×
Ad

ಯುವತಿ ಮೇಲೆ ಅತ್ಯಾಚಾರ ಆರೋಪ: ಜ್ಯೋತಿಷಿ ದಿನೇಶ್ ಗುರೂಜಿ ಸೆರೆ

Update: 2018-04-21 19:59 IST

ಬೆಂಗಳೂರು, ಎ.21: ಯುವತಿಯೊಬ್ಬಳಿಗೆ ಜ್ಯೋತಿಷ್ಯ ಹೇಳಿಕೊಡುವುದಾಗಿ ನಂಬಿಸಿ ಅತ್ಯಾಚಾರವೆಸಗಿರುವುದಲ್ಲದೆ, 50 ಲಕ್ಷ ರೂ. ವಂಚನೆ ಮಾಡಿರುವ ಆರೋಪದ ಮೇಲೆ ಜ್ಯೋತಿಷಿ ದಿನೇಶ್ ಗುರೂಜಿ ಎಂಬಾತನನ್ನು ಗಂಗಮ್ಮನಗುಡಿ ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.

ಗಂಗಮ್ಮನಗುಡಿ ಪೈಪ್‌ಲೇನ್ ರಸ್ತೆಯಲ್ಲಿ ವಾಸವಾಗಿರುವ ಆರೋಪಿ ದಿನೇಶ್ ಗುರೂಜಿ(38), ಮಾಗಡಿ ರಸ್ತೆಯ 28 ವರ್ಷದ ಯುವತಿಯನ್ನು ಪರಿಚಯ ಮಾಡಿಕೊಂಡು ಲೈಂಗಿಕ ದೌರ್ಜನ್ಯವೆಸಗಿ 50 ಲಕ್ಷ ಸುಲಿಗೆ ಮಾಡಿದ್ದಾನೆ ಎಂದು ದೂರು ನೀಡಲಾಗಿತ್ತು ಎನ್ನಲಾಗಿದೆ.

ಖಾಸಗಿ ಚಾನೆಲ್‌ವೊಂದರಲ್ಲಿ ದಿನೇಶ್‌ಗುರೂಜಿ ನಕ್ಷತ್ರನಾಡಿ ಭವಿಷ್ಯ ಹೇಳುತ್ತಿದ್ದನ್ನು ನೋಡಿ ನಂಬಿದ ಯುವತಿಯು ಆತನನ್ನು ಪರಿಚಯ ಮಾಡಿಕೊಂಡಿದ್ದಾರೆ. ತಾನು ಜ್ಯೋತಿಷ್ಯ ಕಲಿಯಬೇಕಾಗಿರುವ ಬಯಕೆಯನ್ನು ಆತನ ಬಳಿ ವ್ಯಕ್ತಪಡಿಸಿದ್ದಾಳೆ. ಯುವತಿಗೆ ಜ್ಯೋತಿಷ್ಯವನ್ನು ಕಲಿಸಿ ಅದರ ಕೋರ್ಸ್ ಮುಗಿಸಿಕೊಡಿಸುವುದಾಗಿ ಪದೇ ಪದೇ ಮನೆಗೆ ಕರೆಸಿಕೊಂಡಿದ್ದ ಗುರೂಜಿಯು ಆಕೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾನೆ ಎಂದು ಆರೋಪಿಸಲಾಗಿದೆ.

ಗುರೂಜಿಯು ಕೆಲವು ಯುವತಿಯರಿಗೆ ಇದೇ ರೀತಿ ದೌರ್ಜನ್ಯವೆಸಗಿದ್ದು, ಅದರಲ್ಲಿ ಕೆಲವರು ಮಾಧ್ಯಮದ ಮುಂದೆ ಹೋಗಿ ರಂಪಾಟ ಮಾಡಲು ಮುಂದಾದಾಗ ಪರಿಹಾರವಾಗಿ ಹಣ ನೀಡಿ ಬಗೆಹರಿಸಿಕೊಳ್ಳಲು ಮುಂದಾಗಿದ್ದಾನೆ. ಈ ವೇಳೆ ಹಣಕ್ಕಾಗಿ ಯುವತಿಯನ್ನು ಕೇಳಿದ್ದು, ಆಕೆ ತಂದೆ ಜಮೀನು ಮಾರಿ ಮನೆಯಲ್ಲಿ ತಂದಿಟ್ಟಿದ್ದ 50 ಲಕ್ಷ ರೂ.ಗಳನ್ನು ಗುರೂಜಿಗೆ ನೀಡಿದ್ದಾಳೆ ಎನ್ನಲಾಗಿದೆ.

ಸ್ವಲ್ಪ ದಿನಗಳ ನಂತರ ಹಣ ವಾಪಸ್ ಕೊಡುವುದಾಗಿ ಹೇಳಿದ್ದ ಗೂರುಜಿಯು ತಿಂಗಳು ಕಳೆದರು ಹಣ ನೀಡದಿದ್ದಾಗ ಮನೆಗೆ ಹೋದ ಯುವತಿಯು ಹಣಕ್ಕಾಗಿ ಪಟ್ಟು ಹಿಡಿದು ಕುಳಿತಿದ್ದಾಳೆ. ಇದರಿಂದ ಆಕ್ರೋಶಗೊಂಡ ಗುರೂಜಿ ಆಕೆಯ ಮೇಲೆ ಹಲ್ಲೆ ಮಾಡಿ ಕಿರುಕುಳ ನೀಡಿದ್ದು, ನೊಂದ ಯುವತಿಯು ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಗುರೂಜಿಯನ್ನು ಬಂಧಿಸಿ ವೈದ್ಯಕೀಯ ಪರೀಕ್ಷೆಗೆ ಕಳುಹಿಸಿದ್ದಾರೆ ಎಂದು ಉತ್ತರ ವಿಭಾಗದ ಡಿಸಿಪಿ ಚೇತನ್ ಸಿಂಗ್ ಹೇಳಿದ್ದಾರೆ.

   

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News