1,308 ಮಹಿಳೆಯರು ಹಜ್ ಯಾತ್ರೆಗೆ ಪುರುಷ ಜೊತೆಗಾರನಿಲ್ಲದೆ ತೆರಳಲಿದ್ದಾರೆ: ನಖ್ವಿ

Update: 2018-04-22 17:21 GMT

ಮುಂಬೈ, ಎ.22: ಇದೇ ಮೊದಲ ಬಾರಿ ದೇಶದ 1308 ಮಹಿಳೆಯರು ಪುರುಷ ಜೊತೆಗಾರನಿಲ್ಲದೆ ಹಜ್ ಯಾತ್ರೆಗೆ ತೆರಳಲಿದ್ದಾರೆ ಎಂದು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಕ್ತಾರ್ ಅಬ್ಬಾಸ್ ನಖ್ವಿ ರವಿವಾರ ತಿಳಿಸಿದ್ದಾರೆ. ಹಜ್ ಯಾತ್ರಾರ್ಥಿಗಳಿಗಾಗಿ ಆಯೋಜಿಸಲಾಗಿದ್ದ ತರಬೇತಿ ಶಿಬಿರದಲ್ಲಿ ಪಾಲ್ಗೊಳ್ಳಲು ನಗರಕ್ಕೆ ಆಗಮಿಸಿದ್ದ ಸಚಿವರು ಈ ವಿಷಯವನ್ನು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಈ ಬಾರಿ ಹಜ್ ಯಾತ್ರೆ ಕೈಗೊಳ್ಳಲು 3,55, 604 ಅರ್ಜಿಗಳು ಬಂದಿದ್ದವು ಈ ಪೈಕಿ 1,89,217 ಪುರುಷರು ಮತ್ತು 1,66,387 ಮಹಿಳೆಯರಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಈ ವರ್ಷ ಒಟ್ಟಾರೆ 1,28,002 ಯಾತ್ರಾರ್ಥಿಗಳು ಹಜ್‌ಗೆ ತೆರಳಲಿದ್ದಾರೆ. ಈ ಪೈಕಿ ಮಹಿಳೆಯರ ಪಾಲು ಶೇ. 47. ಇನ್ನು 47,023 ಯಾತ್ರಾರ್ಥಿಗಳು ಖಾಸಗಿ ಟೂರ್ ಆಪರೇಟರ್‌ಗಳ ಮೂಲಕ ಹಜ್ ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ.

ಮಹಿಳಾ ಹಜ್ ಯಾತ್ರಿಗಳ ಸಹಾಯಕ್ಕಾಗಿ ಮಹಿಳಾ ಸಿಬ್ಬಂದಿಯನ್ನು ನೇಮಿಸಲಾಗುವುದು ಮತ್ತು ಯಾತ್ರಿಕರಿಗೆ ನೀಡಲಾದ ಸೌಲಭ್ಯಗಳ ಬಗ್ಗೆ ನಿಗಾಯಿಡಲಾಗುವುದು ಎಂದು ನಖ್ವಿ ತಿಳಿಸಿದ್ದಾರೆ.

ಈ ಹಿಂದೆ ಯಾತ್ರಿಕರು ಯಾವ ವಿಮಾನ ನಿಲ್ದಾಣದ ಮೂಲಕ ಹಜ್‌ಗೆ ತೆರಳಬೇಕು ಎಂದು ಸರಕಾರ ನಿಗದಿ ಮಾಡುತ್ತಿತ್ತು. ಆದರೆ ಈಗ ಯಾತ್ರಿಕರೇ ಆ ನಿರ್ಧಾರವನ್ನು ತೆಗೆದುಕೊಳ್ಳಬಹುದಾಗಿದೆ. ಹಾಗಾಗಿ ಯಾತ್ರಿಕರಿಗೆ ಸುಲಭವಾಗುವ ವಿಮಾನ ನಿಲ್ದಾಣದಿಂದಲೇ ಅವರು ಹಜ್ ಯಾತ್ರೆ ಕೈಗೊಳ್ಳಬಹುದಾಗಿದೆ. ಸರಕಾರದ ಈ ನಿರ್ಧಾರ ಹಜ್ ಯಾತ್ರಿಕರಿಗೆ ಬಹಳಷ್ಟು ಪ್ರಯೋಜನ ನೀಡಿದೆ ಎಂದು ಸಚಿವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News