ಬೆಂಗಳೂರು: ನಗರದ ವಿವಿಧೆಡೆ ಗಾಳಿ-ಮಳೆಯ ಅಬ್ಬರ; ನೆಲಕ್ಕುರುಳಿದ ಮರಗಳು

Update: 2018-04-24 13:08 GMT

ಬೆಂಗಳೂರು, ಎ. 24: ನಗರದ ವಿವಿಧೆಡೆಗಳಲ್ಲಿ ಮಧ್ಯಾಹ್ನ ಬಿರುಗಾಳಿ ಸಹಿತ ಸುರಿದ ಅಬ್ಬರದ ಮಳೆಯಿಂದ ಜನರು ಸಂಕಷ್ಟಕ್ಕೆ ಸಿಲುಕಿದರು. ಇಲ್ಲಿನ ಮೆಜೆಸ್ಟಿಕ್, ರಾಜಾಜಿನಗರ, ಮಲ್ಲೇಶ್ವರ, ಶೇಷಾದ್ರಿಪುರಂ, ಯಶವಂತಪುರ, ಜಾಲಹಳ್ಳಿ ಸೇರಿ ನಗರದ ಹಲವೆಡೆ ಮಳೆ ಬಿದ್ದಿದೆ. ಬಿರುಗಾಳಿ ಸಹಿತ ಮಳೆ ಹಿನ್ನೆಲೆಯಲ್ಲಿ ಇಲ್ಲಿನ ಸರ್ಕಲ್ ಮಾರಮ್ಮ ವೃತ್ತದಲ್ಲಿ ಮರವೊಂದು ನೆಲಕ್ಕುರುಳಿದ ಪರಿಣಾಮ ಸಂಚಾರ ದಟ್ಟಣೆ ಉಂಟಾಯಿತು.

ಅಲ್ಲದೆ, ರಾಮಯ್ಯ ಕಾಲೇಜು ಮುಂಭಾಗ ಕಾರಿನ ಮೇಲೆ ಮರ ಬಿದ್ದ ಪರಿಣಾಮ ಪರಿಣಾಮ ಕಾರಿನಲ್ಲಿದ್ದವರಿಗೆ ಸಣ್ಣ ಪುಟ್ಟ ಗಾಯವಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಲ್ಲೇಶ್ವರಂ 10ನೆ ಕ್ರಾಸ್, ಮಹಾಲಕ್ಷ್ಮಿ ಲೇಔಟ್, ಸದಾಶಿವನಗರ ಸೇರಿ ನಗರದ ಹದಿನೈದಕ್ಕೂ ಹೆಚ್ಚು ಕಡೆ ಮರಗಳು ಬಿದ್ದಿವೆ.

ಇಲ್ಲಿನ ಮೇಖ್ರಿ ವೃತ್ತ, ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಮುಂಭಾಗ ರಸ್ತೆಗೆ ಅಡ್ಡಲಾಗಿ ಮರಗಳು ಬಿದ್ದಿದೆ. ಪರಿಣಾಮ ಅರಮನೆ ಮೈದಾನದ ರಸ್ತೆಯಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು. ಆದರೆ, ರಸ್ತೆಗೆ ಅಡ್ಡಲಾಗಿ ಮರ ಬಿದ್ದು ಗಂಟೆಗಳೆ ಕಳೆದರೂ ಸ್ಥಳಕ್ಕೆ ಪೊಲೀಸರು ಮತ್ತು ಬಿಬಿಎಂಪಿ ಸಿಬ್ಬಂದಿ ಧಾವಿಸಿರಲಿಲ್ಲ.

ಪೂರ್ವ ಮುಂಗಾರಿನಲ್ಲಿ ಸಮಯದಲ್ಲಿ ರಾಜ್ಯಾದ್ಯಂತ ಭಾರೀ ಗುಡುಗು ಗಾಳಿ ಸಹಿತ ಮಳೆಯಾಗುವುದು ಸಹಜ. ಆದರೆ, ಮೇ ತಿಂಗಳಲ್ಲಿ ಗುಡುಗು, ಗಾಳಿ ಸಹಿತ ಮಳೆ ಮುಂದುವರೆಯಲಿದೆ. ಮೋಡಗಳ ಸಾಲು ನಿರ್ಮಾಣವಾಗಿರುವ ಪ್ರದೇಶದಲ್ಲಿ ಮಳೆಯಾಗುತ್ತಿದೆ. ರಾಜ್ಯದ ಕರಾವಳಿ, ಮಲೆನಾಡು, ದಕ್ಷಿಣ ಒಳನಾಡಿನಲ್ಲಿ ಹೆಚ್ಚು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News