ಮುಂಬೈ ಇಂಡಿಯನ್ಸ್ ಗೆ ಸನ್‌ರೈಸರ್ಸ್ ಸವಾಲು

Update: 2018-04-23 18:37 GMT

ಮುಂಬೈ, ಎ.23: ಐಪಿಎಲ್ ಟ್ವೆಂಟಿ-20 ಟೂರ್ನಿಯ 23ನೇ ಪಂದ್ಯದಲ್ಲಿ ಮಂಗಳವಾರ ಮುಂಬೈ ಇಂಡಿಯನ್ಸ್ ಮತ್ತು ಸನ್‌ರೈಸರ್ಸ್‌ ಹೈದರಾಬಾದ್ ತಂಡಗಳು ಹಣಾಹಣಿ ನಡೆಸಲಿವೆ.

ಮುಂಬೈ ಇಂಡಿಯನ್ಸ್ ತಂಡ ಸತತ ಮೂರು ಪಂದ್ಯಗಳಲ್ಲಿ ಸೋಲುವುದರೊಂದಿಗೆ ಈ ಬಾರಿ ಐಪಿಎಲ್‌ನಲ್ಲಿ ಅಭಿಯಾನ ಆರಂಭಿಸಿತ್ತು. ಬಳಿಕ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ವಿರುದ್ಧ ಗೆಲುವು ದಾಖಲಿಸಿತು. ಆದರೆ ತಂಡದ ಸೋಲು ಕೊನೆಗೊಳ್ಳಲಿಲ್ಲ. ರವಿವಾರ ಜೈಪುರದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಸೋಲು ಅನುಭವಿಸಿತು.

ಮುಂಬೈ ತಂಡ ಆಡಿರುವ 5 ಪಂದ್ಯಗಳ ಪೈಕಿ 1ರಲ್ಲಿ ಜಯ ಗಳಿಸಿದೆ. ನಾಲ್ಕರಲ್ಲಿ ಸೋತು ಒತ್ತಡಕ್ಕೆ ಸಿಲುಕಿದೆ. ಇನ್ನು ಉಳಿದಿರುವ 9 ಪಂದ್ಯಗಳ ಪೈಕಿ 7ರಲ್ಲಿ ಜಯ ಗಳಿಸಿದರೆ ಮಾತ್ರ ಮುಂಬೈಗೆ ಪ್ಲೇ ಆಫ್ ದಾರಿ ಸುಗಮವಾಗುತ್ತದೆ. ಈ ಕಾರಣದಿಂದಾಗಿ ಮುಂಬೈ ತಂಡ ತಂಡ ನಾಳಿನ ಪಂದ್ಯವನ್ನು ಗೆಲ್ಲಲೇಬೇಕಾಗಿದೆ. ಅಂಕಪಟ್ಟಿಯಲ್ಲಿ ಮುಂಬೈ ತಂಡ 7ನೇ ಸ್ಥಾನದಲ್ಲಿದೆ.

ಸನ್ ರೈಸರ್ಸ್‌ ಹೈದರಾಬಾದ್ ತಂಡ ಆಡಿರುವ ಐದು ಪಂದ್ಯಗಳ ಪೈಕಿ 3ರಲ್ಲಿ ಗೆಲುವು ಸಾಧಿಸಿದೆ. 2ರಲ್ಲಿ ಸೋಲು ಅನುಭವಿಸಿ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾದಲ್ಲಿದೆ. ಸತತ ಮೂರು ಪಂದ್ಯಗಳಲ್ಲಿ ಜಯ ಗಳಿಸಿದ ಬಳಿಕ ಸನ್‌ರೈಸರ್ಸ್‌ ಹೈದರಾಬಾದ್ ತಂಡ 2ರಲ್ಲಿ ಸೋಲು ಅನುಭವಿಸಿದೆ.

ಮುಂಬೈ ಇಂಡಿಯನ್ಸ್ ತಂಡದಲ್ಲಿ ಸ್ಥಳೀಯ ಪ್ರತಿಭೆ ಸೂರ್ಯಕುಮಾರ್ ಯಾದವ್ ಉತ್ತಮ ಫಾರ್ಮ್ ನಲ್ಲಿದ್ದಾರೆ. ಅವರು ಈ ಆವೃತ್ತಿಯಲ್ಲಿ ಒಟ್ಟು 196 ರನ್ ಗಳಿಸಿದ್ದಾರೆ. ತಂಡದ ನಾಯಕ ರೋಹಿತ್ ಶರ್ಮಾ ಅವರು ರಾಯಲ್ ಚಾಲೆಂಜರ್ಸ್‌ ಬೆಂಗಳೂರು ವಿರುದ್ಧ 94 ರನ್‌ಗಳ ಕೊಡುಗೆ ನೀಡಿ ತಂಡದ ಗೆಲುವಿಗೆ ನೆರವಾಗಿದ್ದರು. ಆದರೆ ಇದನ್ನು ಹೊರತುಪಡಿಸಿದರೆ ಅವರ ಬ್ಯಾಟಿಂಗ್‌ನಿಂದ ರನ್ ಹರಿದು ಬರುತ್ತಿಲ್ಲ. ಅವರು ಕಳಪೆ ಫಾರ್ಮ್‌ನಲ್ಲಿರುವುದು ತಂಡಕ್ಕೆ ತಲೆನೋವು ತಂದಿದೆ.

ಮೂರು ಬಾರಿ ಚಾಂಪಿಯನ್‌ಪಟ್ಟ ಅಲಂಕರಿಸಿರುವ ಮುಂಬೈ ಇಂಡಿಯನ್ಸ್ ತಂಡ ಚೇತರಿಸಿಕೊಳ್ಳಲು ನಾಯಕ ರೋಹಿತ್ ಶರ್ಮಾ ಮತ್ತೆ ದೊಡ್ಡ ಮೊತ್ತದ ಕೊಡುಗೆ ನೀಡಬೇಕಾಗಿದೆ. ಸನ್‌ರೈಸರ್ಸ್‌ ಹೈದರಾಬಾದ್ ವಿರುದ್ಧ ತಂಡವನ್ನು ಗೆಲುವಿನ ಹಳಿಗೆ ತರಬೇಕಾಗಿದೆ.

ರೋಹಿತ್ ಶರ್ಮಾ ಅವರಂತೆ ತಂಡದ ಸ್ಫೋಟಕ ದಾಂಡಿಗ ವೆಸ್ಟ್ ಇಂಡೀಸ್‌ನ ಕೀರನ್ ಪೊಲಾರ್ಡ್ ರನ್ ಬರ ಎದುರಿಸುತ್ತಿದ್ದಾರೆ. ಅವರು 5 ಪಂದ್ಯಗಳಲ್ಲಿ 54 ರನ್ ಸಂಪಾದಿಸಿದ್ದಾರೆ. ಅವರು ತಂಡದಿಂದ ಮುಂದಿನ ಪಂದ್ಯಕ್ಕೆ ಹೊರಗುಳಿಯುವ ಭೀತಿ ಎದುರಿಸುತ್ತಿದ್ದಾರೆ. ವೆಸ್ಟ್‌ಇಂಡಿಸ್‌ನ ಎವಿನ್ ಲೆವಿಸ್, ಪಾಂಡ್ಯ ಸಹೋದರರಾದ ಹಾರ್ದಿಕ್ ಮತ್ತು ಕೃನಾಲ್ ಪಾಂಡ್ಯ ಬ್ಯಾಟಿಂಗ್‌ನಲ್ಲಿ ಮಿಂಚುತ್ತಿಲ್ಲ. ಆದರೆ ಬೌಲಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ರಾಜಸ್ಥಾನ ರಾಯಲ್ಸ್ ವಿರುದ್ಧ ವೇಗಿ ಜಸ್‌ಪ್ರೀತ್ ಬುಮ್ರಾ 28ಕ್ಕೆ 2, ಹಾರ್ದಿಕ್ ಪಾಂಡ್ಯ 25ಕ್ಕೆ 2 ಮತ್ತು ಕೃನಾಲ್ ಪಾಂಡ್ಯ 33ಕ್ಕೆ 1 ವಿಕೆಟ್ ಪಡೆದಿದ್ದರು.

ಮುಂದಿನ ಪಂದ್ಯಕ್ಕೆ ಮುಂಬೈ ಇಂಡಿಯನ್ಸ್ ತಂಡದಲ್ಲಿ ಭಾರೀ ಬದಲಾವಣೆ ನಿರೀಕ್ಷಿಸಲಾಗಿದೆ. ಕಿಂಗ್ಸ್ ಇಲೆವೆನ್ ಪಂಜಾಬ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೋಲು ಅನುಭವಿಸಿದ್ದ ಸನ್‌ರೈಸರ್ಸ್‌ ತಂಡ ಆ ಬಳಿಕ ಚೇತರಿಸಿಕೊಂಡಿದೆ. ನಾಯಕ ಕೇನ್ ವಿಲಿಯಮ್ಸನ್ ಉತ್ತಮ ಫಾರ್ಮ್ ನಲ್ಲಿದ್ದಾರೆ. ಅವರು 5 ಪಂದ್ಯಗಳಲ್ಲಿ 230 ರನ್ ದಾಖಲಿಸಿದ್ದಾರೆ. ವಿಕೆಟ್ ಕೀಪರ್ ವೃದ್ಧಿಮಾನ್ ಸಹಾ ಅವರ ಪ್ರದರ್ಶನ ಚೆನ್ನಾಗಿಲ್ಲ. ಅವರು 5 ಪಂದ್ಯಗಳಲ್ಲಿ 62 ರನ್ ಗಳಿಸಿದ್ದಾರೆ.

ಯೂಸುಫ್ ಪಠಾಣ್ ಸ್ಫೋಟಕ ಬ್ಯಾಟಿಂಗ್‌ನ ನಿರೀಕ್ಷೆ ಮೂಡಿಸಿದ್ದಾರೆ. ಅವರು ಕಳೆದ ಪಂದ್ಯದಲ್ಲಿ 27 ಎಸೆತಗಳಲ್ಲಿ 45 ರನ್ ಗಳಿಸಿದ್ದರು.

►ಸನ್‌ರೈಸರ್ಸ್ ಹೈದರಾಬಾದ್

ಕೇನ್ ವಿಲಿಯಮ್ಸನ್(ನಾಯಕ), ಭುವನೇಶ್ವರ ಕುಮಾರ್, ಶಿಖರ್ ಧವನ್, ಶಾಕಿಬ್ ಅಲ್ ಹಸನ್, ಮನೀಷ್ ಪಾಂಡೆ, ಕಾರ್ಲೊಸ್ ಬ್ರಾಥ್‌ವೈಟ್, ಯೂಸುಫ್ ಪಠಾಣ್, ವೃದ್ಧಿಮಾನ್ ಸಹಾ, ರಶೀದ್ ಖಾನ್, ರಿಕಿ ಬುಯ್, ದೀಪಕ್ ಹೂಡಾ, ಸಿದ್ಧಾರ್ಥ ಕೌಲ್, ಟಿ ನಟರಾಜನ್, ಮುಹಮ್ಮದ್ ನಬಿ, ಬಾಸಿಲ್ ಥಾಂಪಿ, ಕೆ.ಖಲೀಲ್ ಅಹ್ಮದ್, ಸಂದೀಪ್ ಶರ್ಮಾ, ಸಚಿನ್ ಬೇಬಿ, ಕ್ರಿಸ್ ಜೋರ್ಡನ್, ಬಿಲ್ಲಿ ಸ್ಟಾನ್‌ಲೇಕ್, ತನ್ಮಯ್ ಅಗರ್ವಾಲ್, ಶ್ರೀವತ್ಸ ಗೋಸ್ವಾಮಿ, ಬಿಪುಲ್ ಶರ್ಮಾ, ಎಂ. ಹಸನ್, ಅಲೆಕ್ಸ್ ಹೇಲ್ಸ್.

►ಮುಂಬೈ ಇಂಡಿಯನ್ಸ್

ರೋಹಿತ್ ಶರ್ಮಾ(ನಾಯಕ), ಜಸ್‌ಪ್ರೀತ್ ಬುಮ್ರಾ, ಹಾರ್ದಿಕ್ ಪಾಂಡ್ಯ, ಕೀರನ್ ಪೊಲಾರ್ಡ್, ಮುಸ್ತಾಫಿಝುರ್ರಹ್ಮಾನ್, ಸೂರ್ಯಕುಮಾರ್ ಯಾದವ್, ಕೃನಾಲ್ ಪಾಂಡ್ಯ, ಇಶನ್ ಕಿಶನ್, ರಾಹುಲ್ ಚಹಾರ್, ಎವಿನ್ ಲೆವಿಸ್, ಸೌರಭ್ ತಿವಾರಿ, ಬೆನ್ ಕಟ್ಟಿಂಗ್, ಪ್ರದೀಪ್ ಸಾಂಗ್ವಾನ್, ಜೀನ್ ಪಾಲ್ ಡುಮಿನಿ, ತಾಜಿಂದರ್ ಸಿಂಗ್, ಶರದ್ ಲುಂಬಾ, ಸಿದ್ದೇಶ್ ಲಾಡ್, ಆದಿತ್ಯ ತಾರೆ, ಮಾಯಾಂಕ್ ಮಾರ್ಕಂಡೆ, ಅಖಿಲಾ ಧನಂಜಯ, ಅನುಕೂಲ್ ರಾಯ್, ಮೊಯ್ಸಿನ್ ಖಾನ್, ಎಂ.ಡಿ.ನಿದೇಶ್, ಮಿಚೆಲ್ ಮೆಕ್ಲೀನಘನ್, ಆ್ಯಡಮ್ ಮಿಲ್ನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News