×
Ad

ಹೆಣ್ಣು ಮಕ್ಕಳ ನೋವು ಮೋದಿಗೆ ಅರ್ಥವಾಗುತ್ತಿಲ್ಲವೆ: ನಟಿ ಖುಷ್ಬೂ ಪ್ರಶ್ನೆ

Update: 2018-04-21 19:56 IST

ಬೆಂಗಳೂರು, ಎ.21: ದೇಶದಲ್ಲಿ ಪ್ರಧಾನಿ ನರೇಂದ್ರಮೋದಿ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದ ನಂತರ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಎಐಸಿಸಿ ವಕ್ತಾರೆ ಹಾಗೂ ನಟಿ ಖುಷ್ಬೂ ಆರೋಪಿಸಿದ್ದಾರೆ.

ಶನಿವಾರ ನಗರದ ಕ್ವೀನ್ಸ್‌ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಪ್ರತಿಕ್ಷಣವೂ ಮಹಿಳೆಯರು ಆತಂಕದಲ್ಲಿ ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು. ಉತ್ತರ ಪ್ರದೇಶದಲ್ಲಿ 17 ವರ್ಷದ ಬಾಲಕಿ ಮೇಲೆ ನಡೆದ ಅತ್ಯಾಚಾರ ಹಾಗೂ ಆಕೆಯ ತಂದೆಯ ಸಾವಿಗೆ ಸಂಬಂಧಿಸಿದ ವೈದ್ಯಕೀಯ ವರದಿ ಬಂದಿದೆ. ಆದರೆ, ಈ ಬಗ್ಗೆ ಬಿಜೆಪಿ ನಾಯಕರ ಪೈಕಿ ಯಾರೊಬ್ಬರೂ ತುಟಿ ಬಿಚ್ಚುತ್ತಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲೆ ಮಹಿಳೆಯರ ಮೇಲಿನ ದೌರ್ಜನ್ಯಗಳು ಹೆಚ್ಚಾಗುತ್ತಿವೆ. ಕಾಶ್ಮೀರದ ಕಥುವಾ ಪ್ರಕರಣ, ಸೂರತ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ದೌರ್ಜನ್ಯ ಹೀಗೆ ಪಟ್ಟಿ ಬೆಳೆಯುತ್ತಲೆ ಹೋಗುತ್ತಿದೆ ಎಂದು ಅವರು ಹೇಳಿದರು. ಉತ್ತರಪ್ರದೇಶದಲ್ಲಿ ಅತ್ಯಾಚಾರಕ್ಕೆ ಒಳಗಾದ ಬಾಲಕಿಗೆ ನ್ಯಾಯ ಕೊಡಿಸುವುದನ್ನು ಬಿಟ್ಟು, ಬಿಜೆಪಿ ಶಾಸಕ ಕುಲ್‌ದೀಪ್ ಸೆನೆಗರ್ ವಿರುದ್ಧ ಎಫ್‌ಐಆರ್ ಹಾಕದೆ, ಸಂತ್ರಸ್ತೆಯ ತಂದೆಯನ್ನೆ ಪೊಲೀಸ್ ಠಾಣೆಯಲ್ಲಿ ಕೊಲ್ಲಲಾಗಿದೆ. ಆದರೂ, ಬಿಜೆಪಿ ನಾಯಕರು ಆರೋಪಿಗಳ ಪರ ನಿಂತಿರುವುದು ನಾಚಿಕೆಗೇಡು ಎಂದು ಖುಷ್ಬೂ ಕಿಡಿಗಾರಿದರು.

ಉತ್ತರಪ್ರದೇಶದಲ್ಲಿ ಅಪರಾಧ ಪ್ರಕರಣಗಳು ಗಣನೀಯ ಪ್ರಮಾಣದಲ್ಲಿ ಹೆಚ್ಚಾಗುತ್ತಿವೆ. ಕಥುವಾದಲ್ಲಿ ನಡೆದಂತಹ ಪ್ರಕರಣಗಳು ಮರುಕಳಿಸುತ್ತಿವೆ. ಆದರೂ, ಈ ವಿಚಾರದಲ್ಲಿ ಪ್ರಧಾನಿ ಯಾಕೆ ಮೌನ ವಹಿಸಿದ್ದಾರೆ ಎಂಬುದು ಅರ್ಥವಾಗುತ್ತಿಲ್ಲ. ಹೆಣ್ಣುಮಕ್ಕಳ ನೋವು ನರೇಂದ್ರಮೋದಿಗೆ ಅರ್ಥವಾಗುತ್ತಿಲ್ಲವೆ ಎಂದು ಅವರು ಖಾರವಾಗಿ ಪ್ರಶ್ನಿಸಿದರು.

ಜನ ನಿಮ್ಮ ಆಡಳಿತವನ್ನು ಹೇಗೆ ಒಪ್ಪಿಕೊಳ್ಳಬೇಕು. ದೇಶದ ಪ್ರಧಾನಿಯಾಗಿ ನೀವು ಏನು ಮಾಡುತ್ತಿದ್ದೀರಾ ? ಮಾಜಿ ಪ್ರಧಾನಿ ಡಾ.ಮನಮೋಹನ್‌ಸಿಂಗ್ ನಿಮಗೆ ಕೇಳಿರುವ ಪ್ರಶ್ನೆಗಳಿಗೆ ಉತ್ತರವೇನು ? ಹೆಣ್ಣು ಮಕ್ಕಳಿಗೆ ದೇಶದಲ್ಲಿ ರಕ್ಷಣೆ ಇಲ್ಲವೇ ? ಸುಳ್ಳು ಹೇಳಿಕೊಂಡು ಓಡಾಡುವ ಬದಲು, ನಮ್ಮ ಪ್ರಶ್ನೆಗಳಿಗೆ ಉತ್ತರ ನೀಡಿ ಎಂದು ಅವರು ಆಗ್ರಹಿಸಿದರು.

ನಿರ್ಭಯಾ ಪ್ರಕರಣಗಳು ದೇಶದಲ್ಲಿ ಮುಂದುವರಿದಿವೆ. ‘ರೇಪ್ ಇಸ್ ರೇಪ್ ’ಎಂದು ಬಿಜೆಪಿ ಮುಖಂಡ ನಂದನ್ ಹೇಳುತ್ತಾರೆ. ಬಿಜೆಪಿ ನಾಯಕರಿಗೆ ಇಂತಹ ಪ್ರಕರಣಗಳಿಂದ ನೋವು ಆಗುವುದಿಲ್ಲವೆ. ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆಯನ್ನು ವಿಧಿಸುವ ಕಾನೂನು ಜಾರಿಗೆ ತರುವಂತೆ ಕಾಂಗ್ರೆಸ್ ಅಧಿನಾಯಕಿ ಸೋನಿಯಾಗಾಂಧಿ ಬರೆದಿರುವ ಪತ್ರಕ್ಕೆ ಈವರೆಗೆ ಪ್ರಧಾನಿ ಉತ್ತರಿಸಿಲ್ಲ ಎಂದು ಅವರು ಟೀಕಿಸಿದರು.

15 ನಿಮಿಷಕ್ಕೊಮ್ಮೆ ಒಂದು ಅತ್ಯಾಚಾರ

ಬೇಟಿ ಬಚಾವೋ ಎಂಬ ಘೋಷಣೆ ಕೂಗುವ ನರೇಂದ್ರಮೋದಿ ಸರಕಾರ, ಮಹಿಳೆಯರ ರಕ್ಷಣೆಗೆ ಕೊನೆಯ ಆದ್ಯತೆ ನೀಡಿರುವುದು ಇದರಿಂದ ತಿಳಿದು ಬರುತ್ತದೆ. 2014ರಲ್ಲಿ ಶೇ.35.31ರಷ್ಟು ಇದ್ದ ಅತ್ಯಾಚಾರ ಪ್ರಕರಣಗಳು, 2016ರ ವೇಳೆಗೆ ಶೇ.63.79ರಷ್ಟಾಗಿವೆ. ಮೋದಿ ಆಡಳಿತದಲ್ಲಿ ಪ್ರತಿ 15 ನಿಮಿಷಕ್ಕೆ ಒಂದು ಅತ್ಯಾಚಾರ ನಡೆಯುತ್ತಿದೆ.
-ಖುಷ್ಬೂ ಎಐಸಿಸಿ ವಕ್ತಾರೆ, ನಟಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News