ಗೀತಾಗೆ ಗಂಡು ಹುಡುಕುತ್ತಿರುವ ಸುಷ್ಮಾ ಸ್ವರಾಜ್!

Update: 2018-04-20 04:01 GMT

ಹೊಸದಿಲ್ಲಿ, ಎ.20: ಸುಮಾರು ಹದಿನೈದು ವರ್ಷಗಳ ಕಾಲ ಪಾಕಿಸ್ತಾನದಲ್ಲಿ ವಾಸವಿದ್ದು, 2016ರಲ್ಲಿ ಭಾರತಕ್ಕೆ ಮರಳಿದ ಗೀತಾಗೆ ವಿದೇಶಾಂಗ ವ್ಯವಹಾರಗಳ ಖಾತೆ ಸಚಿವೆ ಗಂಡು ಹುಡುಕುತ್ತಿದ್ದಾರೆ!

ವಾಕ್ ಮತ್ತು ಶ್ರವಣ ದೋಷವಿರುವ ಗೀತಾ, ಬಾಲ್ಯದಲ್ಲೇ ತಪ್ಪಿಸಿಕೊಂಡು ಆಕಸ್ಮಿಕವಾಗಿ ಪಾಕಿಸ್ತಾನ ಸೇರಿದ್ದಳು. ಪಾಕಿಸ್ತಾನಿ ದತ್ತಿ ಸಂಸ್ಥೆಯಾದ ಎಧಿ ಫೌಂಡೇಶನ್‌ನ ಆಶ್ರಯದಲ್ಲಿ ಬೆಳೆದಿದ್ದಳು. ಭಾರತಕ್ಕೆ ಮರಳಿದ ಬಳಿಕ ಆಕೆಯನ್ನು ಕುಟುಂಬದ ಜತೆ ಸೇರಿಸುವ ಪ್ರಯತ್ನ ನಡೆದಿದ್ದು, ಇದುವರೆಗೆ ಫಲ ನೀಡಿಲ್ಲ. ಹಲವು ಮಂದಿ ಗೀತಾ ತಮ್ಮ ಮಗಳು ಎಂದು ಹೇಳಿಕೊಂಡು ಮುಂದೆ ಬಂದಿದ್ದು, ಆಕೆ ಯಾರನ್ನೂ ಗುರುತಿಸಿಲ್ಲ.

"ಸುಷ್ಮಾ ಸ್ವರಾಜ್, ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಜತೆಗೆ ಚರ್ಚಿಸಿ 2017ರ ಅಕ್ಟೋಬರ್‌ನಲ್ಲಿ ಗೀತಾಳ ವಿವಾಹದ ಪ್ರಸ್ತಾವ ಘೋಷಿಸಿದ್ದರು. ಎಪ್ರಿಲ್ 8ರಂದು ಅಪೇಕ್ಷಿತ ವರರು ಸುಷ್ಮಾ ಅವರ ದಿಲ್ಲಿ ನಿವಾಸದಲ್ಲಿ ಹೆಣ್ಣು ನೋಡಲು ಆಗಮಿಸಿದ್ದರು" ಎಂದು ಅಧಿಕಾರಿಯೊಬ್ಬರು ಬಹಿರಂಗಪಡಿಸಿದ್ದಾರೆ.

"ಎಲ್ಲ ಪ್ರಸ್ತಾವಗಳನ್ನು ಗೀತಾ ತಿರಸ್ಕರಿಸಿದ್ದಾಳೆ. ಸುಷ್ಮಾ ಆ ಬಳಿಕ ಇನ್ನೂ ಹೆಚ್ಚಿನ ಶೋಧನೆ ನಡೆಸಿ, ಆಕಾಂಕ್ಷಿ ವರರನ್ನು ಕರೆತರುವಂತೆ ಸೂಚಿಸಿದ್ದಾರೆ" ಎಂದು ವಿವರಿಸಿದ್ದಾರೆ.

ಭಾರತದಿಂದ ಲಾಹೋರ್‌ಗೆ ತೆರಳಿದ ರೈಲಿನ ಮೂಲಕ ಗೀತಾ ಪಾಕಿಸ್ತಾನ ಸೇರಿದ್ದಳು. ಈಕೆಯನ್ನು ಪತ್ತೆ ಮಾಡಿದ ಅಧಿಕಾರಿಗಳು ಸರ್ಕಾರಿ ಆಶ್ರಯ ಕಲ್ಪಿಸಿದ್ದರು. ಆದರೆ ಪದೇಪದೇ ತಪ್ಪಿಸಿಕೊಳ್ಳಲು ಯತ್ನಿಸಿದ್ದರಿಂದ ಮತ್ತು ಸಿಬ್ಬಂದಿ ಜತೆ ತಗಾದೆ ತೆಗೆಯುತ್ತಿದ್ದುದರಿಂದ ಬೇರೆಬೇರೆ ಕಡೆಗೆ ಆಕೆಯನ್ನು ಸ್ಥಳಾಂತರಿಸಲಾಗಿತ್ತು. ಬಳಿಕ ಕರಾಚಿ ಮೂಲದ ಎಧಿ ಫೌಂಡೇಶನ್ ಆಕೆಯನ್ನು ಸೇರಿಸಿಕೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News