ಬೆಂಗಳೂರಿಗೆ ಡೆಲ್ಲಿ ಡೆವಿಲ್ಸ್ ಎದುರಾಳಿ

Update: 2018-04-20 18:34 GMT

ಬೆಂಗಳೂರು, ಎ.20: ಐಪಿಎಲ್ ಅಂಕಪಟ್ಟಿಯಲ್ಲಿ ಕೆಳ ಸ್ಥಾನದಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಡೆಲ್ಲಿ ಡೇರ್ ಡೆವಿಲ್ಸ್ ತಂಡಗಳು ಶನಿವಾರ ಇಲ್ಲಿ ಮುಖಾಮುಖಿಯಾಗಲಿವೆ.

ಟೂರ್ನಿಯಲ್ಲಿ ಈವರೆಗೆ ತಲಾ ನಾಲ್ಕು ಪಂದ್ಯಗಳನ್ನು ಆಡಿರುವ ಆರ್‌ಸಿಬಿ ಹಾಗೂ ಡೆಲ್ಲಿ ತಂಡ ಕೇವಲ ಒಂದು ಪಂದ್ಯದಲ್ಲಿ ಜಯ ಸಾಧಿಸಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿವೆ.

ಕಳೆದ ಪಂದ್ಯದಲ್ಲಿ ಕ್ರಮವಾಗಿ ಮುಂಬೈ ಹಾಗೂ ಕೋಲ್ಕತಾ ವಿರುದ್ಧ ಸೋತಿರುವ ಆರ್‌ಸಿಬಿ ಹಾಗೂ ಡೆಲ್ಲಿ ತಂಡಗಳಿಗೆ ನಾಳೆಯ ಪಂದ್ಯ ಅತ್ಯಂತ ನಿರ್ಣಾಯಕವಾಗಿದೆ.

ವಿರಾಟ್ ಕೊಹ್ಲಿ ನೇತೃತ್ವದ ಆರ್‌ಸಿಬಿ ತಂಡ ಕೆಕೆಆರ್ ವಿರುದ್ಧ ಆಡಿದ ತನ್ನ ಮೊದಲ ಪಂದ್ಯದಲ್ಲಿ ಸೋಲುಂಡಿತ್ತು. ತನ್ನ 2ನೇ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಜಯ ಸಾಧಿಸಿತ್ತು. ಆದರೆ, ಕಳೆದೆರಡು ಪಂದ್ಯಗಳಲ್ಲಿ ರಾಜಸ್ಥಾನ ರಾಯಲ್ಸ್ ಹಾಗೂ ಮುಂಬೈ ಇಂಡಿಯನ್ಸ್ ವಿರುದ್ಧ ಸೋಲುಂಡಿದೆ.

ಆರ್‌ಸಿಬಿ ಕಳೆದ ಎರಡು ಪಂದ್ಯಗಳಲ್ಲಿ ಎದುರಾಳಿಗೆ 200ಕ್ಕೂ ಅಧಿಕ ರನ್ ಬಿಟ್ಟುಕೊಟ್ಟಿದ್ದು ಬೌಲಿಂಗ್ ವಿಭಾಗ ಬಲಿಷ್ಠವಾಗಬೇಕಾದ ಅಗತ್ಯವಿದೆ. ಡೆಲ್ಲಿ ವಿರುದ್ಧ ಆರ್‌ಸಿಬಿ ಬೌಲರ್‌ಗಳಿಗೆ ಕಠಿಣ ಸವಾಲು ಎದುರಾಗಿದ್ದು, ವಿಶ್ವದ ದರ್ಜೆಯ ಬ್ಯಾಟ್ಸ್ ಮನ್ ಜೇಸನ್ ರಾಯ್, ಗೌತಮ್ ಗಂಭೀರ್, ರಿಷಬ್ ಪಂತ್, ಶ್ರೇಯಸ್ ಅಯ್ಯರ್ ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್ ಡೆಲ್ಲಿ ತಂಡದಲ್ಲಿದ್ದಾರೆ.

ರಾಜಸ್ಥಾನ ಹಾಗೂ ಮುಂಬೈ ತಂಡದ ವಿರುದ್ಧ ಕ್ರಮವಾಗಿ 57 ಹಾಗೂ ಔಟಾಗದೆ 92 ರನ್ ಗಳಿಸಿದ್ದ ವಿರಾಟ್ ಕೊಹ್ಲಿ ಮೊದಲಿನ ಫಾರ್ಮ್‌ಗೆ ಮರಳಿದ್ದು ಆರ್‌ಸಿಬಿ ಪಾಳಯದಲ್ಲಿ ಸಂತಸ ಮೂಡಿಸಿದೆ.

ಮುಂಬೈ ವಿರುದ್ಧದ ಪಂದ್ಯದಲ್ಲಿ ಇನಿಂಗ್ಸ್ ಆರಂಭಿಸಿದ ಕೊಹ್ಲಿ 4 ಸಿಕ್ಸರ್ ಹಾಗೂ 7 ಬೌಂಡರಿಗಳನ್ನು ಸಿಡಿಸಿದ್ದರು. ಆದರೆ, ಅವರಿಗೆ ತಂಡದ ಸಹ ಆಟಗಾರರಿಂದ ಉತ್ತಮ ಸಾಥ್ ಸಿಗಲಿಲ್ಲ. ಆರ್‌ಸಿಬಿ ಪರ ಕ್ವಿಂಟನ್ ಡಿಕಾಕ್ 12 ಎಸೆತಗಳಲ್ಲಿ 19 ರನ್ ಗಳಿಸಿದ್ದರು. ದಕ್ಷಿಣ ಆಫ್ರಿಕದ ಎಬಿ ಡಿವಿಲಿಯರ್ಸ್ ಈ ತನಕ 122 ರನ್ ಗಳಿಸಿದ್ದರು. ದೊಡ್ಡ ಸ್ಕೋರ್ ಗಳಿಸುವ ವಿಶ್ವಾಸದಲ್ಲಿದ್ದಾರೆ.

ಬ್ರೆಂಡನ್ ಮೆಕಲಮ್ ಈ ತನಕ ಆಡಿರುವ 3 ಪಂದ್ಯಗಳಲ್ಲಿ ಕೇವಲ 47 ರನ್ ಗಳಿಸಿದ್ದಾರೆ. ಕಳಪೆ ಫಾರ್ಮ್ ನಲ್ಲಿರುವ ಮೆಕಲಮ್ ತನ್ನ ಸ್ಥಾನವನ್ನು ಇಂಗ್ಲೆಂಡ್ ಬ್ಯಾಟ್ಸ್‌ಮನ್ ಮೊಯಿನ್ ಅಲಿಗೆ ಬಿಟ್ಟುಕೊಡುವ ಸಾಧ್ಯತೆಯಿದೆ. ಮತ್ತೊಂದೆಡೆ, ಗಂಭೀರ್ ನಾಯಕತ್ವದ ಡೆಲ್ಲಿ ತಂಡ ಕೆಕೆಆರ್ ವಿರುದ್ಧದ ಕಳೆದ ಪಂದ್ಯದ ಸೋಲನ್ನು ಮರೆತು ಆರ್‌ಸಿಬಿ ವಿರುದ್ಧ ಚೆನ್ನಾಗಿ ಆಡುವ ಸಿದ್ಧತೆಯಲ್ಲಿದೆ. ಡೆಲ್ಲಿ ತಂಡ ತಾನಾಡಿದ ಮೊದಲ ಪಂದ್ಯದಲ್ಲಿ ಪಂಜಾಬ್‌ಗೆ ಸೋತಿತ್ತು. ಮಳೆಬಾಧಿತ ಪಂದ್ಯದಲ್ಲಿ ರಾಜಸ್ಥಾನಕ್ಕೆ ಶರಣಾಗಿತ್ತು. ಔಟಾಗದೆ 91 ರನ್ ಗಳಿಸಿದ ಜೇಸನ್ ರಾಯ್ ಹಾಲಿ ಚಾಂಪಿಯನ್ ಮುಂಬೈ ತಂಡದ ವಿರುದ್ಧ ರಾಯಲ್ಸ್ ಜಯ ಸಾಧಿಸಲು ನೆರವಾಗಿದ್ದರು. ಭಾರತದ ವೇಗದ ಬೌಲರ್ ಮುಹಮ್ಮದ್ ಶಮಿ ಡೆಲ್ಲಿ ತಂಡಕ್ಕೆ ವಾಪಸಾಗುವ ಸಾಧ್ಯತೆಯಿದೆ. ತನ್ನ ಪತ್ನಿಯಿಂದ ಕೌಟುಂಬಿಕ ದೌರ್ಜನ್ಯ ಪ್ರಕರಣ ಎದುರಿಸುತ್ತಿರುವ ಶಮಿ ಕೋಲ್ಕತಾ ಪೊಲೀಸರಿಂದ ಮೂರು ಗಂಟೆಗಳ ಕಾಲ ವಿಚಾರಣೆಗೆ ಒಳಗಾಗಿದ್ದರು. ಡೆಲ್ಲಿ ದಾಂಡಿಗರು ಈ ತನಕ ದೊಡ್ಡ ಸ್ಕೋರ್ ಗಳಿಸಿಲ್ಲ. ಒಟ್ಟು 138 ರನ್ ಗಳಿಸಿರುವ ರಿಷಬ್ ಪಂತ್ ತಂಡದ ಪರ ಗರಿಷ್ಠ ರನ್ ಗಳಿಸಿದ ಸಾಧನೆ ಮಾಡಿದ್ದಾರೆ.ಮ್ಯಾಕ್ಸ್ ವೆಲ್ ಕಳೆದ ಪಂದ್ಯದಲ್ಲಿ 47 ರನ್ ಗಳಿಸಿದ್ದರು. ಇದೇ ಫಾರ್ಮ್‌ನ್ನು ಮುಂದುವರಿಸುವ ವಿಶ್ವಾಸದಲ್ಲಿದ್ದಾರೆ. ಮುಂಬೈ ವಿರುದ್ಧ ಕೊನೆಯ ಎಸೆತದಲ್ಲಿ ಡೆಲ್ಲಿಗೆ ಗೆಲುವು ತಂದುಕೊಟ್ಟಿರುವ ರಾಯ್ ಜೀವನಶ್ರೇಷ್ಠ 91 ರನ್ ಗಳಿಸಿದ್ದರು. ಇದೇ ಪ್ರದರ್ಶನವನ್ನು ಆರ್‌ಸಿಬಿ ವಿರುದ್ಧ ಪುನರಾವರ್ತಿಸಲು ಎದುರು ನೋಡುತ್ತಿದ್ದಾರೆ.

ಪಂದ್ಯದ ಸಮಯ: ರಾತ್ರಿ 8:00 ಗಂಟೆಗೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News