ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ: ಕೇಂದ್ರದ ಸುಗ್ರೀವಾಜ್ಞೆಯ ಮುಖ್ಯಾಂಶಗಳು

Update: 2018-04-21 17:17 GMT

 ಹೊಸದಿಲ್ಲಿ,ಎ.21: ಅತ್ಯಾಚಾರ ಕೃತ್ಯಗಳಿಗೆ ಕಠಿಣ ಶಿಕ್ಷೆಯನ್ನು ವಿಧಿಸುವ ಹಾಗೂ ಮಹಿಳೆಯರು ಮತ್ತು ಮಕ್ಕಳಲ್ಲಿ ಸುರಕ್ಷಿತತೆಯ ಭಾವನೆಯನ್ನು ಮೂಡಿಸುವ ಮಹತ್ವದ ಸುಗ್ರೀವಾಜ್ಞೆಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಂಪುಟವು ಶನಿವಾರ ಅನುಮೋದನೆ ನೀಡಿದೆ.

 2018ರ ಕ್ರಿಮಿನಲ್ ಕಾನೂನು (ತಿದ್ದುಪಡಿ) ಅಧ್ಯಾದೇಶದಲ್ಲಿ ಮಾಡಲಾದ ಪ್ರಸ್ತಾಪಿತ ಬದಲಾವಣೆಗಳಲ್ಲಿ, ಅಪ್ರಾಪ್ತ ವಯಸ್ಸಿನ ಮಕ್ಕಳ ಅತ್ಯಾಚಾರಿಗಳಿಗೆ ಮರಣದಂಡನೆ, ಅತ್ಯಾಚಾರದ ಪ್ರಕರಣಗಳ ತ್ವರಿತ ವಿಚಾರಣೆ, ಅತ್ಯಾಚಾರ ಪ್ರಕರಣದ ಅಪರಾಧಿಗಳಿಗೆ ವಿಧಿಸಲಾಗುವ ಕನಿಷ್ಠ ಶಿಕ್ಷೆಯ ಪ್ರಮಾಣವನ್ನು ಹೆಚ್ಚಿಸುವುದು ಹಾಗೂ ಮಕ್ಕಳ ಅತ್ಯಾಚಾರ ಆರೋಪಿಗಳಿಗೆ ಜಾಮೀನು ಬಿಡುಗಡೆಯನ್ನು ರದ್ದುಪಡಿಸುವುದು ಒಳಗೊಂಡಿವೆ.

 ಅತ್ಯಾಚಾರ ಪ್ರಕರಣಗಳ ವಿಚಾರಣೆಗೆ ನೂತನ ತ್ವರಿತ ನ್ಯಾಯಾಲಯಗಳ ಸ್ಥಾಪನೆ ಸೇರಿದಂತೆ ಸರಣಿ ಕ್ರಮಗಳನ್ನು ಜಾರಿಗೊಳಿಸಲು ಕೂಡಾ ಕೇಂದ್ರ ಸಂಪುಟ ನಿರ್ಧರಿಸಿದೆ.

2018ರ ಕ್ರಿಮಿನಲ್ ಕಾನೂನು (ತಿದ್ದುಪಡಿ) ಅಧ್ಯಾದೇಶದ ಪ್ರಮುಖ ಅಂಶಗಳನ್ನು ಇಲ್ಲಿ ನೀಡಲಾಗಿದೆ.

►ಮಹಿಳೆಯರ ಅತ್ಯಾಚಾರಕ್ಕೆ ವಿಧಿಸಲಾಗುವ ಕಠಿಣ ಶಿಕ್ಷೆಯ ಪ್ರಮಾಣವನ್ನು ಏಳು ವರ್ಷಗಳಿಂದ 10 ವರ್ಷಗಳಿಗೆ ಏರಿಕೆ ಮಾಡಲಾಗಿದ್ದು, ಅದನ್ನು ಅಜೀವ ಕಾರಾಗೃಹವಾಸದ ಶಿಕ್ಷೆಯಾಗಿ ವಿಸ್ತರಿಸಬಹುದಾಗಿದೆ.

►ಒಂದು ವೇಳೆ ಅತ್ಯಾಚಾರ ಸಂತ್ರಸ್ತೆ(ಸ್ತ) 16 ವರ್ಷ ವಯಸ್ಸಿನವರಾಗಿದ್ದಲ್ಲಿ ಅಪರಾಧಿಗೆ ವಿಧಿಸುವ ಶಿಕ್ಷೆಯ ಕನಿಷ್ಠ ಪ್ರಮಾಣವನ್ನು 10 ವರ್ಷಗಳಿಂದ 20 ವರ್ಷಗಳಿಗೆ ಹೆಚ್ಚಿಸಲಾಗಿದ್ದು, ಅದನ್ನು ಜೀವಾವಧಿ ಶಿಕ್ಷೆಯವರೆಗೂ (ಅಪರಾಧಿಯು ಜೀವನಪೂರ್ತಿ ಕಾರಾಗೃಹದಲ್ಲೇ ಕಳೆಯುವುದು) ವಿಸ್ತರಿಸಬಹುದಾಗಿದೆ.

►16 ವರ್ಷದೊಳಗಿನ ಬಾಲಕಿಯ ಸಾಮೂಹಿಕ ಅತ್ಯಾಚಾರ ಪ್ರಕರಣಗಳಲ್ಲಿ ಏಕರೂಪವಾಗಿ ಜೀವಾವಧಿ ಶಿಕ್ಷೆ ವಿಧಿಸಲಾಗುವುದು.

►12 ವರ್ಷದೊಳಗಿನ ಬಾಲಕಿಯ ಅತ್ಯಾಚಾರಕ್ಕೆ ಅತ್ಯಂತ ಕಠಿಣ ಶಿಕ್ಷೆಯನ್ನು ವಿಧಿಸಲಾಗುವುದು. ಈ ಅಪರಾಧಕ್ಕೆ 20 ವರ್ಷಗಳ ಜೈಲು ವಾಸ ಕನಿಷ್ಠ ಶಿಕ್ಷೆಯಾಗಿದ್ದು, ಅಪರಾಧಿಗೆ ಜೀವಾವಧಿ ಶಿಕ್ಷೆ ಅಥವಾ ಅಜೀವಕಾರಾಗೃಹವಾಸ ಕೂಡಾ ವಿಧಿಸಬಹುದಾಗಿದೆ.

►12 ವರ್ಷದೊಳಗಿನ ಬಾಲಕಿಯ ಅತ್ಯಾಚಾರ ಪ್ರಕರಣಗಳಲ್ಲಿ ಜೀವಾವಧಿ ಅಥವಾ ಮರಣದಂಡನೆಯನ್ನು ವಿಧಿಸಲಾಗುತ್ತದೆ.

ತ್ವರಿತ ತನಿಖೆ ಹಾಗೂ ವಿಚಾರಣೆ

►ಎಲ್ಲಾ ಅತ್ಯಾಚಾರ ಪ್ರಕರಣಗಳ ತನಿಖೆಯನ್ನು ಕಡ್ಡಾಯವಾಗಿ ಎರಡು ತಿಂಗಳೊಳಗೆ ಪೂರ್ಣಗೊಳಿಸಬೇಕಾಗಿದೆ.

►ಎಲ್ಲಾ ಅತ್ಯಾಚಾರ ಪ್ರಕರಣಗಳ ನ್ಯಾಯಾಂಗ ವಿಚಾರಣೆಯನ್ನು ಎರಡು ತಿಂಗಳೊಳಗೆ ಪೂರ್ಣಗೊಳಿಸಬೇಕಾಗುತ್ತದೆ.

►ಮೇಲ್ಮನವಿಗಳನ್ನು ಆರು ತಿಂಗಳೊಳಗೆ ಇತ್ಯರ್ಥಗೊಳಿಸಬೇಕಾಗುತ್ತದೆ.

 ಜಾಮೀನು ಶಿಕ್ಷೆಗೆ ನಿರ್ಬಂಧಗಳು:

►16 ವರ್ಷದೊಳಗಿನ ಬಾಲಕಿಯ ಅತ್ಯಾಚಾರ ಅಥವಾ ಸಾಮೂಹಿಕ ಅತ್ಯಾಚಾರದ ಆರೋಪಿಗೆ ನಿರೀಕ್ಷಣಾ ಜಾಮೀನು ನೀಡುವುದಕ್ಕೆ ಯಾವುದೇ ಅವಕಾಶವಿಲ್ಲ.

►16 ವರ್ಷಕ್ಕಿಂತ ಕೆಳವಯಸ್ಸಿನ ಬಾಲಕಿಯರ ಅತ್ಯಾಚಾರ ಪ್ರಕರಣಗಳಲ್ಲಿ ಆರೋಪಿಯ ಜಾಮೀನು ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಳ್ಳುವ ಮೊದಲು ನ್ಯಾಯಾಲಯವು ಸಾರ್ವಜನಿಕ ಅಭಿಯೋಜಕರು (ಪಬ್ಲಿಕ್ ಪ್ರಾಸಿಕ್ಯೂಟರ್) ಹಾಗೂ ಸಂತ್ರಸ್ತ ಬಾಲಕಿಯನ್ನು ಪ್ರತಿನಿಧಿಸುವವರಿಗೆ 15 ದಿನಗಳ ನೋಟಿಸ್ ನೀಡಬೇಕು.

►ರಾಜ್ಯ ಸರಕಾರ, ಕೇಂದ್ರಾಡಳಿತ ಪ್ರದೇಶಗಳು ಹಾಗೂ ಹೈಕೋಟ್‌ಗ ಸಮಾಲೋಚನೆಯೊಂದಿಗೆ ನೂತನ ತ್ವರಿತ ವಿಚಾರಣಾ ನ್ಯಾಯಾಲಯಗಳನ್ನು ಸ್ಥಾಪಿಸಲಾಗುವುದು.

►ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ಸಮಾಲೋಚನೆಯೊಂದಿಗೆ ಸಾರ್ವಜನಿಕ ಅಭಿಯೋಜಕರ ಹುದ್ದೆಗಳಿಗೆ ನೂತನ ನೇಮಕಾತಿಯನ್ನು ಮಾಡಲಾಗುವುದು.

►ಅತ್ಯಾಚಾರ ಪ್ರಕರಣಗಳ ತನಿಖೆಗಾಗಿ ಎಲ್ಲಾ ಪೊಲೀಸ್ ಠಾಣೆಗಳು ಹಾಗೂ ಆಸ್ಪತ್ರೆಗಳಲ್ಲಿ ವಿಶೇಷ ಅಪರಾಧವಿಧಿವಿಧಾನ (ಫಾರೆನ್ಸಿಕ್) ಕಿಟ್‌ಗಳನ್ನು ಒದಗಿಸಲಾಗುವುದು.

►ಅತ್ಯಾಚಾರ ಪ್ರಕರಣಗಳ ತನಿಖೆಗಾಗಿ ಸಮರ್ಪಣಾ ಮನೋಭಾವದ ಮಾನವಸಂಪನ್ಮೂಲವನ್ನು ಕಾಲಮಿತಿಯ ಆಧಾರದಲ್ಲಿ ಒದಗಿಸಲಾಗುವುದು.

►ವಿಶೇಷವಾಗಿ ಅತ್ಯಾಚಾರ ಪ್ರಕರಣಗಳ ತನಿಖೆಗಾಗಿ ಪ್ರತಿಯೊಂದು ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶದಲ್ಲಿ ವಿಶೇಷ ಫಾರೆನ್ಸಿಕ್ ಪ್ರಯೋಗಾಲಯಗಳನ್ನು ಸ್ಥಾಪಿಸಲಾಗುವುದು.

►ಲೈಂಗಿಕ ಅಪರಾಧಿಗಳ ರಾಷ್ಟ್ರೀಯ ದತ್ತಾಂಶ ಹಾಗೂ ಅವರ ವೈಯಕ್ತಿಕ ವಿವರಗಳನ್ನು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ಇರಿಸಿಕೊಳ್ಳಲಿದೆ.

►ಈ ದತ್ತಾಂಶಗಳನ್ನು ಶಂಕಿತರನ್ನು ಪತ್ತೆಹಚ್ಚಲು, ಅವರ ಮೇಲೆ ನಿಗಾವಿರಿಸಲು ಹಾಗೂ ಗುರುತುದೃಢೀಕರಣಕ್ಕೆ ಪೊಲೀಸರು ಬಳಸಿಕೊಳ್ಳಲಿದ್ದಾರೆ.

►ಅತ್ಯಾಚಾರ ಸಂತ್ರಸ್ತರಿಗೆ ಏಕಗವಾಕ್ಷಿ ಕೇಂದ್ರದ ಮೂಲಕ ನೆರವು ನೀಡುವ ಪ್ರಸಕ್ತ ಯೋಜನೆಯನ್ನು ದೇಶದ ಉಳಿದ ಜಿಲ್ಲೆಗಳಿಗೂ ವಿಸ್ತರಿಸಲಾಗುವುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News