ಗೆಲುವಿನ ಹಾದಿಗೆ ಮರಳಲು ಚೆನೈ-ರಾಜಸ್ಥಾನ ಗಮನ

Update: 2018-04-19 18:46 GMT

ಪುಣೆ, ಎ.19: 2013ರ ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ಸಿಲುಕಿ ಎರಡು ವರ್ಷ ನಿಷೇಧಕ್ಕೆ ಒಳಗಾಗಿ ಈ ವರ್ಷದ ಐಪಿಎಲ್‌ನಲ್ಲಿ ವಾಪಸಾಗಿರುವ ರಾಜಸ್ಥಾನ ರಾಯಲ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡ 11ನೇ ಆವೃತ್ತಿಯ ಐಪಿಎಲ್‌ನಲ್ಲಿ ಮೊದಲ ಬಾರಿ ಮುಖಾಮುಖಿಯಾಗುತ್ತಿದ್ದು, ಗೆಲುವಿನ ಹಾದಿಗೆ ಮರಳುವ ವಿಶ್ವಾಸದಲ್ಲಿವೆೆ.

ಎರಡರಲ್ಲಿ ಜಯ, ಮತ್ತೆರಡರಲ್ಲಿ ಸೋಲನುಭವಿಸಿರುವ ರಾಜಸ್ಥಾನ ರಾಯಲ್ಸ್ ತಂಡ ಒಟ್ಟು 4 ಅಂಕ ಗಳಿಸಿ ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ. ಮೂರು ಪಂದ್ಯಗಳಲ್ಲಿ ಎರಡರಲ್ಲಿ ಜಯ ಸಾಧಿಸಿರುವ ಚೆನ್ನೈ ತಂಡ ಕೂಡ ನಾಲ್ಕಂಕ ಗಳಿಸಿದೆ. ಉತ್ತಮ ರನ್‌ರೇಟ್ ಹಿನ್ನೆಲೆಯಲ್ಲಿ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ.

ನೂತನ ನಾಯಕ ಅಜಿಂಕ್ಯ ರಹಾನೆ ನೇತೃತ್ವದಲ್ಲಿ ರಾಜಸ್ಥಾನ ಟೂರ್ನಿಯಲ್ಲಿ ಕಳಪೆ ಆರಂಭ ಪಡೆದಿತ್ತು. ಆದರೆ, ಸತತ ಎರಡು ಪಂದ್ಯಗಳಲ್ಲಿ ಜಯ ಸಾಧಿಸಿ ಗೆಲುವಿನ ಹಳಿಗೆ ಮರಳಿತ್ತು. ಬುಧವಾರ ತವರು ನೆಲದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ 7 ವಿಕೆಟ್‌ಗಳಿಂದ ಸೋಲುವ ಮೂಲಕ ಮತ್ತೆ ಹಿನ್ನಡೆ ಅನುಭವಿಸಿದೆ.

ಜೈಪುರದ ಮಂದಗತಿಯ ಪಿಚ್‌ನಲ್ಲಿ ರಹಾನೆ ಬಳಗ ದೊಡ್ಡ ಜೊತೆಯಾಟ ಕಟ್ಟಲು ವಿಫಲವಾಯಿತು. ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 160 ರನ್ ಗಳಿಸಿತ್ತು. ಈ ಮೊತ್ತವನ್ನು ಕೆಕೆಆರ್ 3 ವಿಕೆಟ್‌ನಷ್ಟದಲ್ಲಿ ಬೆನ್ನಟ್ಟಿತು. ರಾಜಸ್ಥಾನದ ಪಾಳಯದಲ್ಲಿ ಸಂಜು ಸ್ಯಾಮ್ಸನ್ ಬ್ಯಾಟಿಂಗ್ ಸ್ಟಾರ್ ಆಗಿದ್ದಾರೆ. ಈ ತನಕ ಒಟ್ಟು 185 ರನ್ ಗಳಿಸಿರುವ ಸ್ಯಾಮ್ಸನ್ ಗರಿಷ್ಠ 92 ರನ್ ಗಳಿಸಿದ್ದಾರೆ. ಆದರೆ, ಸಂಜುಗೆ ತಂಡದ ಉಳಿದ ದಾಂಡಿಗರಿಂದ ಬೆಂಬಲ ಲಭಿಸುತ್ತಿಲ್ಲ.

ರಾಜಸ್ಥಾನ ಬೌಲಿಂಗ್ ವಿಭಾಗವನ್ನು ಕನ್ನಡಿಗ ಕೆ. ಗೌತಮ್ ಹಾಗೂ ಬೆನ್ ಲಾಫ್ಲಿನ್ ಮುನ್ನಡೆಸುತ್ತಿದ್ದಾರೆ. 12.5 ಕೋ.ರೂ.ಗೆ ರಾಜಸ್ಥಾನ ತಂಡದ ಪಾಲಾಗಿದ್ದ ಇಂಗ್ಲೆಂಡ್ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಈತನಕ ನಿರೀಕ್ಷಿತ ಪ್ರದರ್ಶನ ನೀಡಿಲ್ಲ.

ಎರಡು ಬಾರಿಯ ಚಾಂಪಿಯನ್ ಚೆನ್ನೈ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹಾಗೂ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಸತತ ಜಯ ಸಾಧಿಸುವುದರೊಂದಿಗೆ ಈ ವರ್ಷದ ಐಪಿಎಲ್‌ನಲ್ಲಿ ತನ್ನ ಅಭಿಯಾನವನ್ನು ಭರ್ಜರಿಯಾಗಿ ಆರಂಭಿಸಿತ್ತು.

ಮುಂಬೈ ಇಂಡಿಯನ್ಸ್ ವಿರುದ್ಧ ಆಡಿದ ತನ್ನ ಮೊದಲ ಪಂದ್ಯದಲ್ಲಿ ಚೆನ್ನೈ ಸೋಲಿನ ಸುಳಿಯಲ್ಲಿತ್ತು. ಆಗ 30 ಎಸೆತಗಳಲ್ಲಿ 68 ರನ್ ಗಳಿಸಿದ ಡ್ವೇಯ್ನ್ ಬ್ರಾವೊ ತಂಡವನ್ನು ಆಧರಿಸಿದರು. ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ರನ್ ಚೇಸಿಂಗ್ ವೇಳೆ ಸ್ಯಾಮ್ ಬಿಲ್ಲಿಂಗ್ ತಂಡಕ್ಕೆ ಆಸರೆಯಾಗಿದ್ದರು.

ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧದ ಕಳೆದ ಪಂದ್ಯದಲ್ಲಿ ಗೆಲುವಿಗೆ 198 ರನ್ ಗುರಿ ಪಡೆದಿದ್ದ ಚೆನ್ನೈ ತಂಡವನ್ನು ಅಂಬಟಿ ರಾಯುಡು(49) ಹಾಗೂ ಎಂ.ಎಸ್. ಧೋನಿ(79)ಗೆಲುವಿನ ಸನಿಹ ಕೊಂಡೊಯ್ದಿದ್ದರು. ಅಂತಿಮವಾಗಿ ಚೆನ್ನೈ ಕೇವಲ 4 ರನ್‌ನಿಂದ ವೀರೋಚಿತ ಸೋಲುಂಡಿತ್ತು.

ಬೌಲರ್‌ಗಳ ಪೈಕಿ ಶೇನ್ ವ್ಯಾಟ್ಸನ್ ಹಾಗೂ ಶಾರ್ದೂಲ್ ಠಾಕೂರ್ ಚೆನ್ನೈನ ವೇಗದ ದಾಳಿ ಮುನ್ನಡೆಸಲಿದ್ದಾರೆ. ಈ ಇಬ್ಬರು ಕ್ರಮವಾಗಿ 5 ಹಾಗೂ 3 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಇಮ್ರಾನ್ ತಾಹಿರ್ ಲೆಗ್ ಬ್ರೇಕ್ ಗೂಗ್ಲಿಗಳ ಮೂಲಕ ಎದುರಾಳಿಗೆ ಸವಾಲಾಗುತ್ತಿದ್ದಾರೆ.

ಪಂದ್ಯದ ಸಮಯ: ರಾತ್ರಿ 8:00 ಗಂಟೆಗೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News