ಸಿಜೆಐ ದೀಪಕ್ ಮಿಶ್ರಾ ಪದಚ್ಯುತಿ ವಾಗ್ದಂಡನೆ ಬಗ್ಗೆ ಖ್ಯಾತ ವಕೀಲ ಫಾಲಿ ನಾರಿಮನ್ ಹೇಳಿದ್ದೇನು?

Update: 2018-04-22 10:30 GMT

ಹೊಸದಿಲ್ಲಿ, ಎ.22: ಭಾರತದ ಮುಖ್ಯನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರ ವಾಗ್ದಂಡನೆ ಪ್ರಸ್ತಾಪ ಮಾಡಿರುವ ವಿರೋಧ ಪಕ್ಷಗಳ ಪ್ರಯತ್ನವು ಸುಪ್ರೀಂಕೋರ್ಟ್ ಇತಿಹಾಸದಲ್ಲೇ ಭಯಾನಕ, ಕರಾಳ ದಿನ. ಇದರಿಂದ ಸಾರ್ವಜನಿಕರಿಗೆ ನ್ಯಾಯಾಂಗದ ಮೇಲಿರುವ ನಂಬಿಕೆ ಇದರಿಂದ ಕುಸಿಯಲಿದೆ. ಆದರೆ ಆಡಳಿತಾರೂಢ ಪಕ್ಷ ಒಂದು ನಿರ್ದಿಷ್ಟ ತೀರ್ಪನ್ನು ಇಷ್ಟಪಡದಿದ್ದರೆ, ನ್ಯಾಯಮೂರ್ತಿಗಳ ವಿರುದ್ಧ ಸೇಡು ತೀರಿಸಿಕೊಳ್ಳುವ ಮಾರ್ಗವನ್ನು ಮುಕ್ತಗೊಳಿಸಿದಂತಾಗುತ್ತದೆ" ಎಂದು ಖ್ಯಾತ ವಕೀಲ, ಹಿರಿಯ ಕಾನೂನುತಜ್ಞ ಫಾಲಿ ನಾರಿಮನ್ ಹೇಳಿದ್ದಾರೆ.

"ಇದು ಅತ್ಯಂತ ಭಯಾನಕ ಕರಾಳ ದಿನ... ಬಹುಶಃ ಇದಕ್ಕಿಂತ ಕರಾಳ ದಿನ ಇರಲಾರದು. ನನ್ನ 67 ವರ್ಷದ ನನ್ನ ಅನುಭವದಲ್ಲಿ ಇಂಥ ದಿನವನ್ನು ಎಂದೂ ನೋಡಿಲ್ಲ" ಎಂದು ಸಂಡೇ ಎಕ್ಸ್ ಪ್ರೆಸ್‍ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಅಭಿಪ್ರಾಯಪಟ್ಟರು.

ಕಾಂಗ್ರೆಸ್ ನೇತೃತ್ವದ ವಿರೋಧ ಪಕ್ಷಗಳು ಮಾಡಿರುವ ಆರೋಪಗಳು, ಸುಪ್ರೀಂಕೋರ್ಟ್‍ನ ನಾಲ್ವರು ಹಿರಿಯ ನ್ಯಾಯಾಧೀಶರು ಜನವರಿ 12ರಂದು ಪತ್ರಿಕಾಗೋಷ್ಠಿಯಲ್ಲಿ ಮಾಡಿದ ಆರೋಪಕ್ಕೆ ಪೂರಕವಾಗಿಲ್ಲ. ವಿರೋಧ ಪಕ್ಷಗಳ ಒಂದು ಆರೋಪ ನಕಲಿಗೆ ಸಂಬಂಧಿಸಿದ್ದು. ಆದರೆ ನಾಲ್ವರು ನ್ಯಾಯಮೂರ್ತಿಗಳು ಈ ಆರೋಪ ಮಾಡಿಲ್ಲ. ಭಾರತದ ಮುಖ್ಯನ್ಯಾಯಮೂರ್ತಿ ವಿರುದ್ಧ ಆರೋಪ ಮಾಡುವಾಗ ಜಾಗರೂಕರಾಗಿರಬೇಕು. ಇದು ಅತ್ಯಂತ ಗಂಭೀರ ನಡೆ. ಪೂರಕ ಪುರಾವೆಗಳು ಬೇಕು. ಆರೋಪವನ್ನು ಸಾಬೀತುಪಡಿಸಬೇಕಾಗುತ್ತದೆ ಎಂದವರು ವಿವರಿಸಿದರು.

ಸಿಬಿಐ ವಿಶೇಷ ನ್ಯಾಯಾಧೀಶ ಬಿ.ಎಚ್.ಲೋಯಾ ಸಾವಿನ ಬಗ್ಗೆ ತನಿಖೆ ಅಗತ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಎ.19ರಂದು ತೀರ್ಪು ನೀಡಿರುವುದಕ್ಕೆ ಪ್ರತಿಯಾಗಿ ಪದಚ್ಯುತಿ ಪ್ರಸ್ತಾಪ ತರಲಾಗಿದೆಯೇ ಎಂಬ ಪ್ರಶ್ನೆಗೆ ಕಾಂಗ್ರೆಸ್ ನಾಯಕರಾದ ಗುಲಾಂ ನಬಿ ಆಝಾದ್ ಮತ್ತು ಕಪಿಲ್ ಸಿಬಲ್ ಅವರು, ಒಂದು ವಾರಕ್ಕೆ ಮುನ್ನ ಉಪರಾಷ್ಟ್ರಪತಿಗಳಿಗೆ ಇದನ್ನು ನೀಡಲಾಗಿದೆ ಎಂದು ಸ್ಪಷ್ಟಪಡಿಸಿದ್ದಾಗಿ ಅವರು ಬಹಿರಂಗಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News