ಎಂಇಪಿ ಬಿಜೆಪಿಗೆ ಪರೋಕ್ಷವಾಗಿ ಬೆಂಬಲಿಸುವ ಪಕ್ಷ: ಕೆಪಿಸಿಸಿ ಅಲ್ಪಸಂಖ್ಯಾತ ಘಟಕ ಆರೋಪ

Update: 2018-04-21 15:47 GMT

ಬೆಂಗಳೂರು, ಎ.21: ಮಹಿಳಾ ಎಂಪವರ್‌ಮೆಂಟ್ ಪಾರ್ಟಿ(ಎಂಇಪಿ) ಪಕ್ಷವು ಅಲ್ಪಸಂಖ್ಯಾತರ ಮತಗಳನ್ನು ವಿಭಜನೆ ಮಾಡುವ ಮೂಲಕ ಬಿಜೆಪಿಗೆ ಪರೋಕ್ಷವಾಗಿ ಬೆಂಬಲಿಸುವ ಹುನ್ನಾರ ಮಾಡುತ್ತಿದೆ ಎಂದು ಕೆಪಿಸಿಸಿ ಅಲ್ಪಸಂಖ್ಯಾತ ಘಟಕ ಆರೋಪಿಸಿದೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಘಟಕದ ಅಧ್ಯಕ್ಷ ವೈ.ಸಯೀದ್ ಅಹಮದ್,ಕಳೆದ 6 ತಿಂಗಳ ಹಿಂದೆ ಹೈದರಾಬಾದ್‌ನಲ್ಲಿ ಆರಂಭವಾದ ಎಂಇಪಿ ಪಕ್ಷ ಜಾತ್ಯತೀತ ಪಕ್ಷ ಎಂದು ಪ್ರಚಾರ ಮಾಡುತ್ತಿದೆ. ಆದರೆ, ಪರೋಕ್ಷವಾಗಿ ಕೋಮುವಾದಿ ಪಕ್ಷಗಳಿಗೆ ಸಹಾಯ ಮಾಡುತ್ತಿದೆ ಎಂಬ ಅನುಮಾನ ಮೂಡುತ್ತಿದೆ ಎಂದು ಹೇಳಿದರು.

ತ್ರಿವಳಿ ತಲಾಕ್ ಹಾಗೂ ಪ್ರಧಾನಿ ಮೋದಿಯ ಕಾರ್ಯ ವೈಖರಿಯನ್ನು ಬಣ್ಣಿಸುತ್ತಾ ಅಲ್ಪಸಂಖ್ಯಾತರ ನಡುವೆ ನಾವು ಮಹಿಳೆಯರ ಪರ ಎಂದು ಹೇಳುತ್ತಿದ್ದಾರೆ. ಈ ಮೂಲಕ ಮಹಿಳೆಯರಲ್ಲಿ ಗೊಂದಲದ ವಾತಾವರಣ ಸೃಷ್ಟಿಸುವ ಪ್ರಯತ್ನ ಮಾಡುತ್ತಿದ್ದಾರೆ. ಒಟ್ಟಾರೆಯಾಗಿ ಮುಂದಿನ ಚುನಾವಣೆಯಲ್ಲಿ ಅಲ್ಪಸಂಖ್ಯಾತರ ಮತಗಳನ್ನು ವಿಂಗಡನೆ ಮಾಡಿ ಕೋಮುವಾದಿ ಪಕ್ಷಕ್ಕೆ ಸಹಾಯ ಮಾಡುವುದು ಅವರ ಅಜೆಂಡವಾಗಿದೆ ಎಂದು ದೂರಿದರು.

ಇತ್ತೀಚಿಗೆ ನಗರದ ಖಾಸಗಿ ಹೊಟೇಲ್‌ನಲ್ಲಿ ಅಲ್ ಜಮಾತುಜ್ ಜೊಹ್ರಾ ಎಜುಕೇಷನಲ್ ಟ್ರಸ್ಟ್ ಹೆಸರಿನಲ್ಲಿ ಆಯೋಜಿಸಿದ್ದ ‘ಶಿಕ್ಷಣ ಮತ್ತು ವೃತ್ತಿಪರತೆ’ ಎಂಬ ವಿಚಾರ ಸಂಕಿರಣದಲ್ಲಿ ಎಂಇಪಿ ಪಕ್ಷವೇ ಪ್ರಮುಖ ಸೂತ್ರದಾರಿಯಾಗಿದೆ. ಇಲ್ಲಿ ಶಿಕ್ಷಣಕ್ಕೆ ಸಂಬಂಧಿಸಿದ ಒಂದು ಚರ್ಚೆಯೂ ನಡೆದಿಲ್ಲ. ಎಲ್ಲವೂ ರಾಜಕೀಯ ಪ್ರೇರಿತ ಚರ್ಚೆಗಳು ನಡೆದಿವೆ ಎಂದ ಅವರು, ಕಾರ್ಯಕ್ರಮದ ಆಯೋಜಕರಲ್ಲಿ ಒಬ್ಬರಾದ ಸುಹೇಲ್ ಖಂಡವಾನಿ ಎಂಇಪಿ ಪಕ್ಷದ ಅಧ್ಯಕ್ಷೆಯ ಪರಮಾಪ್ತ ಹಾಗೂ ಮುಂಬೈನ ಬಿಜೆಪಿ ನಾಯಕನಾಗಿದ್ದಾರೆ ಎಂದು ಹೇಳಿದರು.

ಎಂಐಎಂ ಹಾಗೂ ಎಸ್‌ಡಿಪಿಐ ಪಕ್ಷಗಳು ಜಾತ್ಯತೀತ ಮತಗಳನ್ನು ಹೊಡೆದು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಜಾತ್ಯತೀತ ಪಕ್ಷಗಳಿಗೆ ತೊಂದರೆಯನ್ನುಂಟು ಮಾಡುವ ಕೆಲಸ ಮಾಡುತ್ತಿವೆ. ಹೀಗಾಗಿ, ಈ ಚುನಾವಣೆಯಲ್ಲಿ ರಾಜ್ಯದ ಅಭಿವೃದ್ಧಿ ಹಾಗೂ ಸಾಮರಸ್ಯ ಮತ್ತು ಸೌಹಾರ್ದತೆಯ ವಾತಾವರಣವನ್ನು ಸೃಷ್ಟಿ ಮಾಡಲು ಪಣ ತೊಟ್ಟಿರುವ ಪಕ್ಷಗಳಿಗೆ ಬೆಂಬಲಿಸಬೇಕು ಎಂದು ಅವರು ಕೋರಿದರು.

ಸುದ್ದಿಗೋಷ್ಠಿಯಲ್ಲಿ ಬೆಂಗಳೂರು ಉತ್ತರ ಜಿಲ್ಲೆಯ ಫಾರೂಕ್ ಪಾಷ, ದಕ್ಷಿಣ ಜಿಲ್ಲೆಯ ಅಹಮದ್ ಶೇಖ್ ಹಾಗೂ ಮಾಧ್ಯಮ ಘಟಕದ ಸದಸ್ಯೆ ಡಾ.ಚಮೆನ್ ಪರ್ಜಾನ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News