ಬಿಜೆಪಿ, ಜೆಡಿಎಸ್‌ಗೆ ಅಧಿಕಾರ ಕೇವಲ ಭ್ರಮೆ:ಸಿ.ಎಂ ಸಿದ್ದರಾಮಯ್ಯ

Update: 2018-04-21 13:00 GMT

ಬೆಂಗಳೂರು, ಎ.21: ಬಿಜೆಪಿ ಹಾಗೂ ಜೆಡಿಎಸ್ ಅಧಿಕಾರ ಹಿಡಿಯುತ್ತೇವೆಂದು ಭಾವಿಸುತ್ತಿರುವುದು ಕೇವಲ ಭ್ರಮೆಯಷ್ಟೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಶನಿವಾರ ನಗರದ ಅಶೋಕ ಹೊಟೇಲ್‌ನಲ್ಲಿ ಕಾಂಗ್ರೆಸ್ ವತಿಯಿಂದ ವಿಧಾನಸಭಾ ಚುನಾವಣಾ ಪ್ರಚಾರಕ್ಕಾಗಿ ವಿಶೇಷ ತಂತ್ರಜ್ಞಾನದೊಂದಿಗೆ ಸಿದ್ಧಗೊಂಡಿರುವ ‘ಆಗ್ಮೆಂಟೆಡ್ ರಿಯಾಲಿಟಿ’ ಆ್ಯಪ್‌ನ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಕಳೆದ 4 ವರ್ಷದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಯಾವುದೆ ಅಭಿವೃದ್ಧಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿಲ್ಲ. ಇನ್ನು ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಆಡಳಿದ ಸಂಪೂರ್ಣವಾಗಿ ಭ್ರಷ್ಟಾಚಾರ ಹಾಗೂ ನಾಯಕರ ಜೈಲುವಾಸದಿಂದ ಕೂಡಿತ್ತು. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ, ಅಮಿತ್‌ಶಾ ಹಾಗೂ ಬಿ.ಎಸ್.ಯಡಿಯೂರಪ್ಪ ಚುನಾವಣಾ ಪ್ರಚಾರದಲ್ಲಿ ಸುಳ್ಳಗಳನ್ನೇ ಪ್ರಮುಖ ಅಂಶವನ್ನಾಗಿಸಿಕೊಂಡಿದ್ದಾರೆ ಎಂದು ಅವರು ವ್ಯಂಗ್ಯವಾಡಿದರು.

ಇನ್ನು ಜೆಡಿಎಸ್ ರಾಜ್ಯದ ಕೆಲವು ಜಿಲ್ಲೆಗಳಿಗೆ ಮಾತ್ರ ಸೀಮಿತಗೊಂಡಿದೆ. ಆದರೂ ಜೆಡಿಎಸ್ ವರಿಷ್ಠರು ಮುಂದಿನ ಚುನಾವಣಾ ಫಲಿತಾಂಶ ಅತಂತ್ರಗೊಳ್ಳಲಿದ್ದು, ಬಿಜೆಪಿಯೊಂದಿಗೆ ಸಮ್ಮಿಶ್ರ ಸರಕಾರ ನಡೆಸಬಹುದೆಂದು ಕನಸು ಕಾಣುತ್ತಿದ್ದಾರೆ. ಇದು ಕೇವಲ ಭ್ರಮೆಯಷ್ಟೆ ಎಂದು ಅವರು ತಿಳಿಸಿದರು.

ಕಾಂಗ್ರೆಸ್ ಸರಕಾರ ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಹತ್ತುಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನತೆಗೆ ತಲುಪಿಸುವಲ್ಲಿ ಯಶಸ್ವಿಯಾಗಿದೆ. ರಾಜ್ಯದ ಜನತೆ ಅನ್ನ, ಆರೋಗ್ಯ, ಉದ್ಯೋಗ ಕೊಟ್ಟವರನ್ನು ಮರೆಯವುದಿಲ್ಲ. ಹೀಗಾಗಿ ರಾಜ್ಯದಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಅಧಿಕಾರ ಹಿಡಿಯುವಲ್ಲಿ ಯಾವುದೆ ಅನುಮಾನವಿಲ್ಲವೆಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಇಂಧನ ಸಚಿವ ಡಿ.ಕೆ.ಶಿವಕುಮಾರ್ ಮಾತನಾಡಿ, ಬಂಡವಾಳ ಹೂಡಿಕೆಯಲ್ಲಿ ಕರ್ನಾಟಕ ದೇಶದಲ್ಲಿಯೆ ಪ್ರಥಮ ಸ್ಥಾನದಲ್ಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ರಾಜ್ಯವನ್ನು ಸದೃಢವಾಗಿ ಕಟ್ಟಿದೆ. ಅದನ್ನು ಮತ್ತಷ್ಟು ಪೋಷಿಸಲು ರಾಜ್ಯದ ಜನತೆ ಮತ್ತೊಮ್ಮೆ ಕಾಂಗ್ರೆಸ್‌ಗೆ ಅಧಿಕಾರ ನೀಡಬೇಕು ಎಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್, ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ಗುಂಡೂರಾವ್, ಎಐಸಿಸಿ ಕಾರ್ಯದರ್ಶಿ ಮಧು ಯಕ್ಷಿಗೌಡ, ಯಶೋಮತಿ ಚಂದ್ರಕಾಂತ್ ಠಾಕುರ್ ಮತ್ತಿತರರಿದ್ದರು.

ಬಾದಾಮಿ ಕ್ಷೇತ್ರದಿಂದ ಸ್ಪರ್ಧಿಸುವ ವಿಚಾರ ಹೈಕಮಾಂಡ್‌ಗೆ ಬಿಟ್ಟದ್ದು. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಕಳೆದ ಎರಡು ದಿನ ಪ್ರಚಾರ ಮಾಡಿದ್ದೇನೆ. ಅಲ್ಲಿನ ಮತದಾರರು ಉತ್ತಮ ಬೆಂಬಲ ವ್ಯಕ್ತಪಡಿಸಿದ್ದು, ಚಾಮುಂಡೇಶ್ವರಿ ಕ್ಷೇತ್ರದಲ್ಲೇ ಗೆಲ್ಲುತ್ತೇನೆ.
-ಸಿದ್ದರಾಮಯ್ಯ ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News