ಅಪ್ರಾಪ್ತೆಯರ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ವಿಧಿಸುವ ಸುಗ್ರೀವಾಜ್ಞೆ ಒಂದು ಕ್ರಾಂತಿಕಾರಿ ಕ್ರಮ: ಪ್ರಕಾಶ್ ಜಾವಡೇಕರ್

Update: 2018-04-21 15:34 GMT

ಬೆಂಗಳೂರು, ಎ.21: ಅಪ್ರಾಪ್ತ ಬಾಲಕಿಯರ ಮೇಲಿನ ಅತ್ಯಾಚಾರಕ್ಕೆ ಗಲ್ಲುಶಿಕ್ಷೆ ವಿಧಿಸುವ ಸುಗ್ರೀವಾಜ್ಞೆಯು ಒಂದು ಕ್ರಾಂತಿಕಾರಿ ಕ್ರಮವಾಗಿದೆ ಎಂದು ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ.

ಶನಿವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ದೇಶವು ಇಂತಹ ಕ್ರಮವನ್ನು ನಿರೀಕ್ಷಿಸಿತ್ತು ಹಾಗೂ ದೇಶಕ್ಕೆ ಇದು ಅಗತ್ಯವೂ ಆಗಿತ್ತೆಂದು ಹೇಳಿದರು.

ಸಂತ್ರಸ್ಥರಿಗೆ ನ್ಯಾಯ ಒದಗಿಸುವ ದೃಷ್ಟಿಯಿಂದ ಇದೊಂದು ಐತಿಹಾಸಿಕ ಕ್ರಮವಾಗಿದ್ದು, ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ನಿಯಂತ್ರಣ ಇದರಿಂದ ಸಾಧ್ಯವಾಗಲಿದೆ. ಇಂತಹ ಮಹತ್ವದ ತೀರ್ಮಾನ ಕೈಗೊಂಡ ಪ್ರಧಾನಿ ನರೇಂದ್ರಮೋದಿ ಅಭಿನಂದನಾರ್ಹರು ಎಂದು ಅವರು ಪ್ರಕಾಶ್ ಜಾವಡೇಕರ್ ತಿಳಿಸಿದರು.

ವಿರೋಧ ಪಕ್ಷಗಳು ಇತ್ತೀಚೆಗೆ ನಡೆದ ಕೆಲವು ಘಟನಾವಳಿಗಳ ಹಿನ್ನೆಲೆಯಲ್ಲಿ ಕೇಂದ್ರ ಸರಕಾರವನ್ನು ಟೀಕೆಗೊಳಪಡಿಸಿದ್ದರಿಂದ ಇಂತಹ ಕ್ರಮ ಕೈಗೊಳ್ಳಲಾಗಿದೆಯೆ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸುಧಾರಣೆಯ ಹಾದಿಯಲ್ಲಿ ಸಾಗುತ್ತಿರುವ ದೇಶದಲ್ಲಿ ಇಂತಹ ಕ್ರಮವು ಲಿಂಗ ತಾರತಮ್ಯ ನಿವಾರಿಸುವಲ್ಲಿ ಮಹತ್ವದ ಪಾತ್ರ ವಹಿಸಲಿದೆ. ಈ ಕ್ರಮದ ಹಿಂದೆ ಯಾವುದೇ ರಾಜಕೀಯ ಉದ್ದೇಶವಿಲ್ಲ ಎಂದು ಸ್ಪಷ್ಟಪಡಿಸಿದರು.

ಕಾಂಗ್ರೆಸ್ 50 ಸ್ಥಾನವು ಗೆಲ್ಲುವುದಿಲ್ಲ: ರಾಜ್ಯದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು 130 ಸ್ಥಾನಗಳನ್ನು ಗೆಲ್ಲಲಿದೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಹೇಳಿಕೆಗೆ ಪ್ರತಿಕ್ರಿಯಿಸಿದ ಪ್ರಕಾಶ್ ಜಾವಡೇಕರ್, ಕಾಂಗ್ರೆಸ್ ಈ ಬಾರಿ 50 ಸ್ಥಾನಗಳನ್ನು ಗೆಲ್ಲುವುದಿಲ್ಲ ಎಂದರು

ರಾಜ್ಯದಲ್ಲಿ ಕಾಂಗ್ರೆಸ್ ಈ ಬಾರಿ ಹೀನಾಯ ಸೋಲು ಅನುಭವಿಸಲಿದೆ. ಬಿಜೆಪಿ ನಿಚ್ಚಳ ಬಹುಮತ ಗಳಿಸುವ ಮೂಲಕ ಅಧಿಕಾರಕ್ಕೆ ಬರಲಿದೆ. ಕಾಂಗ್ರೆಸ್ ಪಕ್ಷದ ಕಾರ್ಯವೈಖರಿಗೆ ಇಡೀ ದೇಶದಲ್ಲಿ ಆಕ್ರೋಶವಿದೆ. ಕಳೆದ ನಾಲ್ಕು ವರ್ಷಗಳಲ್ಲಿ 12 ರಾಜ್ಯಗಳಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿದೆ ಎಂದು ಅವರು ಹೇಳಿದರು.

ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತ ವಿರೋಧಿ ಅಲೆ ಎದುರಿಸುತ್ತಿದೆ. ಕಳೆದ ಐದು ವರ್ಷಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರವು ಏನು ಮಾಡಿದೆ ಎಂಬುದನ್ನು ಜನರೇ ಕೇಳುತ್ತಿದ್ದಾರೆ. ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ಕಡಿಮೆ ಆಗುತ್ತಿದ್ದು, ರಾಜ್ಯದಲ್ಲಿ ಮಾತ್ರ ಹೆಚ್ಚುತ್ತಿವೆ ಎಂದು ಅವರು ಆರೋಪಿಸಿದರು.

ಸ್ವತಃ ಸಿದ್ದರಾಮಯ್ಯ ಆತಂಕಗೊಂಡಿದ್ದು, ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆಗೆ ಮುಂದಾಗಿದ್ದಾರೆ. ಮಾಜಿ ಸಚಿವ ಅಂಬರೀಶ್ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಲು ಹಿಂದೇಟು ಹಾಕುತ್ತಿದ್ದಾರೆ. ಕಾಂಗ್ರೆಸ್ಸಿನ ಹಲವಾರು ಹಾಲಿ ಶಾಸಕರು ತಮ್ಮ ಸ್ವಂತ ಕ್ಷೇತ್ರದಲ್ಲಿ ಗೆಲ್ಲುವ ಸಾಧ್ಯತೆಯಿಲ್ಲ. ರಾಜ್ಯದ ಜನರು ಈ ಬಾರಿ ಬದಲಾವಣೆ ತರಲು ಬಯಸಿದ್ದಾರೆ ಎಂದು ಪ್ರಕಾಶ್ ಜಾವಡೇಕರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News