ಅರುಣಾಚಲ ಪ್ರದೇಶದ 8 ಪೊಲೀಸ್ ಠಾಣೆಗಳಿಂದ, ಮೇಘಾಲಯದಿಂದ ಅಫ್ ಸ್ಪಾ ಕಾಯ್ದೆ ರದ್ದು

Update: 2018-04-23 14:47 GMT

ಹೊಸದಿಲ್ಲಿ, ಎ.23: ಮೇಘಾಲಯದಲ್ಲಿ ಜಾರಿಯಲ್ಲಿದ್ದ ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯ್ದೆ(ಎಎಫ್‌ಎಸ್‌ಪಿಎ)ಯನ್ನು ಕೇಂದ್ರ ಸರಕಾರ ಸಂಪೂರ್ಣ ರದ್ದುಗೊಳಿಸಿದ್ದು, ಅರುಣಾಚಲ ಪ್ರದೇಶದಲ್ಲಿ ಎಂಟು ಪೊಲೀಸ್ ಠಾಣಾ ವ್ಯಾಪ್ತಿಯಲ್ಲೂ ಈ ಕಾಯ್ದೆಯನ್ನು ರದ್ದುಗೊಳಿಸಲಾಗಿದೆ ಎಂದು ಗೃಹ ಇಲಾಖೆಯ ಪ್ರಕಟಣೆ ತಿಳಿಸಿದೆ.

 2017ರ ಸೆಪ್ಟೆಂಬರ್‌ವರೆಗೆ ಮೇಘಾಲಯದ ಶೇ.40ರಷ್ಟು ಪ್ರದೇಶಗಳಲ್ಲಿ ಕಾಯ್ದೆ ಜಾರಿಯಲ್ಲಿತ್ತು. ಆದರೆ ಇದೀಗ ರಾಜ್ಯ ಸರಕಾರದೊಡನೆ ಚರ್ಚಿಸಿದ ಬಳಿಕ ರಾಜ್ಯದಲ್ಲಿ ಸಂಪೂರ್ಣ ತೆರವುಗೊಳಿಸಲಾಗಿದೆ. ಇದೇ ರೀತಿ ಅರುಣಾಚಲಪ್ರದೇಶದ 16 ಪೊಲೀಸ್ ಠಾಣಾ ವ್ಯಾಪ್ತಿಯ ಪೈಕಿ 8ರಲ್ಲಿ ಈ ಕಾಯ್ದೆಯನ್ನು ಹಿಂಪಡೆಯಲಾಗಿದೆ. ಅಲ್ಲದೆ ಈಶಾನ್ಯ ರಾಜ್ಯಗಳಲ್ಲಿ ಶರಣಾಗತರಾಗುವ ಉಗ್ರಗಾಮಿಗಳಿಗೆ ‘ ಶರಣಾಗತಿ ತಥಾ ಪುನರ್ವಸತಿ ಯೋಜನೆ’ಯಡಿ ನೀಡಲಾಗುವ ಅನುದಾನವನ್ನು ಈಗಿನ 1 ಲಕ್ಷ ರೂ.ನಿಂದ 4 ಲಕ್ಷ ರೂ.ಗೆ ಹೆಚ್ಚಿಸಲು ಸಚಿವಾಲಯ ನಿರ್ಧರಿಸಿದೆ . 2018ರ ಎಪ್ರಿಲ್ 1ರಿಂದ ಇದು ಅನ್ವಯಿಸುತ್ತದೆ. ಈ ಪ್ರದೇಶದಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ಬಂಡುಕೋರರಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಶೇ.63ರಷ್ಟು ಇಳಿಕೆಯಾಗಿದೆ. ಅಲ್ಲದೆ ನಾಗರಿಕರ ಸಾವಿನ ಪ್ರಮಾಣದಲ್ಲಿ ಶೇ.83ರಷ್ಟು ಇಳಿಕೆ, ಭದ್ರತಾ ಪಡೆಗಳ ಸಾವು ನೋವಿನ ಪ್ರಕರಣದಲ್ಲಿ ಶೇ.40ರಷ್ಟು ಕಡಿಮೆಯಾಗಿದೆ. ಆದರೆ 2000ಕ್ಕೆ ಹೋಲಿಸಿದರೆ ಬಂಡಾಯ ಸಂಬಂಧಿ ಚಟುವಟಿಕೆ ಗಳಲ್ಲಿ ಶೇ.85ರಷ್ಟು ಇಳಿಕೆಯಾಗಿದೆ ಎಂದು ಸಚಿವಾಲಯ ತಿಳಿಸಿದೆ.

ಅಸ್ಸಾಂ, ಅರುಣಾಚಲ, ಮಣಿಪುರ, ಮೇಘಾಲಯ ಹಾಗೂ ತ್ರಿಪುರಾಗಳಲ್ಲಿ ತಲಾ 2 ರಂತೆ ಮೀಸಲು ಪಡೆಯ ತುಕಡಿಗಳನ್ನು ನಿಯೋಜಿಸಲಾಗುವುದು. ಈಶಾನ್ಯ ರಾಜ್ಯಗಳಲ್ಲಿ ನಿಯೋಜನೆಗೊಂಡಿರುವ ಕೇಂದ್ರೀಯ ಪಡೆಗಳ ಬದಲಿಗೆ ಈ ತುಕಡಿಗಳನ್ನು ನಿಯೋಜಿಸಲಾಗಿದೆ ಎಂದು ಕಳೆದ ತಿಂಗಳು ಗೃಹ ಇಲಾಖೆ ತಿಳಿಸಿತ್ತು.

 ಷರತ್ತು ಸಡಿಲಿಕೆ

  ಮಣಿಪುರ, ಮಿಝೋರಾಂ ಹಾಗೂ ನಾಗಾಲ್ಯಾಂಡ್‌ಗಳಿಗೆ ಭೇಟಿ ನೀಡುವ ವಿದೇಶಿ ಪ್ರವಾಸಿಗರಿಗೆ ನೀಡಲಾಗುವ ‘ನಿರ್ಬಂಧಿತ ಪ್ರದೇಶ ಅನುಮತಿ’, ‘ರಕ್ಷಿತ ಪ್ರದೇಶ ಅನುಮತಿ’ಯ ಷರತ್ತುಗಳನ್ನು ಸರಕಾರ ಸಡಿಲಿಸಿದೆ . ಆದರೆ ‘ಕಿರಿಕಿರಿ ತರುವ’ ರಾಷ್ಟ್ರಗಳಿಗೆ (ಪಾಕಿಸ್ತಾನ, ಚೀನಾ, ಅಪಘಾನಿಸ್ತಾನ ಸೇರಿದಂತೆ) ಈ ಸಡಿಲಿಕೆ ಅನ್ವಯಿಸುವುದಿಲ್ಲ ಎಂದು ಗೃಹ ಇಲಾಖೆ ಸ್ಪಷ್ಟಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News