ಯುಎಇಯ ನಾಗರಿಕ ವಿಮಾನವನ್ನು ಯುದ್ಧವಿಮಾನಗಳು ಅಡ್ಡಗಟ್ಟಿಲ್ಲ: ಕತರ್

Update: 2018-04-23 17:56 GMT
ಸಾಂದರ್ಭಿಕ ಚಿತ್ರ

ದುಬೈ, ಎ. 23: ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ)ನ ನಾಗರಿಕ ವಿಮಾನವೊಂದನ್ನು ತನ್ನ ಯುದ್ಧ ವಿಮಾನಗಳು ರವಿವಾರ ಅಡ್ಡಗಟ್ಟಿವೆ ಎಂಬ ಆರೋಪವನ್ನು ಕತರ್ ಸೋಮವಾರ ನಿರಾಕರಿಸಿದೆ ಎಂದು ಕತರ್‌ನ ಸರಕಾರಿ ಸುದ್ದಿ ಸಂಸ್ಥೆ ಕ್ಯೂಎನ್‌ಎ ವರದಿ ಮಾಡಿದೆ. ಆ ಸಮಯದಲ್ಲಿ ಯುಎಇಯ ಯುದ್ಧ ವಿಮಾನವೊಂದು ತನ್ನ ವಾಯುಪ್ರದೇಶವನ್ನು ಉಲ್ಲಂಘಿಸಿತ್ತು ಎಂದು ಅದು ಹೇಳಿದೆ.

86 ಪ್ರಯಾಣಿಕರನ್ನು ಹೊತ್ತು ಬಹರೈನ್‌ಗೆ ಹಾರುತ್ತಿದ್ದ ತನ್ನ ವಿಮಾನವೊಂದರ ಎದುರಿಗೆ ಕತರ್ ಯುದ್ಧ ವಿಮಾನವೊಂದು ಬಂತು ಹಾಗೂ ಯುದ್ಧ ವಿಮಾನಕ್ಕೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸಲು ತನ್ನ ವಿಮಾನದ ಚಾಲಕ ವಿಮಾನದ ದಿಕ್ಕು ಬದಲಿಸಬೇಕಾಯಿತು ಎಂದು ಯುಇಎ ರವಿವಾರ ಆರೋಪಿಸಿತ್ತು.

ಯುಎಇಯ ನಾಗರಿಕ ವಿಮಾನವಿದ್ದ ಸ್ಥಳದಲ್ಲೇ ಅದೇ ದೇಶದ ಸೇನಾ ವಿಮಾನವೂ ಅನುಮತಿಯಿಲ್ಲದೆ ವಾಯುಪ್ರದೇಶವನ್ನು ಉಲ್ಲಂಘಿಸಿತ್ತು. ಆ ಸಮಯದಲ್ಲಿ ಕತರ್‌ನ ಯುದ್ಧ ವಿಮಾನಗಳು ದೈನಂದಿನ ಹಾರಾಟದಲ್ಲಿ ತೊಡಗಿದ್ದವು ಎಂದು ಕತರ್ ನಾಗರಿಕ ವಾಯುಯಾನ ಪ್ರಾಧಿಕಾರ ಹೇಳಿದೆ.

‘‘ಅಂತಾರಾಷ್ಟ್ರೀಯ ಸಮುದಾಯವನ್ನು ಪ್ರಚೋದಿಸುವುದಕ್ಕಾಗಿ ಹಾಗೂ ತಪ್ಪುದಾರಿಗೆಳೆಯುವುದಕ್ಕಾಗಿ ಯುಎಇಯು ದುರದೃಷ್ಟವಶಾತ್ ವಾಸ್ತವಾಂಶಗಳನ್ನು ತಿರುಚುತ್ತಿದೆ’’ ಎಂದು ಅದು ಆರೋಪಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News