ದೇಶದಲ್ಲಿ ಬಾಕಿ ಇರುವ ಅತ್ಯಾಚಾರ ಪ್ರಕರಣಗಳ ಸಂಖ್ಯೆ ಕೇಳಿದರೆ ನೀವು ಬೆಚ್ಚಿ ಬೀಳುವಿರಿ.

Update: 2018-04-19 15:18 GMT

ಹೊಸದಿಲ್ಲಿ, ಎ. 19: ಹೊಸದಿಲ್ಲಿಯಲ್ಲಿ 2012ರಲ್ಲಿ ನಿರ್ಭಯ ಅತ್ಯಾಚಾರ ಪ್ರಕರಣದ ಬಳಿಕ ದೇಶದಲ್ಲಿ ತ್ವರಿತ ವಿಚಾರಣಾ ನ್ಯಾಯಾಲಯವನ್ನು ಅಸ್ತಿತ್ವಕ್ಕೆ ತರಲಾಯಿತು ಹಾಗೂ ಮರಣದಂಡನೆ ಸೇರಿದಂತೆ ಕಠಿಣ ಕಾನೂನು ತರಲಾಯಿತು. ಆದರೆ, ಅತ್ಯಾಚಾರ ಪ್ರಕರಣಗಳ ಅಂಕಿ-ಅಂಶ ಗಮನಿಸಿದಾಗ ಯಾವುದೇ ಇಳಿಕೆ ಕಂಡು ಬಂದಿಲ್ಲ. ಬದಲಾಗಿ ಇನ್ನಷ್ಟು ಹೆಚ್ಚಾಗಿವೆ.

 ಜಮ್ಮು ಹಾಗೂ ಕಾಶ್ಮೀರದ ಕಥುವಾ ಪಟ್ಟಣದಲ್ಲಿ 8 ವರ್ಷದ ಬಾಲಕಿಯ ಸಾಮೂಹಿಕ ಅತ್ಯಾಚಾರ, ಕೊಲೆ; ಉತ್ತರಪ್ರದೇಶದ ಉನ್ನಾವೋ ಜಿಲ್ಲೆಯಲ್ಲಿ ಬಾಲಕಿಯ ಮೇಲೆ ಬಿಜೆಪಿ ಶಾಸಕ ನಡೆಸಿದ ಅತ್ಯಾಚಾರ ಹಾಗೂ ಅನಂತರ ನಡೆದ ಕೆಲವು ಅತ್ಯಾಚಾರಗಳ ಬಗ್ಗೆ ದೇಶಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿವೆ. ಈ ನಡುವೆ ‘ರಾಯ್ಟರ್ಸ್‌’ ಈ ಬಗ್ಗೆ ಅಂಕಿ-ಅಂಶಗಳನ್ನು ಸಂಗ್ರಹಿಸಿದೆ.

 ಅಂಕಿ-ಅಂಶಗಳ ಪ್ರಕಾರ ಅತ್ಯಾಚಾರ ಪ್ರಕರಣಗಳು 2012ರಿಂದ ಶೇ. 60ರಷ್ಟು ಏರಿಕೆಯಾಗಿದ್ದು, 2016ರಲ್ಲಿ 40,000ಕ್ಕೆ ತಲುಪಿದೆ. ಇದರಲ್ಲಿ ಮಕ್ಕಳ ಅತ್ಯಾಚಾರ ಪ್ರಕರಣಗಳು ಶೇ. 40 ಹಾಗೂ ಅತ್ಯಾಚಾರ ಪ್ರಕರಣಗಳಲ್ಲಿ ಬಂಧನವಾಗಿ ದೋಷಿ ಎಂದು ಪರಿಗಣಿತರಾದವರು ಶೇ. 25.

ನ್ಯಾಯಾಲಯಗಳಲ್ಲಿ ಅತ್ಯಾಚಾರಕ್ಕೆ ಸಂಬಂಧಿಸಿ 2012ರಲ್ಲಿ 10 ಸಾವಿರ ಪ್ರಕರಣಗಳು ಬಾಕಿ ಉಳಿದಿದ್ದುವು. ಅದು 2016ರ ಅಂತ್ಯಕ್ಕೆ 133,000ಕ್ಕೂ ಹೆಚ್ಚು ಏರಿಕೆಯಾಗಿದೆ ಎಂದು ನ್ಯಾಶನಲ್ ಕ್ರೈಮ್ ರೆಕಾರ್ಡ್ ಬ್ಯುರೊ ಅಂಕಿ-ಅಂಶ ಹೇಳಿದೆ. ಈ ಅವಧಿಯಲ್ಲಿ ಪ್ರತಿ ವರ್ಷ ಶೇ. 85ರಷ್ಟು ಅತ್ಯಾಚಾರ ಪ್ರಕರಣಗಳು ಬಾಕಿ ಉಳಿದಿವೆ. ಇತರ ಅಪರಾಧಗಳಿಗೆ ಹೋಲಿಸಿದರೆ ಮಹಿಳೆಯರ ಮೇಲಿನ ಅಪರಾಧಗಳಿಗೆ ಶಿಕ್ಷೆಯಾದ ಪ್ರಮಾಣ ತುಂಬಾ ಕಡಿಮೆ.

‘‘ಸರಕಾರ ನೂರಾರು ಕಾನೂನುಗಳನ್ನು ರೂಪಿಸುತ್ತಿದೆ ಹಾಗೂ ಜಾರಿಗೆ ತರಲು ವಿಫಲವಾಗುತ್ತಿದೆ’’ ಎಂದು ಸುಪ್ರೀಂ ಕೋರ್ಟ್‌ನ ಹಿರಿಯ ನ್ಯಾಯವಾದಿ ದುಷ್ಯಂತ ದವೆ ಹೇಳಿದ್ದಾರೆ.

ಮುಚ್ಚಿ ಹೋಗುತ್ತಿರುವ ಪ್ರಕರಣಗಳು

2012 ಹಾಗೂ 2016ರ ನಡುವೆ ಪ್ರತಿವರ್ಷ ದಾಖಲಾದ ಒಟ್ಟು ಅತ್ಯಾಚಾರ ಪ್ರಕರಣಗಳಲ್ಲಿ ಮುಕ್ಕಾಲು ಭಾಗ ಪ್ರಕರಣಗಳ ತನಿಖೆ ಇನ್ನೂ ಪೂರ್ಣಗೊಂಡಿಲ್ಲ. ಇದಕ್ಕೆ ಪೊಲೀಸ್ ಇಲಾಖೆಯಲ್ಲಿ ಹುದ್ದೆಗಳು ಖಾಲಿ ಬಿದ್ದಿರುವುದು ಕೂಡ ಒಂದು ಕಾರಣ, ಕಳೆದ ತಿಂಗಳು ಸರಕಾರ ಸಂಸತ್ತಿನಲ್ಲಿ ಸುಮಾರು 10 ಲಕ್ಷ ಅಧಿಕಾರಿಗಳನ್ನು ಮಂಜೂರು ಮಾಡುವುದಾಗಿ ತಿಳಿಸಿತ್ತು. ಆದರೆ, ಇದರಲ್ಲಿ ಕಾಲು ಭಾಗ ಇನ್ನೂ ಹಾಗೇ ಉಳಿದಿದೆ. ಕೆಲವು ಪ್ರಕರಣಗಳಲ್ಲಿ ಪೊಲೀಸರು ಪ್ರಭಾವಕ್ಕೆ ಒಳಗಾಗುವುದು ಪ್ರಕರಣ ಮುಚ್ಚಿಹೋಗಲು ಕಾರಣವಾಗುತ್ತಿದೆ ಎಂದು ಆರೋಪಿಸಲಾಗುತ್ತಿದೆ.

ಮರಣದಂಡನೆ

12 ವರ್ಷದ ಕೆಳಗಿನ ಬಾಲಕಿಯ ಮೇಲೆ ಅತ್ಯಾಚಾರ ನಡೆದರೆ ಆರೋಪಿಗೆ ಮರಣದಂಡನೆ ವಿಧಿಸಬೇಕು ಎಂದು ಇತ್ತೀಚೆಗೆ ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವೆ ಮೇನಕಾ ಗಾಂಧಿ ಹೇಳಿದ್ದರು. ಪ್ರಸ್ತುತ 2012ರ ದಿಲ್ಲಿ ಅತ್ಯಾಚಾರ ಪ್ರಕರಣದ ಆರೋಪಿಗಳಿಗೆ ಮರಣದಂಡನೆಯನ್ನೇ ಕಾಯ್ದಿರಿಸಿದೆ. ದಿಲ್ಲಿ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣದಲ್ಲಿ 5 ಮಂದಿಯನ್ನು ಆಪರಾಧಿ ಎಂದು ಪರಿಗಣಿಸಲಾಗಿತ್ತು. ಇವರಲ್ಲಿ ನಾಲ್ವರಿಗೆ ಮರಣದಂಡನೆ ವಿಧಿಸಲಾಗಿತ್ತು. ಓರ್ವ ಅಪ್ರಾಪ್ತ ಎನ್ನುವ ಕಾರಣಕ್ಕೆ ಬಿಡುಗಡೆ ಮಾಡಲಾಗಿತ್ತು. ಕಳೆದ ವರ್ಷ ಈ ನಾಲ್ವರ ಮನವಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿತ್ತು. ಈಗಲೂ ಇವರಿಗೆ ಮರಣದಂಡನೆ ಆಗಿಲ್ಲ. 2016ನ್ನು ಗಣನೆಗೆ ತೆಗೆದುಕೊಂಡರೆ, ನ್ಯಾಯಾಲಯದಲ್ಲಿರುವ ಮಕ್ಕಳ ಮೇಲಿನ ಲೈಂಗಿಕ ಕಿರುಕುಳದ ಪ್ರಕರಣಗಳ ವಿಚಾರಣೆ ಪೂರ್ಣಗೊಳ್ಳಲು ಎರಡು ದಶಕಗಳೇ ಬೇಕಾದೀತು ಎಂದು ನೋಬೆಲ್ ಪ್ರಶಸ್ತಿ ವಿಜೇತ ಕೈಲಾಸ್ ಸತ್ಯಾರ್ಥಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News