ಭೀಮಾ ಕೋರೆಗಾಂವ್ ಹಿಂಸಾಚಾರದ ಸಾಕ್ಷಿಯಾಗಿದ್ದ ದಲಿತ ಯುವತಿಯ ಶವ ಬಾವಿಯಲ್ಲಿ ಪತ್ತೆ

Update: 2018-04-24 07:56 GMT

ಪುಣೆ, ಎ.24: ಭೀಮಾ ಕೋರೆಗಾಂವ್ ಹಿಂಸಾಚಾರದ ವೇಳೆ ತನ್ನ ಮನೆಗೆ ಬೆಂಕಿ ಹಚ್ಚಲಾದ ಪ್ರಕರಣದ ಪ್ರತ್ಯಕ್ಷ ಸಾಕ್ಷಿಯಾಗಿದ್ದ 19 ವರ್ಷದ ದಲಿತ ಯುವತಿಯೊಬ್ಬಳು ಭೀಮಾ ಕೋರೆಗಾಂವ್ ಗ್ರಾಮದಲ್ಲಿರುವ ತನ್ನ ಮನೆಯ ಪಕ್ಕದ ಬಾವಿಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. 

ನಾಪತ್ತೆಯಾದ ಮರುದಿನ ಬೆಳಗ್ಗೆ ಆಕೆಯ ಮೃತದೇಹ ಪತ್ತೆಯಾಗಿದೆ. ಯುವತಿಯನ್ನು ಪೂಜಾ ಸಕತ್ ಎಂದು ಗುರುತಿಸಲಾಗಿದೆ. ಜನವರಿ 1ರಂದು ನಡೆದ ಘಟನೆಯ  ಆರೋಪಿಗಳ ವಿರುದ್ಧ ಆಕೆ ಪೊಲೀಸರಿಗೆ ನೀಡಿದ ಹೇಳಿಕೆಯನ್ನು ವಾಪಸ್ ಪಡೆಯುವಂತೆ ಆಕೆಯ ಮೇಲೆ ಕೆಲವರು ಒತ್ತಡ ಹೇರಿದ್ದರು ಎಂದು ಕುಟುಂಬ ಆರೋಪಿಸುತ್ತಿದೆ.

ಆತ್ಮಹತ್ಯೆಗೆ ಪ್ರೇರೇಪಣೆ ನೀಡಿದ ಪ್ರಕರಣವನ್ನು ಪರಿಶಿಷ್ಟ ಜಾತಿ, ಪಂಗಡಗಳ ದೌರ್ಜನ್ಯ ತಡೆ ಕಾಯಿದೆಯನ್ವಯ ಪೊಲೀಸರು ದಾಖಲಿಸಿದ್ದಾರಾದರೂ  ಇಲ್ಲಿಯ ತನಕ ಯಾರನ್ನೂ ಬಂಧಿಸಲಾಗಿಲ್ಲ. ಆರೋಪಿಗಳ ಹೆಸರುಗಳನ್ನೂ ಬಹಿರಂಗ ಪಡಿಸಲಾಗಿಲ್ಲ.

ಯುವತಿಯ ದೇಹದಲ್ಲಿ ಗಾಯದ ಗುರುತುಗಳೇನೂ ಇರದೇ ಇದ್ದರೂ ಆಕೆ ಯಾವುದೇ ಡೆತ್ ನೋಟ್ ಬರೆದಿಟ್ಟಿಲ್ಲ ಎಂದು ಪೊಲಿಸರು ತಿಳಿಸಿದ್ದಾರೆ. ಯುವತಿಯ ಮನೆಯನ್ನು ದುಷ್ಕರ್ಮಿಗಳು ನಾಶ ಪಡಿಸಿದಂದಿನಿಂದ ಕುಟುಂಬ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News