ಮುಂಬೈ: ಎನ್‌ಕೌಂಟರ್‌ನಲ್ಲಿ 16 ಮಾವೋವಾದಿ ಉಗ್ರರ ಹತ್ಯೆ

Update: 2018-04-23 03:33 GMT

ಮುಂಬೈ, ಎ. 23: ಮಾವೋವಾದಿ ಉಗ್ರರ ಜತೆ ನಡೆದ ಭೀಕರ ಗುಂಡಿನ ಚಕಮಕಿಯಲ್ಲಿ ಮಹಾರಾಷ್ಟ್ರ ಪೊಲೀಸ್ ಪಡೆಯ ವಿಶೇಷ ದಾಳಿ ದಳ 16 ಮಂದಿ ಉಗ್ರರನ್ನು ಹತ್ಯೆ ಮಾಡಿದೆ. ದಕ್ಷಿಣ ಗಡ್‌ಚಿರೋಲಿ ಜಿಲ್ಲೆಯ ಕೇಶ್ವಾಪುರ ಅರಣ್ಯ ಪ್ರದೇಶದಲ್ಲಿ ಈ ಗುಂಡಿನ ಚಕಮಕಿ ನಡೆದಿದೆ.

ರವಿವಾರದ ಭೀಕರ ಹತ್ಯಾಕಾಂಡ, ಮಾವೋವಾದಿ ಉಗ್ರರಿಗೆ ಇತ್ತೀಚಿನ ದಿನಗಳಲ್ಲಿ ಆದ ಅತಿದೊಡ್ಡ ಹಿನ್ನಡೆ ಎಂದು ವಿಶ್ಲೇಷಿಸಲಾಗುತ್ತಿದೆ.

ಮೃತಪಟ್ಟವರಲ್ಲಿ ಇಬ್ಬರು ಮುಖಂಡರು ಮತ್ತು ಮೂವರು ಮಹಿಳೆಯರು ಸೇರಿದ್ದಾರೆ. 10 ಮಂದಿ ಬಂಡುಕೋರರು ಗಾಯಗೊಂಡಿದ್ದು, ಮೂರು ಗಂಟೆಗಳ ಹೋರಾಟದಲ್ಲಿ ಗಾಯಾಳುಗಳು ತಪ್ಪಿಸಿಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ಹೇಳಿವೆ.

"ತಡಗಾಂವ್‌ನಲ್ಲಿ ಸಿಪಿಐ (ಮಾವೋವಾದಿ) ಸಂಘಟನೆಯ ಪೆರಿಮಿಲಿ ದಳಂ ಚಲನವಲನಗಳ ಬಗ್ಗೆ ನಿಖರ ಮಾಹಿತಿ ಇತ್ತು. ಈ ಹಿನ್ನೆಲೆಯಲ್ಲಿ ಶನಿವಾರ ರಾತ್ರಿ ಕಾರ್ಯಾಚರಣೆ ಆರಂಭಿಸಲಾಗಿತ್ತು. ರವಿವಾರ ಬೆಳಗ್ಗೆ 9.30ರ ಸುಮಾರಿಗೆ ಕೆಲ ಗಂಟೆಗಳ ಗುಂಡಿನ ಚಕಮಕಿ ಆರಂಭವಾಯಿತು. ಸಂಘಟನೆಯ ಇಬ್ಬರು ವಿಭಾಗೀಯ ಮುಖಂಡರು ಕಾರ್ಯಾಚರಣೆಯಲ್ಲಿ ಹತರಾಗುತ್ತಿರುವುದು ಇದೇ ಮೊದಲು ಎಂದು ಡಿಐಜಿ ಅನುಷ್ ಶಿಂಧೆ ವಿವರಿಸಿದ್ದಾರೆ.

ಇಡೀ ಪ್ರದೇಶವನ್ನು ಪೊಲೀಸ್ ಪಡೆ ಸುತ್ತುವರಿದು, ಕಾರ್ಯಾಚರಣೆ ಕೈಗೊಂಡಿದೆ ಎಂದು ಐಜಿಪಿ ಶರದ್ ಶೆಲರ್ ವಿವರ ನೀಡಿದ್ದಾರೆ. ಕಾರ್ಯಾಚರಣೆಯಲ್ಲಿ ಮೃತಪಟ್ಟ ಮುಖಂಡರನ್ನು ಸಂಘಟನೆಯ ವಿಭಾಗೀಯ ಸಮಿತಿ ಸದಸ್ಯ ಸಾಯಿನಾಥ್ ಹಾಗೂ ಶ್ರೀನು ಎಂದು ಗುರುತಿಸಲಾಗಿದೆ. ಇಬ್ಬರೂ ತೆಲಂಗಾಣ ಮೂಲದವರಾಗಿದ್ದು, ಚಳವಳಿಯ ನೇತಾರರು ಎನಿಸಿಕೊಂಡಿದ್ದರು.

ಶ್ರೀನು ಪತ್ನಿ ಶ್ಯಾಮಲಾ, ಪಕ್ಷದ ನಿಧಿಯ 35 ಲಕ್ಷ ರೂಪಾಯಿ ನಗದಿನೊಂದಿಗೆ ಪರಾರಿಯಾಗಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ. ಈಕೆ 2012ರಲ್ಲಿ ತೆಲಂಗಾಣ ಪೊಲೀಸರ ಮುಂದೆ ಶರಣಾಗಿದ್ದಳು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News