ಸನ್‌ರೈಸರ್ಸ್ ಗೆ ಗೆಲುವಿನ ಓಟ ಮುಂದುವರಿಸುವ ಗುರಿ

Update: 2018-04-18 18:33 GMT

ಮೊಹಾಲಿ, ಎ.19: ಅಜೇಯ ಗೆಲುವಿನ ಓಟದೊಂದಿಗೆ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನ ಕಾಯ್ದುಕೊಂಡಿರುವ ಸನ್‌ರೈಸರ್ಸ್ ಹೈದರಾಬಾದ್ ತಂಡ ಗುರುವಾರ ನಡೆಯಲಿರುವ ಐಪಿಎಲ್ ಪಂದ್ಯದಲ್ಲಿ ಮೂರನೇ ಸ್ಥಾನದಲ್ಲಿರುವ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನು ಎದುರಿಸಲಿದೆ.

 ಕೇನ್ ವಿಲಿಯಮ್ಸನ್ ನಾಯಕತ್ವದ ಸನ್‌ರೈಸರ್ಸ್ ತಂಡ ಈ ತನಕ ಆಡಿರುವ ಎಲ್ಲ ಮೂರೂ ಪಂದ್ಯಗಳನ್ನು ಗೆದ್ದುಕೊಂಡಿದೆ. ಬೌಲರ್‌ಗಳ ಉತ್ತಮ ಪ್ರದರ್ಶನವೇ ಸನ್‌ರೈಸರ್ಸ್ ಗೆಲುವಿನ ಓಟಕ್ಕೆ ಕಾರಣವಾಗಿದೆ.

ಮತ್ತೊಂದೆಡೆ, ರವಿಚಂದ್ರನ್ ಅಶ್ವಿನ್ ನೇತೃತ್ವದ ಹೊಸ ಲುಕ್ ಪಡೆದಿರುವ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಬ್ಯಾಟಿಂಗ್ ವಿಭಾಗದಲ್ಲಿ ಆಕ್ರಮಣಕಾರಿಯಾಗಿದ್ದು, ಎದುರಾಳಿ ತಂಡದ ದಾಳಿಯನ್ನು ದಿಟ್ಟವಾಗಿ ಎದುರಿಸುತ್ತಾ ಬಂದಿದೆ.

 ಆತಿಥೇಯ ಪಂಜಾಬ್ ತಂಡ ಈತನಕ ಆಡಿರುವ 3 ಪಂದ್ಯಗಳ ಪೈಕಿ ಎರಡರಲ್ಲಿ ಜಯ ಸಾಧಿಸಿದೆ.

ಹೈದರಾಬಾದ್ ಬೌಲಿಂಗ್ ವಿಭಾಗದಲ್ಲಿ ಸ್ಟಾರ್ ಬೌಲರ್‌ಗಳಿಲ್ಲ. ಆದಾಗ್ಯೂ ಭುವನೇಶ್ವರ ಕುಮಾರ್, ರಶೀದ್ ಖಾನ್, ಬಿಲ್ಲಿ ಸ್ಟಾನ್‌ಲೇಕ್, ಸಿದ್ದಾರ್ಥ ಕೌಲ್, ಶಾಕಿಬ್ ಅಲ್ ಹಸನ್ ಹಾಗೂ ಸಂದೀಪ್ ಶರ್ಮ ಎದುರಾಳಿ ತಂಡದ ದಾಂಡಿಗರನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾಗಿದ್ದಾರೆ.

ಹೈದರಾಬಾದ್ ಬ್ಯಾಟಿಂಗ್‌ನಲ್ಲಿ ವೃದ್ಧಿಮಾನ್ ಸಹಾ, ಕೇನ್ ವಿಲಿಯಮ್ಸನ್, ಶಿಖರ್ ಧವನ್ ಹಾಗೂ ಮನೀಷ್ ಪಾಂಡೆ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಶಾಕಿಬ್, ದೀಪಕ್ ಹೂಡ ಹಾಗೂ ಯೂಸುಫ್ ಪಠಾಣ್ ಕೂಡ ಕಾಣಿಕೆ ನೀಡುತ್ತಿದ್ದಾರೆ. ಹೈದರಾಬಾದ್ ದಾಂಡಿಗರು ಇನ್ನಷ್ಟೇ ದೊಡ್ಡ ಮೊತ್ತ ಗಳಿಸಬೇಕಾಗಿದೆ.

ಮುಂಬೈ ವಿರುದ್ಧ 148 ರನ್ ಗುರಿ ಪಡೆದಿದ್ದ ಹೈದರಾಬಾದ್ ಕೊನೆಯ ಎಸೆತದಲ್ಲಿ ಕೇವಲ 1 ವಿಕೆಟ್‌ನಿಂದ ಜಯ ಸಾಧಿಸಿದೆ. ಟೂರ್ನಿಯ ಮೊದಲ ಪಂದ್ಯದಲ್ಲಿ ಹೈದರಾಬಾದ್ ಬೌಲರ್‌ಗಳು ರಾಜಸ್ಥಾನ ರಾಯಲ್ಸ್ ತಂಡವನ್ನು 9 ವಿಕೆಟ್‌ಗೆ 125 ರನ್‌ಗೆ ನಿಯಂತ್ರಿಸಿದ್ದರು.

ಆರಂಭಿಕ ಆಟಗಾರ ಶಿಖರ್ ಧವನ್(78) ಹಾಗೂ ಕೇನ್ ವಿಲಿಯಮ್ಸನ್(ಔಟಾಗದೆ 36)ನೆರವಿನಿಂದ 1 ವಿಕೆಟ್ ನಷ್ಟಕ್ಕೆ 127 ರನ್ ಗಳಿಸಿದ್ದ ಹೈದರಾಬಾದ್ ಸುಲಭ ಜಯ ಸಾಧಿಸಿತ್ತು.

ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಪಂದ್ಯದಲ್ಲೂ ಹೈದರಾಬಾದ್ ಬೌಲರ್‌ಗಳು ಮತ್ತೊಮ್ಮೆ ಉತ್ತಮ ಪ್ರದರ್ಶನ ನೀಡಿದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ಕೆಕೆಆರ್ ತಂಡವನ್ನು 8 ವಿಕೆಟ್‌ಗೆ 138 ರನ್‌ಗೆ ನಿಯಂತ್ರಿಸಿದರು. ವೇಗದ ಬೌಲರ್ ಭುವನೇಶ್ವರ ಕುಮಾರ್ ಮೂರು ವಿಕೆಟ್‌ಗಳನ್ನು ಕಬಳಿಸಿ ಗಮನ ಸೆಳೆದರು.

 ಮತ್ತೊಂದೆಡೆ, ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಕಳೆದ ಪಂದ್ಯದಲ್ಲಿ ಚೆನ್ನೈ ತಂಡವನ್ನು 4 ರನ್‌ನಿಂದ ಸೋಲಿಸಿ ಆತ್ಮವಿಶ್ವಾಸ ವೃದ್ದಿಸಿಕೊಂಡಿದೆ. ತವರು ನೆಲದಲ್ಲಿ 197 ರನ್ ಗಳಿಸಿ ಜಯ ಸಾಧಿಸಲು ಯಶಸ್ವಿಯಾಗಿದೆ. ಪಂಜಾಬ್‌ನ ಪರ ಕ್ರಿಸ್ ಗೇಲ್ 33 ಎಸೆತಗಳಲ್ಲಿ 63 ರನ್ ಗಳಿಸಿದ್ದಲ್ಲದೆ ಕೆ.ಎಲ್. ರಾಹುಲ್‌ರೊಂದಿಗೆ 96 ರನ್ ಜೊತೆಯಾಟ ನಡೆಸಿ ತಾನೀಗಲೂ ಎದುರಾಳಿ ತಂಡದ ಬೌಲರ್‌ಗಳಿಗೆ ಸವಾಲಾಗಬಲ್ಲೆ ಎಂದು ತೋರಿಸಿಕೊಟ್ಟಿದ್ದರು. ಆರಂಭಿಕ ಆಟಗಾರ ರಾಹುಲ್, ಮಯಾಂಕ್ ಅಗರವಾಲ್, ಕರುಣ್ ನಾಯರ್ ಹಾಗೂ ಅಶ್ವಿನ್ ಬ್ಯಾಟಿಂಗ್‌ನಲ್ಲಿ ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ಆದರೆ, ಪ್ರಮುಖ ದಾಂಡಿಗ ಯುವರಾಜ್ ಸಿಂಗ್ 3 ಪಂದ್ಯಗಳಲ್ಲಿ ಕೇವಲ 36 ರನ್(12,4,20)ಗಳಿಸಿದ್ದಾರೆ. ಇದು ಪಂಜಾಬ್ ತಂಡಕ್ಕೆ ಚಿಂತೆ ಉಂಟುಮಾಡಿದೆ.

ಪಂಜಾಬ್ ತಂಡ ತವರು ನೆಲದಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ತಂಡವನ್ನು ಮಣಿಸುವ ಮೂಲಕ ಈ ಋತುವಿನಲ್ಲಿ ತನ್ನ ಅಭಿಯಾನ ಆರಂಭಿಸಿದೆ. ಆದರೆ, ಬೆಂಗಳೂರಿನಲ್ಲಿ ಆರ್‌ಸಿಬಿ ವಿರುದ್ಧ ಪಂದ್ಯವನ್ನು ಸೋತಿತ್ತು. ಪಂಜಾಬ್‌ನ 17ರ ಹರೆಯದ ಸ್ಪಿನ್ನರ್ ಮುಜೀಬ್-ವುರ್-ರಹ್ಮಾನ್ ಉತ್ತಮ ಬೌಲಿಂಗ್‌ನಿಂದ ಗಮನ ಸೆಳೆಯುತ್ತಿದ್ದು, ಆರ್‌ಸಿಬಿ ವಿರುದ್ಧ ಪಂದ್ಯದಲ್ಲಿ ನಾಯಕ ವಿರಾಟ್ ಕೊಹ್ಲಿ ವಿಕೆಟ್‌ನ್ನು ಕಬಳಿಸಿದ್ದರು. ಅಶ್ವಿನ್‌ರಲ್ಲದೆ, ಮೋಹಿತ್ ಶರ್ಮ, ಮುಜೀಬ್, ಅಕ್ಷರ್ ಪಟೇಲ್ ಹಾಗೂ ಆ್ಯಂಡ್ರೂ ಟೈ ಪಂಜಾಬ್‌ನ ಬೌಲಿಂಗ್ ದಾಳಿ ಮುನ್ನಡೆಸುತ್ತಿದ್ದಾರೆ.

ತಂಡಗಳು

►ಸನ್‌ರೈಸರ್ಸ್ ಹೈದರಾಬಾದ್: ಕೇನ್ ವಿಲಿಯಮ್ಸನ್(ನಾಯಕ), ಭುವನೇಶ್ವರ ಕುಮಾರ್, ಮನೀಶ್ ಪಾಂಡೆ, ರಶೀದ್ ಖಾನ್, ಶಿಖರ್ ಧವನ್, ವೃದ್ದಿಮಾನ್ ಸಹಾ, ಸಂದೀಪ್ ಶರ್ಮ, ಶಾಕಿಬ್ ಅಲ್ ಹಸನ್, ಕಾರ್ಲೊಸ್ ಬ್ರಾತ್‌ವೇಟ್, ಯೂಸುಫ್ ಪಠಾಣ್, ಮುಹಮ್ಮದ್ ನಬಿ, ಅಲೆಕ್ಸ್ ಹೇಲ್ಸ್, ಕ್ರಿಸ್ ಜೋರ್ಡನ್, ಬಿಲ್ಲಿ ಸ್ಟಾನ್‌ಲೇಕ್, ಸಿದ್ದಾರ್ಥ್ ಕೌಲ್, ದೀಪಕ್ ಹೂಡ, ಸೈಯದ್ ಖಲೀಲ್ ಅಹ್ಮದ್, ಶ್ರೀವಾಸ್ತವ ಗೋಸ್ವಾಮಿ, ಬಾಸಿಲ್ ಥಾಂಪಿ, ನಟರಾಜನ್, ಬಿಪುಲ್ ಶರ್ಮ, ಮೆಹದಿ ಹಸನ್, ರಿಕಿ ಭುಯ್, ಸಚಿನ್ ಬೇಬಿ, ತನ್ಮಯ್ ಅಗರವಾಲ್.

►ಕಿಂಗ್ಸ್ ಇಲೆವೆನ್ ಪಂಜಾಬ್: ಕೆ.ಎಲ್.ರಾಹುಲ್, ಮಯಾಂಕ್ ಅಗರವಾಲ್, ಆ್ಯರೊನ್ ಫಿಂಚ್, ಯುವರಾಜ್ ಸಿಂಗ್, ಕರುಣ್ ನಾಯರ್, ಡೇವಿಡ್ ಮಿಲ್ಲರ್, ಮಾರ್ಕಸ್ ಸ್ಟೋನಿಸ್, ಅಕ್ಷರ್ ಪಟೇಲ್, ಆರ್.ಅಶ್ವಿನ್(ನಾಯಕ), ಆ್ಯಂಡ್ರೂ ಟೈ, ಮೋಹಿತ್ ಶರ್ಮ, ಮುಜೀಬ್ ರಹ್ಮಾನ್ ಹಾಗೂ ಕ್ರಿಸ್ ಗೇಲ್.

ಪಂದ್ಯದ ಸಮಯ: ರಾತ್ರಿ 8:00 ಗಂಟೆಗೆ

 

 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News