ಹಗಲು-ರಾತ್ರಿ ಟೆಸ್ಟ್ ಆಡಲು ಭಾರತ ಹಿಂದೇಟು

Update: 2018-04-21 18:54 GMT

  ಮುಂಬೈ, ಎ.21: ಹಗಲು-ರಾತ್ರಿ ಟೆಸ್ಟ್ ಪಂದ್ಯ ಆಡುವ ಯೋಜನೆಯನ್ನು ಬಿಸಿಸಿಐ ತಳ್ಳಿ ಹಾಕಿದೆ. ಅಡಿಲೇಡ್‌ನಲ್ಲಿ ಆಸ್ಟ್ರೇಲಿಯ ವಿರುದ್ಧ ನಡೆಯಲಿರುವ ಹಗಲು-ರಾತ್ರಿ ಟೆಸ್ಟ್ ಪಂದ್ಯವನ್ನು ಆಡದಿರಲು ನಿರ್ಧರಿಸಿದೆ. ಈ ವರ್ಷಾಂತ್ಯದಲ್ಲಿ ಭಾರತ ವಿರುದ್ಧದ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯವನ್ನು ಹಗಲು-ರಾತ್ರಿ ಪಂದ್ಯವಾಗಿ ಆಯೋಜಿಸಲು ಕ್ರಿಕೆಟ್ ಆಸ್ಟ್ರೇಲಿಯ (ಸಿಎ)ಯೋಜನೆ ಹಾಕಿಕೊಂಡಿತ್ತು. ಆದರೆ, ಬಿಸಿಸಿಐ 5 ದಿನಗಳ ಕ್ರಿಕೆಟ್‌ನ್ನು ಹೊನಲು-ಬೆಳಕಿನಡಿ ಆಡಲು ಹಿಂದೇಟು ಹಾಕುತ್ತಿದೆ. ಹಗಲು-ರಾತ್ರಿ ಟೆಸ್ಟ್ ಪಂದ್ಯಕ್ಕೆ ಭವಿಷ್ಯದಲ್ಲಿ ಯಾವುದೇ ಲಾಭವಿಲ್ಲ ಎಂದು ಬಿಸಿಸಿಐ ಭಾವಿಸಿದೆ.

 2019ರ ವಿಶ್ವಕಪ್ ಬಳಿಕ ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್‌ನ್ನು ಪರಿಚಯಿಸಲಿದೆ. ಇದರಲ್ಲಿ ನಾಲ್ಕು ದಿನಗಳ ಟೆಸ್ಟ್, ಪಿಂಕ್ ಬಾಲ್ ಅಥವಾ ಡೇ-ನೈಟ್ ಟೆಸ್ಟ್ ಗಳಿಲ್ಲ. ಈ ವರ್ಷದ ಅಕ್ಟೋಬರ್‌ನಲ್ಲಿ ವೆಸ್ಟ್‌ಇಂಡೀಸ್ ವಿರುದ್ಧ ಡೇ-ನೈಟ್ ಟೆಸ್ಟ್ ಆಡುವ ಯೋಜನೆಯನ್ನು ಕೈಬಿಡಲು ಭಾರತ ನಿರ್ಧರಿಸಿದೆ.

 ವೆಸ್ಟ್‌ಇಂಡೀಸ್ ವಿರುದ್ಧ ರಾಜ್‌ಕೋಟ್‌ನಲ್ಲಿ ನಡೆಯಲಿರುವ ಎರಡು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯವನ್ನು ಡೇ-ನೈಟ್ ಟೆಸ್ಟ್ ಆಗಿ ಆಡಲು ಬಿಸಿಸಿಐ ಯೋಚಿಸಿತ್ತು. ಯುವ ಆಟಗಾರರಿಗೆ ರಾತ್ರಿ ವೇಳೆ ಪಿಂಕ್‌ಬಾಲ್‌ನಲ್ಲಿ ಆಡುವ ಅನುಭವ ಸಿಗಲಿ ಎನ್ನುವುದು ಬಿಸಿಸಿಐ ಬಯಕೆಯಾಗಿತ್ತು. ಆದರೆ ಇದೀಗ ಅದರ ಅಗತ್ಯವಿಲ್ಲ ಎಂದು ಬಿಸಿಸಿಐ ಮನಗಂಡಿದೆ. ಅಡಿಲೇಡ್‌ನಲ್ಲಿ ಆಸ್ಟ್ರೇಲಿಯ ವಿರುದ್ಧ ಹಗಲು-ರಾತ್ರಿ ಪಂದ್ಯವನ್ನು ಆಡದಿರಲು ನಿರ್ಧರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News