ಉತ್ತರಪ್ರದೇಶ ಸಿ.ಎಂ ಯೋಗಿ ಆದಿತ್ಯನಾಥ್, ಈಗ ಭೋಗಿ ಆದಿತ್ಯನಾಥ್ ಆಗಿದ್ದಾರೆ: ರಣದೀಪ್‌ಸಿಂಗ್ ಸುರ್ಜೇವಾಲಾ

Update: 2018-04-24 13:31 GMT

ಬೆಂಗಳೂರು, ಎ.24: ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಈಗ ಭೋಗಿ ಆದಿತ್ಯನಾಥ್ ಆಗಿದ್ದಾರೆ. ಅತ್ಯಾಚಾರ ಆರೋಪ ಎದುರಿಸುತ್ತಿರುವ ಶಾಸಕನ ರಕ್ಷಣೆಗೆ ಆದಿತ್ಯನಾಥ್ ನಿಂತಿದ್ದಾರೆ ಎಂದು ಎಐಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥ ರಣದೀಪ್‌ಸಿಂಗ್ ಸುರ್ಜೇವಾಲಾ ಹೇಳಿದರು.

ಮಂಗಳವಾರ ನಗರದ ಕ್ವೀನ್ಸ್‌ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು. ಪ್ರಧಾನಿ ನರೇಂದ್ರಮೋದಿ ಹೆಣ್ಣು ಮಕ್ಕಳ ಸುರಕ್ಷತೆ ನಮ್ಮ ಆದ್ಯತೆ ಎನ್ನುತ್ತಾರೆ. ಆದರೆ, ನಮ್ಮ ದೇಶದಲ್ಲಿ ಹೆಣ್ಣು ಮಕ್ಕಳಿಗೆ ಸುರಕ್ಷತೆ ಎಲ್ಲಿದೆ. ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚಾಗಿವೆ. ಅತ್ಯಾಚಾರ, ಅನಾಚಾರ ಹಾಗೂ ಭ್ರಷ್ಟಾಚಾರದಲ್ಲಿ ಪ್ರಥಮ ಸ್ಥಾದಲ್ಲಿವೆ ಎಂದು ಅವರು ಟೀಕಿಸಿದರು.

ಅಕ್ರಮ ಗಣಿಗಾರಿಕೆ ಮೂಲಕ ರಾಜ್ಯದ ನೈಸರ್ಗಿಕ ಸಂಪತ್ತು ಲೂಟಿ ಹೊಡೆದ ಬಳ್ಳಾರಿ ಗಣಿಧಣಿಗಳಿಗೆ ಪ್ರಧಾನಿ ನರೇಂದ್ರಮೋದಿ ನೇತೃತ್ವದ ಕೇಂದ್ರ ಸರಕಾರ ರಕ್ಷಣೆ ನೀಡುತ್ತಿದೆ ಎಂದು ಅವರು ಆರೋಪಿಸಿದರು.

2011ರ ಜು.27ರಂದು ಲೋಕಾಯುಕ್ತ ನ್ಯಾ.ಸಂತೋಷ್ ಹೆಗ್ಡೆ ಗಣಿ ಹಗರಣಕ್ಕೆ ಸಂಬಂಧಿಸಿದಂತೆ ನೀಡಿದ ತನಿಖಾ ವರದಿಯಿಂದಾಗಿ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನವನ್ನು ಕಳೆದುಕೊಳ್ಳಬೇಕಾಯಿತು. ಆದರೆ, ಈಗ ಸಿಬಿಐ ಮೂಲಕ ನರೇಂದ್ರಮೋದಿ ಸರಕಾರವು, ‘ಬಳ್ಳಾರಿ ಗ್ಯಾಂಗ್’ ಅನ್ನು ರಕ್ಷಣೆ ಮಾಡುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರವು 2013ರ ನ.18ರಂದು 9 ಬಂದರುಗಳ ಮೂಲಕ ಅಕ್ರಮವಾಗಿ ಅದಿರು ಸಾಗಾಣೆ ಮಾಡಿರುವ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಿದರು ಎಂದು ಅವರು ಹೇಳಿದರು.

ರಾಜ್ಯದ ಕಾರವಾರ, ನವ ಮಂಗಳೂರು, ಗೋವಾ ರಾಜ್ಯದ ಪಣಜಿ ಮತ್ತು ಮರ್ಮಗೋವಾ, ತಮಿಳುನಾಡಿನ ಎನ್ನೋರ್ ಮತ್ತು ಚೈನ್ನೈ, ಆಂಧ್ರಪ್ರದೇಶದ ಕೃಷ್ಣಪಟ್ಟಣಂ, ವಿಶಾಖಪಟ್ಟಣಂ, ಕಾಕಿನಾಡ ಬಂದರುಗಳ ಮೂಲಕ ಅಕ್ರಮವಾಗಿ ಅದಿರು ಸಾಗಾಣೆಯಾಗಿದೆ ಎಂದು ಅವರು ಹೇಳಿದರು.

2017ರ ಮೇ 27ರಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಯಡಿಯೂರಪ್ಪರನ್ನು ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿದರು. ಜೂ.13 ರಂದು ಗೋವಾ ರಾಜ್ಯದ ಎರಡು ಬಂದರುಗಳು ಹಾಗೂ ನ.8 ರಂದು ರಾಜ್ಯದ ಹಾಗೂ ತಮಿಳುನಾಡಿನ ತಲಾ ಎರಡು ಬಂದರುಗಳ ಮೂಲಕ ಅಕ್ರಮ ಅದಿರು ಸಾಗಾಟ ಮಾಡಿದ ಪ್ರಕರಣವನ್ನು ಸಿಬಿಐ ಮುಚ್ಚಿ ಹಾಕಿತು ಎಂದು ಅವರು ದೂರಿದರು.

ನರೇಂದ್ರಮೋದಿ ಹಾಗೂ ಅಮಿತ್ ಶಾ ಬಳ್ಳಾರಿ ರೆಡ್ಡಿ ಸಹೋದರರಾದ ಗಾಲಿ ಕರುಣಾಕರರೆಡ್ಡಿ, ಗಾಲಿ ಸೋಮಶೇಖರೆಡ್ಡಿ, ಬಿ.ಶ್ರೀರಾಮುಲು(ಎರಡು ಕ್ಷೇತ್ರಗಳಲ್ಲಿ), ಲಲ್ಲೇಶ್‌ರೆಡ್ಡಿ, ಟಿ.ಎಚ್.ಸುರೇಶ್‌ಬಾಬು, ಸಣ್ಣ ಫಕೀರಪ್ಪ ಹಾಗೂ ಸಾಯಿ ಕುಮಾರ್‌ಗೆ ಬಿಜೆಪಿ ಟಿಕೆಟ್ ನೀಡಲಾಗಿದೆ ಎಂದು ಸುರ್ಜೇವಾಲಾ ಹೇಳಿದರು.

ಬಿಜೆಪಿಯಲ್ಲಿದ್ದ ಆನಂದ್‌ಸಿಂಗ್ ಹಾಗೂ ಬಿ.ನಾಗೇಂದ್ರರಿಗೆ ಕಾಂಗ್ರೆಸ್ ಟಿಕೆಟ್ ನೀಡಿರುವ ಕ್ರಮವನ್ನು ಸಮರ್ಥಿಸಿಕೊಂಡ ರಣದೀಪ್‌ಸಿಂಗ್, ಆರು ಪ್ರಕರಣಗಳು ಮುಕ್ತಾಯವಾಗಿವೆ. 2011ರಲ್ಲಿ ಲೋಕಾಯುಕ್ತ ಪ್ರಕರಣ ದಾಖಲಿಸಿತ್ತು. 2013ರಲ್ಲಿ ಸಿಬಿಐ ಕೇಸ್ ದಾಖಲಿಸಿ ತನಿಖೆ ನಡೆಸಿತ್ತು. ಎಸ್‌ಐಟಿ ತನಿಖೆ ಇನ್ನೂ ಮುಂದುವರೆದಿದೆ. ಆರೋಪ ಸಾಬೀತಾದರೆ ಪಕ್ಷ ಮುಂದಿನ ತೀರ್ಮಾನ ಕೈಗೊಳ್ಳುತ್ತದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಎಐಸಿಸಿ ಮಾಧ್ಯಮ ವಿಭಾಗದ ಸಂಚಾಲಕಿ ಪ್ರಿಯಾಂಕಾ ಚತುರ್ವೇದಿ, ಕೆಪಿಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥ ಪ್ರೊ.ಕೆ.ಈ.ರಾಧಾಕೃಷ್ಣ, ರಾಜ್ಯಸಭಾ ಸದಸ್ಯ ಪ್ರೊ.ರಾಜೀವ್‌ಗೌಡ ಉಪಸ್ಥಿತರಿದ್ದರು.

ಅಂಬಿ ಜೊತೆ ಸೌಜನ್ಯದ ಭೇಟಿ
ಮಾಜಿ ಸಚಿವ ಅಂಬರೀಶ್ ಜೊತೆ ಸೌಜನ್ಯದಿಂದ ಭೇಟಿ ಮಾಡಿದ್ದೆ. ಅವರು ನಮ್ಮ ಪಕ್ಷದ ನಾಯಕರು, ನಮ್ಮ ತಾರಾ ಪ್ರಚಾರಕ(ಸ್ಟಾರ್ ಕ್ಯಾಂಪೇನರ್)ರು ಆಗಿದ್ದಾರೆ. ಕಾಂಗ್ರೆಸ್ ನಾಯಕರ ವಿರುದ್ಧ ಅಂಬರೀಶ್‌ಗೆ ಯಾವುದೆ ಅಸಮಾಧಾನವಿಲ್ಲ
-ಕೆ.ಸಿ.ವೇಣುಗೋಪಾಲ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News