ಸಿಆರ್‌ಝಡ್ ಕರಡು ಅಧಿಸೂಚನೆ ವೆಬ್‌ಸೈಟ್‌ನಲ್ಲಿ ಪ್ರಕಟ

Update: 2018-04-23 16:47 GMT

ಹೊಸದಿಲ್ಲಿ, ಎ.23: ಕೇಂದ್ರ ಸರಕಾರದ ಕರಾವಳಿ ನಿಯಂತ್ರಣ ವಲಯ (ಸಿಆರ್‌ಝಡ್) ಕರಡು ಅಧಿಸೂಚನೆ 2018ರಲ್ಲಿ ಸಿಆರ್‌ಝಡ್ ಕ್ಲಿಯರೆನ್ಸ್ ಪ್ರಕ್ರಿಯೆಯನ್ನು ಸರಳೀಕೃತಗೊಳಿಸಲಾಗಿದ್ದು, ಅಭಿವೃದ್ಧಿ ಚಟುವಟಿಕೆಗಳು ಹಾಗೂ ಪ್ರವಾಸೋದ್ಯಮ ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚುವರಿ ಭೂಮಿಯನ್ನು ಒದಗಿಸುವ ಬಗ್ಗೆ ಪ್ರಸ್ತಾಪಿಸಲಾಗಿದೆ. ಕರಡು ಅಧಿಸೂಚನೆಯನ್ನು ಪರಿಸರ ಸಚಿವಾಲಯದ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದ್ದು, ಸಲಹೆ, ಸೂಚನೆಗಳಿದ್ದರೆ 60 ದಿನಗಳೊಳಗೆ ಸಲ್ಲಿಸುವಂತೆ ಸಾರ್ವಜನಿಕರಿಗೆ ತಿಳಿಸಲಾಗಿದೆ.

ಇತ್ತೀಚೆಗೆ ವೆಬ್‌ಸೈಟ್‌ಗೆ ಅಪ್‌ಲೋಡ್ ಮಾಡಲಾಗಿರುವ ಈ ಅಧಿಸೂಚನೆಯನ್ನು ದಿಲ್ಲಿಯಲ್ಲಿ ಕುಳಿತುಕೊಂಡಿರುವ ಅಧಿಕಾರಿಗಳು ಸಿದ್ಧಪಡಿಸಿದ್ದಾರೆ. ಸಮುದ್ರದ ಬಗ್ಗೆ, ಸಮುದ್ರವು ಹೊಂದಿರುವ ವಿನಾಶಕಾರಿ ಶಕ್ತಿಯ ಬಗ್ಗೆ ಇವರಿಗೆ ತಿಳಿದಿಲ್ಲ ಎಂದು ಚೆನ್ನೈ ಮೂಲದ ಸಾಮಾಜಿಕ ಕಾರ್ಯಕರ್ತ ನಿತ್ಯಾನಂದ ಜಯರಾಮನ್ ಟೀಕಿಸಿದ್ದಾರೆ. ಈ ಕರಡು ಅಧಿಸೂಚನೆ ಅಭಿವೃದ್ಧಿ ರಹಿತ ವಲಯದ ವ್ಯಾಪ್ತಿಯನ್ನು ಕಿರಿದಾಗಿಸುತ್ತದೆ. ಈ ಮೂಲಕ ಅಂತರ್ ಉಬ್ಬರವಿಳಿತದ ಸೂಕ್ಷ್ಮ ಪ್ರದೇಶ ಹಾಗೂ ಗ್ರಾಮೀಣ ಪ್ರದೇಶಗಳನ್ನು ರಿಯಲ್ ಎಸ್ಟೇಟ್ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಪ್ರಕ್ರಿಯೆಗೆ ತೆರೆದಿಡುತ್ತದೆ ಎಂದು ‘ನಮತಿ ಎನ್‌ವೈರನ್‌ಮೆಂಟ್ ಜಸ್ಟಿಸ್ ಪ್ರೋಗ್ರಾಂ’ನ ಕಾನೂನು ಸಂಶೋಧನಾ ನಿರ್ದೇಶಕಿ ಕಾಂಚಿ ಕೊಹ್ಲಿ ಅಭಿಪ್ರಾಯಪಡುತ್ತಾರೆ. ಅಲ್ಲದೆ ಅಭಿವೃದ್ಧಿ ರಹಿತ ಪ್ರದೇಶದ ವಿಭಾಗದಿಂದ ಬಂದರು ವ್ಯಾಪ್ತಿಯೊಳಗಿನ ಪ್ರದೇಶಗಳಿಗೆ ವಿನಾಯಿತಿ ನೀಡುತ್ತದೆ ಎಂದು ಅವರು ತಿಳಿಸಿದ್ದಾರೆ. ಪ್ರಸ್ತಾಪಿತ ನಿಯಮಗಳು ಕರಾವಳಿ ಪ್ರದೇಶಗಳನ್ನು ವಾಣಿಜ್ಯಕ ಹಾಗೂ ಹೂಡಿಕೆಯ ಕೇಂದ್ರ ಸ್ಥಾನವನ್ನಾಗಿಸುವ ಸರಕಾರದ ನಿರ್ಧಾರಕ್ಕೆ ಪೂರಕವಾಗಿದೆ .ಆದರೆ ಮೀನುಗಾರಿಕೆಯನ್ನು ಜೀವನಾಧಾರವನ್ನಾಗಿಸಿಕೊಂಡಿರುವ ಜನರಿಗೆ ಹಾಗೂ ಪರಿಸರ ವ್ಯವಸ್ಥೆಗೆ ಸಹಾಯವಾಗುವಂತಹ ಅಂಶಗಳು ಕರಡು ಅಧಿಸೂಚನೆಯಲ್ಲಿಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ

ಕರಾವಳಿ ನಿಯಂತ್ರಣ ಕಾಯ್ದೆಯನ್ನು ದುರ್ಬಲಗೊಳಿಸದಂತೆ ಹಾಗೂ ಕಾಯ್ದೆಗೆ ತಿದ್ದುಪಡಿ ತರಲು ಯಾವುದಾದರೂ ಪಾರದರ್ಶಕ ಪ್ರಕ್ರಿಯೆ ನಡೆಸುವಂತೆ ಮೀನುಗಾರರ ಸಂಘಟನೆಗಳು, ಕರಾವಳಿಯ ಸಮುದಾಯ ಹಾಗೂ ಸಂಶೋಧಕರು ಸಚಿವಾಲಯಕ್ಕೆ ಕೋರಿಕೆ ಸಲ್ಲಿಸಿದ್ದಾರೆ ಎಂದು ಕೊಹ್ಲಿ ತಿಳಿಸಿದ್ದಾರೆ. ಆದರೆ ಈ ಕೋರಿಕೆಯನ್ನು ವ್ಯವಸ್ಥಿತವಾಗಿ ಕಡೆಗಣಿಸಲಾಗಿದೆ. ಬದಲಾವಣೆಗೆ ಸಲಹೆ ಮಾಡಿರುವ ಶೈಲೇಶ್ ನಾಯಕ್ ಸಮಿತಿಯು ಇನ್ನೂ ಯಾವುದೇ ಸಾರ್ವಜನಿಕ ಪ್ರಕಟಣೆ ನೀಡಿಲ್ಲ. ಸಿಐಸಿ ತೀರ್ಪಿನ ಬಳಿಕ ವೆಬ್‌ಸೈಟಿನಲ್ಲಿ ಮಾತ್ರ ಪ್ರಕಟಿಸಲಾಗಿದೆ. ಕರಾವಳಿಯ ಪರಿಸರ ವಿಜ್ಞಾನ ಹಾಗೂ ಜೀವನೋಪಾಯದ ಮೇಲೆ ಭಾರೀ ಪರಿಣಾಮ ಬೀರಬಲ್ಲ ಕಾನೂನನ್ನು, ಬೃಹತ್ ಪ್ರಮಾಣದ ಬದಲಾವಣೆಗಳು ಇರುವ ಹಿನ್ನೆಲೆಯಲ್ಲಿ, ಸಾರ್ವಜನಿಕವಾಗಿ ಪ್ರಕಟಿಸಬೇಕು. ಆದರೆ ವೆಬ್‌ಸೈಟ್‌ನಲ್ಲಿ ಮಾತ್ರ ಪ್ರಕಟಿಸಲಾಗಿದೆ ಎಂದು ಕೊಹ್ಲಿ ಹೇಳಿದ್ದಾರೆ. ಸಿಆರ್‌ಝಡ್ ಅಧಿಸೂಚನೆ ,2011ಕ್ಕೆ ಸೂಕ್ತ ಬದಲಾವಣೆ ತರುವ ನಿಟ್ಟಿನಲ್ಲಿ ಕರಾವಳಿಯ ರಾಜ್ಯಗಳು, ಕೇಂದ್ರಾಡಳಿತದ ಪ್ರದೇಶಗಳು ಹಾಗೂ ಸಂಬಂಧಿತ ಪಕ್ಷಗಳ ಕಳವಳ, ಅಭಿಪ್ರಾಯವನ್ನು ಪರಿಶೀಲಿಸಲು ಶೈಲೇಶ್ ನಾಯಕ್ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚಿಸಿರುವುದಾಗಿ ಪರಿಸರ ಸಚಿವಾಲಯ ತಿಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News