ರಾಜ್ಯ ವಿಧಾನಸಭಾ ಚುನಾವಣೆ: ಚಿರಂಜೀವಿ, ಕ್ರಿಕೆಟಿಗ ಅಝರುದ್ದೀನ್, ಉಮ್ಮನ್ ಚಾಂಡಿ ತಾರಾ ಪ್ರಚಾರಕರೇ ?
ಬೆಂಗಳೂರು, ಎ.21: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲು ಆಡಳಿತರೂಢ ಕಾಂಗ್ರೆಸ್ ಪಕ್ಷ ಸಿದ್ಧಪಡಿಸಿದೆ ಎನ್ನಲಾದ 40 ಜನ ತಾರಾ ಪ್ರಚಾರಕರ ಪಟ್ಟಿ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಪಟ್ಟಿಯಲ್ಲಿರುವ ಹೆಸರುಗಳು ಇಂತಿವೆ: ಕಾಂಗ್ರೆಸ್ ಅಧಿನಾಯಕಿ ಸೋನಿಯಾಗಾಂಧಿ, ಮಾಜಿ ಪ್ರಧಾನಿ ಡಾ.ಮನಮೋಹನ್‌ಸಿಂಗ್, ಮಾಜಿ ಕೇಂದ್ರ ಸಚಿವರಾದ ಗುಲಾಮ್ ನಬಿ ಆಝಾದ್, ಸುಶಿಲ್‌ಕುಮಾರ್ ಶಿಂಧೆ, ಸಚಿನ್ ಪೈಲಟ್, ನವಜೋತ್‌ಸಿಂಗ್ ಸಿಧು, ನಟ ಚಿರಂಜೀವಿ, ಮಹಾರಾಷ್ಟ್ರ ಮಾಜಿ ಸಿಎಂ ಅಶೋಕ್ ಚೌವಾಣ್, ಮಾಜಿ ಕ್ರಿಕೆಟಿಗ ಮುಹಮ್ಮದ್ ಅಝರುದ್ದೀನ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ಅಶೋಕ್ ಗೆಹ್ಲೋಟ್.
ನಟಿಯರಾದ ಖುಷ್ಬೂ, ನಗ್ಮಾ, ಮಾಜಿ ಸಂಸದೆ ಪ್ರಿಯಾ ದತ್, ಜ್ಯೋತಿರಾಧಿತ್ಯ ಸಿಂಧ್ಯಾ, ಸಂಸದೆ ಸುಶ್ಮಿತ್ ದೇವ್, ಎಐಸಿಸಿ ವಕ್ತಾರರಾದ ರೇಣುಕಾ ಚೌಧರಿ, ರಣದೀಪ್‌ಸಿಂಗ್ ಸುರ್ಜೇವಾಲ, ಕೇರಳ ಮಾಜಿ ಸಿಎಂ ಉಮ್ಮನ್ ಚಾಂಡಿ, ಅಮಿತ್ ದೇಶ್‌ಮುಖ್, ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಅಮರಿಂದರ್‌ಸಿಂಗ್ ರಾಜಾ ಬ್ರಾರ್.
ಮಹಾರಾಷ್ಟ್ರ ಯುವ ಕಾಂಗ್ರೆಸ್ ಅಧ್ಯಕ್ಷ ಧೀರಜ್ ದೇಶ್‌ಮುಖ್, ಉತ್ತರಪ್ರದೇಶ ಪಿಸಿಸಿ ಅಧ್ಯಕ್ಷ ರಾಜ್ ಬಬ್ಬರ್, ಕೇರಳದ ಮಾಜಿ ಸಚಿವ ರಮೇಶ್ ಚಿನ್ನಿತಾಲ್, ಮಾಜಿ ಕೇಂದ್ರ ಸಚಿವ ಶಶಿ ತರೂರ್, ಮಾಜಿ ಸಚಿವ ಅಂಬರೀಶ್, ಮಾಜಿ ಸಂಸದೆ ರಮ್ಯಾ, ಝಮೀರ್‌ಅಹ್ಮದ್‌ಖಾನ್ ಸೇರಿದಂತೆ 40 ಮಂದಿಯನ್ನು ತಾರಾಪ್ರಚಾರಕನ್ನಾಗಿ ಆಯ್ಕೆ ಮಾಡಲಾಗಿದೆ ಎನ್ನಲಾದ ಪಟ್ಟಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ .
ಅಧಿಕೃತ ಪಟ್ಟಿಯಲ್ಲ
ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಈ ತಾರಾಪ್ರಚಾರಕರ ಪಟ್ಟಿ ನಕಲಿಯಾಗಿದ್ದು, ಎಐಸಿಸಿಯಿಂದ ಇದುವರೆಗೆ ಯಾವುದೆ ತಾರಾಪ್ರಚಾರಕರ ಪಟ್ಟಿಯನ್ನು ಬಿಡುಗಡೆ ಮಾಡಿಲ್ಲ. ಈ ಹಿಂದೆ ಅಭ್ಯರ್ಥಿಗಳ ಪಟ್ಟಿಯಂತೆ ಇದು ಸಹ ನಕಲಿ ಎಂದು ಎಐಸಿಸಿ ಮಾಧ್ಯಮ ವಿಭಾಗದ ಮೂಲಗಳು ತಿಳಿಸಿವೆ.