ಹಿರಿಯ ಬಿಜೆಪಿ ಮುಖಂಡರಿಗೆ ಕನ್ನಡ ಕಲಿಸಿದ ಸಿದ್ದರಾಮಯ್ಯ!

Update: 2018-04-21 14:58 GMT

ಬೆಂಗಳೂರು, ಎ.21: ಕರ್ನಾಟಕ ವಿಧಾನಸಭಾ ಚುನಾವಣೆ ಇನ್ನೇನು ಹತ್ತಿರವಾಗುತ್ತಿರುವಂತೆಯೇ ರಾಜಕೀಯ ಪಕ್ಷಗಳು ಪರಸ್ಪರ ಕೆಸರೆರಚಾಟದಲ್ಲಿ ತೊಡಗಿದೆ. ಸುಮಾರು 218 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಕಾಂಗ್ರೆಸ್ ಈಗಾಗಲೇ ಪ್ರಕಟಿಸಿದ್ದು, ಇನ್ನೂ ಕೆಲ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಬಿಡುಗಡೆ ಇನ್ನೂ ಬಾಕಿ ಇದೆ. ಈ ನಡುವೆ ಸಿಎಂ ಸಿದ್ದರಾಮಯ್ಯ ಸ್ಪರ್ಧೆಯ ಕಾರಣದಿಂದ ಬಾದಾಮಿ ಕ್ಷೇತ್ರವು ಗಮನಸೆಳೆದಿದೆ.

ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜಯ ಗಳಿಸಲು ಸಾಧ್ಯವಿಲ್ಲ ಎನ್ನುವುದನ್ನು ಅರಿತು ಎರಡೂ ಕಡೆಗಳಲ್ಲಿ ಸ್ಪರ್ಧಿಸುತ್ತಿದ್ದಾರೆ ಎಂದು ಬಿಜೆಪಿ ಹೇಳಿದರೆ, ಸಿದ್ದರಾಮಯ್ಯ ಬಾದಾಮಿಯಲ್ಲಿ ಸ್ಪರ್ಧಿಸಲು ಹೈಕಮಾಂಡ್ ಒತ್ತಾಯಿಸುತ್ತಿದೆ ಎಂದು ಕಾಂಗ್ರೆಸಿಗರು ಹೇಳುತ್ತಾರೆ.

ಈ ನಡುವೆ ಹಿರಿಯ ಬಿಜೆಪಿ ಮುಖಂಡ ಪಿ. ಮುರಳೀಧರ್ ರಾವ್ ಟ್ವೀಟ್ ಮಾಡಿ ಸಿದ್ದರಾಮಯ್ಯರ ಕಾಲೆಳೆಯಲು ಪ್ರಯತ್ನಿಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿರುವ ಪ್ರತಿಕ್ರಿಯೆ ಟ್ವಿಟರಿಗರ ಮೆಚ್ಚುಗೆಗೆ ಪಾತ್ರವಾಗಿದೆ.

“ಸಿದ್ದರಾಮಯ್ಯ ಅವರು ಹೆದರಿದ್ದಾರೆ. ಚುನಾವಣೆಯಲ್ಲಿ ಸ್ಪರ್ಧಿಸಲು ನೀವು ಚಾಮುಂಡೇಶ್ವರಿ ಜೊತೆ ಬೇರೆ ಕ್ಷೇತ್ರದ ಹುಡುಕಾಟದಲ್ಲೂ ತೊಡಗಿದ್ದೀರಿ. ನಿಮ್ಮ ಸಂಶಯ ನಿವಾರಿಸಲು ಹೇಳುತ್ತಿದ್ದೇನೆ. ನಿಮ್ಮ ಎರಡು ಕ್ಷೇತ್ರಗಳು ಮಾತ್ರವಲ್ಲ ಇಡೀ ಕರ್ನಾಟಕವನ್ನೇ ಕಾಂಗ್ರೆಸ್ ಮುಕ್ತ ಮಾಡುತ್ತೇವೆ” ಎಂದು ಪಿ, ಮುರಳೀಧರ್ ರಾವ್ ಟ್ವೀಟ್ ಮಾಡಿದ್ದರು.

ಬಿಜೆಪಿ ಮುಖಂಡರ ಈ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ಸಿಎಂ ಸಿದ್ದರಾಮಯ್ಯ,”ಕನ್ನಡ ಅಥವಾ ಇಂಗ್ಲಿಷ್ ನಲ್ಲಿ ಟ್ವೀಟ್ ಮಾಡಿ ಸರ್. ಹಿಂದಿ ಅರ್ಥವಾಗುವುದಿಲ್ಲ” ಎಂದು ನಯವಾಗಿ ತಿರುಗೇಟು ನೀಡಿದ್ದಾರೆ.

ಸಿದ್ದರಾಮಯ್ಯರ ಈ ಟ್ವೀಟ್ ಗೆ ಟ್ವಿಟರಿಗರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಮೊದಲೂ ಸಹ ಬಿಜೆಪಿಯನ್ನು ಹಿಂದಿ ಹೇರಿಕೆಯ ಕಾರಣಕ್ಕಾಗಿ ಕನ್ನಡಿಗರು ವಿರೋಧಿಸಿದ್ದರು. ಇದೀಗ ಚುನಾವಣೆ ಸಂದರ್ಭ ತನ್ನ ಕಾಲೆಳೆದ ಹಿಂದಿ ಟ್ವೀಟ್ ಗೆ ಕನ್ನಡದಲ್ಲಿ ತಿರುಗೇಟು ನೀಡಿದ ಸಿದ್ದರಾಮಯ್ಯ ಟ್ವಿಟರಿಗರ ಮೆಚ್ಚುಗೆ ಗಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News