ಅಲ್ಪಸಂಖ್ಯಾತರು, ದಲಿತರ ಮೇಲಿನ ದಾಳಿಯಿಂದ ದೇಶದಲ್ಲಿ ಅರಾಜಕತೆ ಸೃಷ್ಟಿ: ನ್ಯಾ. ಎಚ್.ಎನ್.ನಾಗಮೋಹನ್‌ದಾಸ್

Update: 2018-04-21 15:06 GMT

ಬೆಂಗಳೂರು, ಎ.21: ಕ್ರಿಶ್ಚಿಯನ್ನರು ಹಾಗೂ ಮುಸ್ಲಿಮರ ಮೇಲೆ ದಾಳಿ ನಡೆಸಿದವರೆ ದಲಿತರ ಮೇಲೂ ದೌರ್ಜನ್ಯಗಳನ್ನು ನಡೆಸುತ್ತಿದ್ದು, ಈ ಬೆಳವಣಿಗೆ ಮುಂದುವರೆದರೆ ದೇಶದಲ್ಲಿ ಅರಾಜಕತೆ ಉಂಟಾಗಲಿದೆ ಎಂದು ನಿವೃತ್ತ ನ್ಯಾ.ಎಚ್.ಎನ್.ನಾಗಮೋಹನ್‌ದಾಸ್ ಕಳವಳ ವ್ಯಕ್ತಪಡಿಸಿದ್ದಾರೆ.

ಶನಿವಾರ ಬೆಂಗಳೂರು ವಕೀಲ ಸಂಘ ನಗರದ ಸಿವಿಲ್ ನ್ಯಾಯಾಲಯದ ವಕೀಲರ ಭವನದಲ್ಲಿ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ 127ನೆ ಜಯಂತ್ಯುತ್ಸವದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಚರ್ಚ್‌ಗಳ ಮೇಲೆ ದಾಳಿ ನಡೆದು ಪಾದ್ರಿಗಳನ್ನು ಸುಡಲಾಗಿತ್ತು. ಜೊತೆಗೆ ಮುಸ್ಲಿಮರ ಮೇಲೆ ದಾಳಿಗಳನ್ನು ನಡೆಸುತ್ತಿದ್ದರು, ಪ್ರಸಕ್ತ ದಲಿತರ ವಿರುದ್ಧ ದೌರ್ಜನ್ಯಗಳನ್ನು ಮುಂದುವರೆಸಿದ್ದಾರೆ. ಇದೊಂದು ಕೆಟ್ಟ ಬೆಳವಣಿಗೆಯಾಗಿದ್ದು ಮುಂದೇನು ಎಂಬ ಆತಂಕ ಎದುರಾಗಿದೆ ಎಂದರು.

ಉತ್ತರ ಭಾರತದ ಕೆಲ ರಾಜ್ಯಗಳಲ್ಲಿ ದಲಿತರು ಚಪ್ಪಲಿ ಹಾಕಿದ್ದಕ್ಕೆ ಥಳಿಸಿದ್ದಾರೆ. ಮದುವೆ ದಿನದಂದು ಕುದುರೆ ಮೇಲೆ ಸವಾರಿ ಮಾಡಿದ ಎಂಬುದಕ್ಕೆ ಮಾರಾಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ. ಈ ಬೆಳವಣಿಗೆಗಳನ್ನು ತಡೆಯುವಲ್ಲಿ ವಕೀಲರ ಪಾತ್ರ ಮುಖ್ಯವಾಗಿದೆ. ಆದರೂ ಮೌನಕ್ಕೆ ಶರಣಾಗಿದ್ದಾರೆ ಎಂದು ಹೇಳಿದರು.

ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ವಿರುದ್ಧವೇ ಮಹಾಭಿಯೋಗಕ್ಕೆ ಮನವಿ ಮಾಡಲಾಗಿದೆ. ನಾಲ್ಕು ಜನ ನ್ಯಾಯಾಮೂರ್ತಿಗಳು ಸಾರ್ವಜನಿಕವಾಗಿ ಮುಖ್ಯನ್ಯಾಯಮೂರ್ತಿ ವಿರುದ್ಧ ಹೇಳಿಕೆ ನೀಡಿದ್ದಾರೆ. ನ್ಯಾಯಮೂರ್ತಿಯೊಬ್ಬರು ಪತ್ರ ಬರೆದು ಅಸಮಾಧಾನ ವ್ಯಕ್ತಪಡಿಸುವಂತಹ ಘಟನೆಗಳು ನಡೆಯುತ್ತಿವೆ. ಈ ಬೆಳವಣಿಗೆಗಳು ನ್ಯಾಯಾಂಗ ವ್ಯವಸ್ಥೆಯ ಮೇಲೆ ಸಾರ್ವಜನಿಕರು ಇಟ್ಟಿರುವ ನಂಬಿಕೆಗೆ ಧಕ್ಕೆಯಾಗುತ್ತಿದೆ ಎಂದರು.

ನ್ಯಾಯಮೂರ್ತಿಗಳ ನೇಮಕ ಮಾಡಲು ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ನಿಯಮ ಜಾರಿ ಮಾಡಲಾಗಿತ್ತು. ಈ ನಿಯಮ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದೆ ಎಂದು ಅಭಿಪ್ರಾಯಪಟ್ಟ ಸುಪ್ರೀಕೋರ್ಟ್ ಕೊಲಿಜಿಯಂ ಪದ್ಧತಿ ಮುಂದುವರೆಸುವಂತೆ ಆದೇಶಿಸಿತ್ತು. ಈ ಆದೇಶವಾಗಿ ಮೂರು ವರ್ಷ ಕಳೆದರೂ ನ್ಯಾಯಾಧೀಶರ ನೇಮಕಕ್ಕೆ ಕೇಂದ್ರ ಸೂಕ್ತ ಕ್ರಮಕ್ಕೆ ಮುಂದಾಗಿಲ್ಲ. ಪರಿಣಾಮ ಸುಪ್ರೀಂಕೋರ್ಟ್‌ನಲ್ಲಿ ಶೇ.20, ಹೈಕೋರ್ಟ್‌ಗಳಲ್ಲಿ ಶೇ.40 ಹಾಗೂ ಕೆಳ ಹಂತದ ನ್ಯಾಯಾಲಯಗಳಲ್ಲಿ ಶೇ.32ರಷ್ಟು ನ್ಯಾಯಾಧೀಶರ ಹುದ್ದೆಗಳು ಖಾಲಿ ಇವೆ ಎಂದರು.

ಹೈಕೋರ್ಟ್ ನ್ಯಾಯಮೂರ್ತಿ ಎಲ್.ನಾರಾಯಣಸ್ವಾಮಿ ಮಾತನಾಡಿ, ದೇಶದಲ್ಲಿ ಹಲವರಿಗೆ ಶಾಸನ ಸಭೆಗಳಲ್ಲಿ ಭಾಗವಹಿಸುವ ಅರ್ಹತೆಯಿದ್ದರೂ, ಚುನಾವಣೆಗಳಲ್ಲಿ ಗೆಲ್ಲಲಾಗದಂತಹ ಸ್ಥಿತಿ ಇದೆ. ಇದರಿಂದಾಗಿ ಶಾಸನ ಸಭೆಗಳಲ್ಲಿ ಜ್ಞಾನವಂತರ ಬದಲಿಗೆ ಹಣವಂತರ ಸಂಖ್ಯೆ ಹೆಚ್ಚಾಗಿದೆ ಎಂದರು.

ಸ್ವಾತಂತ್ರ ಪೂರ್ವದಲ್ಲಿ ದಲಿತರು ಹಾಗೂ ಶೋಷಿತರ ಪರವಾಗಿ ಹಲವರು ಶ್ರಮಿಸಿದ್ದರಾದರೂ ಈ ವರ್ಗದ ನಾಯಕರಾಗಿರಲಿಲ್ಲ. ಆದರೆ, ಸ್ವಾತಂತ್ರ ನಂತರ ಸಂವಿಧಾನ ಬದ್ಧವಾಗಿ ಈ ವರ್ಗದವರ ರಕ್ಷಣೆಗಾಗಿ ಶ್ರಮಿಸಿದ್ದು ಅಂಬೇಡ್ಕರ್, ದೊಡ್ಡ ನಾಯಕರಾಗಿ ಹೊರ ಹೊಮ್ಮಿದರು ಎಂದರು. ವಕೀಲರ ಸಂಘದ ಅಧ್ಯಕ್ಷ ಎ.ಪಿ.ರಂಗನಾಥ್, ಪ್ರಧಾನ ಕಾರ್ಯದರ್ಶಿ ಗಂಗಾಧರಯ್ಯ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News