ತಪ್ಪನ್ನು ಸರಿಪಡಿಸಿ

Update: 2018-04-23 18:43 GMT

ಯಾವುದೇ ಒಂದು ಸುಗ್ರೀವಾಜ್ಞೆಯನ್ನು ಕಾನೂನು ಬದ್ಧಗೊಳಿಸುವ ವಿಧಾನವನ್ನು, ನ್ಯಾಯಾಲಯದ ತೀರ್ಪುಗಳಿಂದಾಗಿ ಉದ್ಭವಿಸುವ ತುರ್ತು ಸನ್ನಿವೇಶಗಳನ್ನು ಸಮಸ್ಯೆಗಳನ್ನು ನಿಭಾಯಿಸಲು ಬಳಸಲಾಗುತ್ತದೆ. ದಲಿತ ದೌರ್ಜನ್ಯ ತೀರ್ಪನ್ನು ರದ್ದುಗೊಳಿಸಲು ಸುಗ್ರೀವಾಜ್ಞೆಯು ತಥಾಕಥಿತ ಕಾನೂನಿನ ದುರುಪಯೋಗ ಯಾವುದೇ ಸಾಚಾ ಸಂಶೋಧನೆಯಿಂದ, ಅಂಕಿ ಅಂಶಗಳಿಂದ ಸಾಬೀತು ಪಡಿಸಲಾಗಿಲ್ಲ ಎಂದು ಸ್ಪಷ್ಟವಾಗಿ ಹೇಳಬೇಕಾಗುತ್ತದೆ.


ದಲಿತ ದೌರ್ಜನ್ಯ ತಡೆ ಕಾಯ್ದೆಯ ಕುರಿತಾದ ವಿವಾದಾಸ್ಪದ ತೀರ್ಪು ನಮ್ಮ ಪ್ರಜಾಪ್ರಭುತ್ವದ ದೋಷಗಳನ್ನು, ತಪ್ಪುಗಳನ್ನು ಮತ್ತೊಮ್ಮೆ ಮುನ್ನೆಲೆಗೆ ತಂದಿದೆ. ಎಲ್ಲ ದಿಕ್ಕುಗಳಿಂದಲೂ ಟೀಕೆಗೊಳಗಾದ ಒಂದು ಸರಕಾರವು ತೀರ್ಪಿನಿಂದಾಗಬಹುದಾದ ರಾಜಕೀಯ ಪರಿಣಾಮಗಳನ್ನು ನಿರೀಕ್ಷಿಸುತ್ತಾ ತೀರ್ಪಿನ ಪರಾಮರ್ಶೆಗಾಗಿ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ ತನ್ನ ಮನವಿಯಲ್ಲಿ ಅದು, ‘‘ನ್ಯಾಯಾಲಯದ ತೀರ್ಪು ಸಮಾಜದಲ್ಲಿ ಸಾಮರಸ್ಯಕ್ಕೆ ಹೊಡೆತ ನೀಡಿದೆ ಮತ್ತು ‘ಅಧಿಕಾರಗಳ ಪ್ರತ್ಯೇಕತೆ’ಯ ತತ್ವವನ್ನು ಉಲ್ಲಂಘಿಸಿದೆ’’ ಎಂದು ಹೇಳಿದೆ. ಪ್ರಧಾನಿ ಮೋದಿಯವರು ‘‘ಕಾಯ್ದೆಯಲ್ಲಿ ನ್ಯಾಯಾಲಯವು ಮಾಡಿರುವ ಬದಲಾವಣೆಗಳಿಗೆ ಅವಕಾಶ ನೀಡುವುದಿಲ್ಲ, ದಲಿತ ದೌರ್ಜನ್ಯ ಕಾಯ್ದೆಯನ್ನು ದುರ್ಬಲಗೊಳಿಸಲು ಬಿಡುವುದಿಲ್ಲ’’ ಎಂದು ಆಶ್ವಾಸನೆ ನೀಡಿದ್ದಾರೆ. ದಲಿತರನ್ನು ತನ್ನ ತೆಕ್ಕೆಯೊಳಕ್ಕೆಗೆಳೆದುಕೊಳ್ಳಲು ಸರಕಾರ ಅವ್ಯಾಹತ ಪ್ರಯತ್ನ ನಡೆಸುತ್ತಿದೆ; ಅಂಬೇಡ್ಕರ್‌ರನ್ನು ತನ್ನ ಬಗಲಿಗೆ ಸೆಳೆದುಕೊಳ್ಳಲು ಯತ್ನಿಸುತ್ತಿದೆ. ಆದರೆ ಇದೇ ವೇಳೆ ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ದಲಿತ ವಿರೋಧಿ ದೌರ್ಜನ್ಯಗಳು ಅತ್ಯಂತ ಹೆಚ್ಚು ನಡೆದಿವೆ ಎಂಬ ವಾಸ್ತವ ಹಾಗೆಯೇ ಇದೆ.

ಸರಕಾರ ಸಲ್ಲಿಸಿರುವ ಮರುಪರಿಶೀಲನಾ ಅರ್ಜಿಯನ್ನು ವಿಚಾರಣೆಗೆ ಸ್ವೀಕರಿಸುತ್ತಾ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಎ. ಕೆ. ಗೋಯಲ್ ಮತ್ತು ನ್ಯಾಯಮೂರ್ತಿ ಯು. ಯು. ಲಲಿತ್‌ಅವರು ನ್ಯಾಯಾಲಯದ ನಿಗದಿತ ಕಲಾಪದ ವೇಳೆ ದಲಿತ ದೌರ್ಜನ್ಯ ಕಾಯ್ದೆಯನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂಬುದನ್ನು ಸರಕಾರ ಒಪ್ಪಿಕೊಂಡಿತ್ತು ಎಂದು ಸರಕಾರಕ್ಕೆ ಜ್ಞಾಪಿಸಿ ನ್ಯಾಯಪೀಠವು ತಾನು ನೀಡಿರುವ ತೀರ್ಪು ದಲಿತ ದೌರ್ಜನ್ಯ ಕಾಯ್ದೆಯನ್ನು ದುರ್ಬಲಗೊಳಿಸಿದೆ ಎಂಬುದನ್ನು ಅಲ್ಲಗಳೆಯಿತಲ್ಲದೆ ತನ್ನ ತೀರ್ಪು ಜನರ ಸ್ವಾತಂತ್ರ್ಯಗಳನ್ನು ರಕ್ಷಿಸುತ್ತದೆ ಎಂದು ಪುನರುಚ್ಚರಿಸಿತು. 2014ರಲ್ಲಿ, ದಲಿತರಿಗಾಗಿ ಮೀಸಲಿಟ್ಟಿದ್ದ ಸ್ಥಾನಗಳಲ್ಲಿ ಶೇ. ಐವತ್ತಕ್ಕಿಂತಲೂ ಹೆಚ್ಚು ಸ್ಥಾನಗಳಲ್ಲಿ ಬಿಜೆಪಿ ಗೆದ್ದಿತ್ತು. ಒಂದು ವೇಳೆ ನ್ಯಾಯಾಲಯವು ಸರಕಾರದ ಮನವಿಯನ್ನು ತಿರಸ್ಕರಿಸಿದಲ್ಲಿ ಮೋದಿ ಸರಕಾರವು ಸುಗ್ರೀವಾಜ್ಞೆಯೊಂದನ್ನು ತರಬಹುದೆಂದು ದಲಿತ ನಾಯಕ ಹಾಗೂ ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಸಂಕೇತ ನೀಡಿದ್ದಾರೆ.

ಸಾರ್ವಜನಿಕರ ಭಾವನೆಗಳಿಗಾಗಿ ನ್ಯಾಯಾಲಯವು ತನ್ನ ತೀರ್ಪನ್ನು ಹಿಂದಕ್ಕೆ ಪಡೆಯಬೇಕೆಂದು ಯಾರೂ ಹೇಳುತ್ತಿಲ್ಲ. ಆದರೆ ‘ಅಧಿಕಾರಿಗಳ ಪ್ರತ್ಯೇಕತೆ’ಯು ಸಂವಿಧಾನದ ಮೂಲ ಚೌಕಟ್ಟು ಎಂಬುದನ್ನು ಅದು ಮರೆಯಕೂಡದು. ಅಂದರೆ ನ್ಯಾಯಾಂಗವು ತಥಾಕಥಿತ ಮಾರ್ಗ ‘ಮಾರ್ಗದರ್ಶಿ ಸೂತ್ರ’ಗಳ ಮೂಲಕ ನ್ಯಾಯಾಂಗದ ಕೆಲಸಗಳನ್ನು ತನ್ನ ಅಧಿಕಾರಕ್ಕೆ ತೆಗೆದುಕೊಳ್ಳುವ ಹಾಗಿಲ್ಲ. ಅಲ್ಲದೇ ಇಬ್ಬರು ನ್ಯಾಯಾಧೀಶರ ಒಂದು ನ್ಯಾಯಪೀಠವು ಇನ್ನೊಂದು ದ್ವಿಸದಸ್ಯ ನ್ಯಾಯಪೀಠದ ತೀರ್ಪನ್ನು ಬದಲಿಸುವ ಬದಲು ತ್ರಿಸದಸ್ಯ ನ್ಯಾಯಪೀಠದ ರಚನೆಗಾಗಿ ಪ್ರಕರಣವನ್ನು ಭಾರತದ ಮುಖ್ಯ ನ್ಯಾಯಾಧೀಶರಿಗೆ ಕಳುಹಿಸಬೇಕಾಗಿತ್ತು.

ಮೋದಿ ಸರಕಾರ ದಲಿತ ವಿರೋಧಿ ಎಂಬ ಭಾವನೆ ವ್ಯಾಪಕವಾಗುತ್ತಿದೆ. ಕಳೆದ ನಾಲ್ಕು ವರ್ಷಗಳಲ್ಲಿ ದಲಿತರ ಸ್ಥಿತಿ ಹದಗೆಡುತ್ತಾ ಹೋಗಿರುವ ಬಗ್ಗೆ ಬಿಜೆಪಿಯ ಐದು ಮಂದಿ ದಲಿತ ಸಂಸದರು ತಮ್ಮ ನೋವನ್ನು ವ್ಯಕ್ತಪಡಿಸಿ ಪ್ರಧಾನಿಯವರಿಗೆ ಪತ್ರಗಳನ್ನು ಬರೆದಿದ್ದಾರೆ. ಈ ಹಿಂದೆ ಎಂದೂ ಇಂತಹ ವಿದ್ಯಮಾನ ನಡೆದಿರಲಿಲ್ಲ. ಸರ್ವೋಚ್ಚ ನ್ಯಾಯಾಲಯವು ತನ್ನ ತೀರ್ಪನ್ನು ಪರಾಮರ್ಶಿಸಲು ನಿರಾಕರಿಸಿದ್ದೇ ಆದಲ್ಲಿ ಸರಕಾರ ಖಂಡಿತವಾಗಿ ಒಂದು ಸುಗ್ರೀವಾಜ್ಞೆಯನ್ನು ಹೊರಡಿಸಲೇಬೇಕು. ಕಾನೂನುರೀತ್ಯಾ ಹೇಳುವುದಾದರೆ, ಸರಕಾರ ಈಗ ಕೂಡ ಸುಗ್ರೀವಾಜ್ಞೆ ಹೊರಡಿಸಬಹುದು. ಆದರೆ ಸಂಸತ್ ಸರ್ವೋಚ್ಚ ನ್ಯಾಯಾಲಯದ ತೀರ್ಪೊಂದನ್ನು ತಳ್ಳಿಹಾಕಬಹುದೇ? ಇದಕ್ಕೆ ಉತ್ತರ ಹೌದು. ಸಂಸತ್ ತನ್ನ ಪರಮಾಧಿಕಾರವನ್ನು ಬಳಸಿ ಯಾವುದೇ ತೀರ್ಪನ್ನು ಅಥವಾ ನ್ಯಾಯಾಲಯದ ಆಜ್ಞೆಯನ್ನು ಅಸಿಂಧುಗೊಳಿಸಬಹುದು.

ನಿಜ ಹೇಳಬೇಕೆಂದರೆ ತನ್ನ ಮೊದಲ ಏಳು ತಿಂಗಳುಗಳಲ್ಲಿ ಮೋದಿ ಸರಕಾರ ಪ್ರತೀ 28 ದಿನಗಳಿಗೆ ಒಂದರಂತೆ ಸುಗ್ರೀವಾಜ್ಞೆ ಹೊರಡಿಸುವ ಇಂದಿರಾ ಗಾಂಧಿ ಅವರ ಅನುಮಾನಾಸ್ಪದ ದಾಖಲೆಯನ್ನು ಸರಿದೂಗಿಸಿತು. ಅಂದಿನ ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರ ಸಲಹೆಯ ಬಳಿಕವಷ್ಟೇ ಮೋದಿ ಸರಕಾರ ತನ್ನ ತಥಾಕಥಿತ ಸುಗ್ರೀವಾಜ್ಞೆ ರಾಜ್ಯಭಾರಕ್ಕೆ ತಡೆ ಹಾಕಿತ್ತು. ಆದರೆ ಈಗ ಸುಗ್ರೀವಾಜ್ಞೆ ಹೊರಡಿಸಲು ನ್ಯಾಯಬದ್ಧವಾದ ಒಂದು ಕಾರಣ ಮತ್ತು ಈ ವಿಶೇಷ ಅಧಿಕಾರವನ್ನು ಬಳಸಿ ಬಳಸಲು ತಕ್ಕುದಾದ ಒಂದು ಸಂದರ್ಭ ಬಂದಿದೆ. ಸುಗ್ರೀವಾಜ್ಞೆಯ ಮೂಲಕ ನ್ಯಾಯಾಲಯದ ತೀರ್ಪುಗಳನ್ನು ರದ್ದುಪಡಿಸಿದ ಅಸಂಖ್ಯ ಉದಾಹರಣೆಗಳಿವೆ. ಆದರೆ ನಮ್ಮ ಪೂರ್ವಾಗ್ರಹಗಳಿಂದಾಗಿ ನಾವು 1936ರಲ್ಲಿ ಶಾಬಾನು ಪ್ರಕರಣದಲ್ಲಿ ನ್ಯಾಯಾಲಯ ನೀಡಿದ್ದ ತೀರ್ಪನ್ನು ರದ್ದುಗೊಳಿಸಲು ಮಾಡಲಾದ ಕಾನೂನನ್ನು ಮಾತ್ರ ನೆನಪಿನಲ್ಲಿಟ್ಟುಕೊಂಡಿದ್ದೇವೆ.

ಯಾವುದೇ ಒಂದು ಸುಗ್ರೀವಾಜ್ಞೆಯನ್ನು ಕಾನೂನು ಬದ್ಧಗೊಳಿಸುವ ವಿಧಾನವನ್ನು, ನ್ಯಾಯಾಲಯದ ತೀರ್ಪುಗಳಿಂದಾಗಿ ಉದ್ಭವಿಸುವ ತುರ್ತು ಸನ್ನಿವೇಶಗಳನ್ನು ಸಮಸ್ಯೆಗಳನ್ನು ನಿಭಾಯಿಸಲು ಬಳಸಲಾಗುತ್ತದೆ. ದಲಿತ ದೌರ್ಜನ್ಯ ತೀರ್ಪನ್ನು ರದ್ದುಗೊಳಿಸಲು ಸುಗ್ರೀವಾಜ್ಞೆಯು ತಥಾಕಥಿತ ಕಾನೂನಿನ ದುರುಪಯೋಗ ಯಾವುದೇ ಸಾಚಾ ಸಂಶೋಧನೆಯಿಂದ, ಅಂಕಿ ಅಂಶಗಳಿಂದ ಸಾಬೀತು ಪಡಿಸಲಾಗಿಲ್ಲ ಎಂದು ಸ್ಪಷ್ಟವಾಗಿ ಹೇಳಬೇಕಾಗುತ್ತದೆ.

1951ರಲ್ಲಿ ಮೀಸಲಾತಿಯ ವಿರುದ್ಧ ಸಪ್ತ ಸದಸ್ಯ ನ್ಯಾಯಪೀಠವೊಂದು ನೀಡಿದ ತೀರ್ಪನ್ನು ರದ್ದುಪಡಿಸಲು ಜವಾಹರಲಾಲ್ ನೆಹರೂ ಅವರು ಸಂವಿಧಾನಕ್ಕೆ ಮೊತ್ತ ಮೊದಲ ತಿದ್ದುಪಡಿ ತಂದಿದ್ದರು. 1995ರಲ್ಲಿ ಭಡ್ತಿಗಳಲ್ಲಿ ಮೀಸಲಾತಿ ಕುರಿತ ಮಂಡಲ್ ತೀರ್ಪನ್ನು ಅಸಿಂಧುಗೊಳಿಸಲು ಕಾಂಗ್ರೆಸ್ ಸರಕಾರವು ಸಂವಿಧಾನಕ್ಕೆ ಇಪ್ಪತ್ತನೆಯ ತಿದ್ದುಪಡಿ ಮಾಡಿತ್ತು.

ಅಂಬೇಡ್ಕರ್ ಅವರ ಮಧ್ಯದ ಹೆಸರು ‘ರಾಮ್‌ಜಿ’ ಎಂದು ಕೇವಲ ಒತ್ತಿ ಹೇಳುವುದಕ್ಕಿಂತ ಹೆಚ್ಚು ಮೂರ್ತವಾದ ಏನನ್ನಾದರೂ ಮಾಡುವ ಮೂಲಕ ಬಿಜೆಪಿ ಸರಕಾರ ದಲಿತರ ಬಗ್ಗೆ ತನಗಿರುವ ಬದ್ಧತೆಯನ್ನು ನವೀಕರಿಸಿ ಸಂಸತ್ತಿನಲ್ಲಿ ‘‘ನ್ಯಾಯಾಂಗವು ಸಂಸತ್ತನ್ನು ನಿಧಾನವಾಗಿ ನಾಶಪಡಿಸುತ್ತದೆ’’ ಎಂದು ಹೇಳಿದ ಅರುಣ್ ಜೇಟ್ಲಿಯವರ ಮಾತು ಸರಿ ಎಂದು ಸರ್ವೋಚ್ಚ ನ್ಯಾಯಾಲಯ ರುಜುವಾತುಪಡಿಸಲಾರದೆಂದು ನಾವು ಆಶಿಸೋಣ.

ಕೃಪೆ: indianexpress.com 

Writer - ಫೈಝನ್ ಮುಸ್ತಫಾ

contributor

Editor - ಫೈಝನ್ ಮುಸ್ತಫಾ

contributor

Similar News