ನಕಲಿ ಮತದಾರರ ವಿರುದ್ಧ ಕಠಿಣ ಕ್ರಮ: ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್

Update: 2018-04-21 13:09 GMT

ಬೆಂಗಳೂರು, ಏ.21: ನಗರದಲ್ಲಿ ಪ್ರಸ್ತುತ 89 ಲಕ್ಷ ಮತದಾರರಿದ್ದು, ನಕಲಿ ಮತದಾರರನ್ನು ಸೇರ್ಪಡೆಗೊಳಿಸಲಾಗಿದೆ ಎನ್ನುವ ಆರೋಪಗಳು ಕೇಳಿಬರುತ್ತಿದ್ದು, ನಕಲಿ ಮತದಾರರು ಕಂಡು ಬಂದಲ್ಲಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಹೇಳಿದ್ದಾರೆ.

ಶನಿವಾರ ನಗರದ ಚಿತ್ರಕಲಾ ಪರಿಷತ್‌ನಲ್ಲಿ ಮತದಾರರಲ್ಲಿ ಜಾಗೃತಿ ಮೂಡಿಸಲು ಆಯೋಜಿಸಿದ್ದ, ಛಾಯಾಚಿತ್ರ ಪ್ರದರ್ಶನ, ಪ್ರಚಾರ ಸಾಮಗ್ರಿಗಳ ಪ್ರದರ್ಶನ ಹಾಗೂ ಖ್ಯಾತ ವ್ಯಂಗ್ಯ ಚಿತ್ರಕಾರರಿಂದ ವ್ಯಂಗ್ಯಚಿತ್ರ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ನಕಲಿ ಮತದಾರರ ಹೆಸರನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಲಾಗಿದೆ ಎನ್ನುವ ಆರೋಪದ ಜೊತೆಗೆ ಕೆಲ ಸಮುದಾಯಗಳ ಮತದಾರರ ಹೆಸರನ್ನು ಮತದಾರರ ಪಟ್ಟಿಯಲ್ಲಿ ಕೈಬಿಡಲಾಗಿದೆ ಎಂದು ದೂರುಗಳು ಬಂದಿವೆ ಹೀಗಾಗಿ, ಕಾರ್ಯಾಚರಣೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದರು.

ನಕಲಿ ಮತದಾರರು ಕಂಡು ಬಂದಲ್ಲಿ ಸಾರ್ವಜನಿಕರು ಅವರ ವಿರುದ್ಧ ನಿರ್ಭೀತಿಯಿಂದ ಮಾಹಿತಿ ನೀಡಬಹುದಾಗಿದೆ. ಜೊತೆಗೆ ಮತದಾನಕ್ಕೆ ಆಮಿಷವೊಡ್ಡಲು ಸೀರೆ, ಕುಕ್ಕರ್ ಸೇರಿದಂತೆ ಗೃಹಬಳಕೆ ಸಾಮಗ್ರಿಗಳ ಹಂಚಿಕೆ ಮಾಡಲಾಗುತ್ತಿದೆ ಎನ್ನುವ ಮಾಹಿತಿ ಸಿಕ್ಕರೂ ನಮಗೆ ದೂರು ನೀಡಬಹುದಾಗಿದೆ ಎಂದು ಹೇಳಿದರು.

ಮತದಾನದ ಬಗ್ಗೆ ವ್ಯಂಗ್ಯಚಿತ್ರದ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. ಜನರ ಜೊತೆ ಸಂಪರ್ಕಕ್ಕೆ ಈ ಜಾಗೃತಿ ಕಾರ್ಯಕ್ರಮ ಏರ್ಪಡಿಸಲಾಗಿದೆ. ಭಿತ್ತಿ ಪತ್ರ, ಬೀದಿ ನಾಟಕ, ಡಿಜಿಟಲ್ ಮೀಡಿಯಾ ಸೇರಿ ಎಲ್ಲ ರೀತಿಯಲ್ಲಿಯೂ ಸಹ ಅರಿವು ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ವ್ಯಂಗ್ಯ ಚಿತ್ರಗಳ ಮೂಲಕ ಜಾಗೃತಿ: ಮತದಾನ ಅಭಿಯಾನದಲ್ಲಿ, ವ್ಯಂಗ್ಯ ಚಿತ್ರ ಹಾಗೂ ವಿಶೇಷ ಸಾಕ್ಷ ಚಿತ್ರಗಳ ಪ್ರದರ್ಶನ, ಯಕ್ಷಗಾನ ಪ್ರದರ್ಶಿಸುವ ಮೂಲಕ ಜನರನ್ನು ಮತದಾನದತ್ತ ಆಕರ್ಷಿಸಲು ಜಾಗೃತಿ ಮೂಡಿಸಲಾಯಿತು. ಹನ್ನೊಂದು ಜನ ಕಲಾವಿದರ ವ್ಯಂಗ್ಯಚಿತ್ರಗಳನ್ನು ಪ್ರದರ್ಶನಕ್ಕಿಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News