಿಪಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಇಲ್ಯಾಸ್ ಮುಹಮ್ಮದ್ ತುಂಬೆ ಮಾತನಾಡಿದರು.

ಇದೇ ಸಂದರ್ಭ ಐಎಸ್‌ಎಫ್‌ನ ನೂತನ ಪದಾಧಿಕಾರಿಗಳನ್ನು ಇಲ್ಯಾಸ್‌ಮುಹಮ್ಮದ್ ತುಂಬೆ ಶಾಲು ಹೊದಿಸಿ ಗೌರವಿಸಿದರು.

ನಝೀರ್ ಕಿನ್ಯಾ ಕಾರ್ಯಕ್ರಮ ನಿರೂಪಿಸಿದರು. ಮನ್ಸೂರ್ ಸ್ವಾಗತಿಸಿದರು. ಅಖ್ತರ್ ಬಜ್ಪೆ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News