ಜಯನಗರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ರವಿಕೃಷ್ಣಾರೆಡ್ಡಿ ನಾಮಪತ್ರ ಸಲ್ಲಿಕೆ

Update: 2018-04-21 15:54 GMT

ಬೆಂಗಳೂರು, ಎ.21: ಜಯನಗರ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ರವಿಕೃಷ್ಣಾರೆಡ್ಡಿ ಹಿರಿಯ ಸ್ವಾತಂತ್ರ ಹೋರಾಟಗಾರರಾದ ಎಚ್.ಎಸ್.ದೊರೆಸ್ವಾಮಿ ನೇತೃತ್ವದಲ್ಲಿ ನಾಮಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಇಂದಿನ ಚುನಾವಣೆಗಳು ಹಣ, ಹೆಂಡದ ಮೇಲೆ ನಡೆಯುತ್ತಿವೆ. ಆದರೆ, ಈ ಬಾರಿ ನಾವು ಓಟು ಕೊಡಿ-ನೋಟು ಕೊಡಿ ಎಂದು ಚುನಾವಣೆಯನ್ನು ಎದುರಿಸುತ್ತಿದ್ದೇವೆ. ಈ ಅಭಿಯಾನದ ಮೂಲಕ ಸಂಗ್ರಹವಾದ ದೇಣಿಗೆ ಹಣದಿಂದಲೇ ಚುನಾವಣೆ ಖರ್ಚು-ವೆಚ್ಚ ಭರಿಸಲಾಗುತ್ತಿದೆ ಎಂದು ಹೇಳಿದರು.

ನನ್ನ ನಾಮಪತ್ರಕ್ಕೆ ಹಿರಿಯ ಸ್ವಾತಂತ್ರ ಹೋರಾಟಗಾರರಾದ ದೊರೆಸ್ವಾಮಿ ಪ್ರಥಮ ಸೂಚಕರಾಗಿದ್ದಾರೆ. ಅಲ್ಲದೆ, ಶಾಂತವೇರಿ ಗೋಪಾಲಗೌಡರ ಆದರ್ಶದಲ್ಲಿ ಚುನಾವಣಾ ಖರ್ಚು ವೆಚ್ಚಕ್ಕಾಗಿ ನಡೆಸುತ್ತಿರುವ ಒಂದು ಓಟು ಕೊಡಿ-ನೋಟು ಕೊಡಿ ಅಭಿಯಾನದ ಮೂಲಕ ಸಂಗ್ರಹಿಸಿರುವ ದೇಣಿಗೆಯ ಹಣದಿಂದ ಭರಿಸಲಾಯಿತು. ಈ ದೇಣಿಗೆಗೂ ದೊರೆಸ್ವಾಮಿಯವರು ತಮ್ಮ ಕಾಣಿಕೆ ನೀಡಿದ್ದಾರೆ ಎಂದು ಸ್ಮರಿಸಿದರು.

ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದು, ಅಭ್ಯರ್ಥಿಗಳು ಚುನಾವಣೆಗಳಲ್ಲೇ ಅಕ್ರಮ, ಅನಾಚಾರವೆಸಗಿ, ಆಯ್ಕೆಯಾಗಿ ಮುಂದಿನ ದಿನಗಳಲ್ಲಿ ಮತ್ತಷ್ಟು ಭ್ರಷ್ಟಾಚಾರ ಮಾಡಲು ಅಣಿಯಾಗುತ್ತಿದ್ದಾರೆ. ಇದನ್ನು ನಿಲ್ಲಿಸಬೇಕಾಗಿದೆ. ಹೀಗಾಗಿ, ಜಯನಗರದಲ್ಲಿ ನಾವು ಒಂದು ಮಾದರಿ ಚುನಾವಣೆಯನ್ನು ಮಾಡುತ್ತಿದ್ದೇವೆ. ಇದು ಕೇವಲ ಒಬ್ಬ ರವಿಕೃಷ್ಣಾ ರೆಡ್ಡಿಯ ಹೋರಾಟವಲ್ಲ, ರಾಜ್ಯದ ಅನೇಕ ಹೋರಾಟಗಾರರ ಮತ್ತು ಸಜ್ಜನರ ಹೋರಾಟವಾಗಿದೆ ಎಂದರು.

ನಾಮಪತ್ರ ಸಲ್ಲಿಸುವ ಮೊದಲು ಜಯನಗರದ ರಾಗಿಗುಡ್ಡದ ಬಳಿಯಿಂದ ವಿವಿಧ ಭಾಗಗಳಿಂದ ಬಂದಿದ್ದ ನೂರಾರು ಕಾರ್ಯಕರ್ತರು ಪಾದಯಾತ್ರೆ ಮೂಲಕ ಚುನಾವಣಾಧಿಕಾರಿ ಕಚೇರಿಯವರೆಗೂ ಬಂದು ನಾಮಪತ್ರ ಸಲ್ಲಿಕೆಗೆ ಬೆಂಬಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News