‘ಕರ್ನಾಟಕದ ಹೆಮ್ಮೆ-ಕಾಂಗ್ರೆಸ್ ಮತ್ತೊಮ್ಮೆ': ಚುನಾವಣಾ ಘೋಷವಾಕ್ಯ ಅನಾವರಣಗೊಳಿಸಿದ ವೇಣುಗೋಪಾಲ್

Update: 2018-04-24 14:21 GMT

ಬೆಂಗಳೂರು, ಎ.24: ರಾಜ್ಯ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಆಡಳಿತರೂಢ ಕಾಂಗ್ರೆಸ್ ಪಕ್ಷದ ‘ಕರ್ನಾಟಕದ ಹೆಮ್ಮೆ-ಕಾಂಗ್ರೆಸ್ ಮತ್ತೊಮ್ಮೆ’ ಘೋಷ ವಾಕ್ಯವನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅನಾವರಣಗೊಳಿಸಿದರು.

ಮಂಗಳವಾರ ನಗರದ ಕ್ವೀನ್ಸ್‌ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಘೋಷ ವಾಕ್ಯ ಅನಾವರಣಗೊಳಿಸುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ಗುಂಡೂರಾವ್, ರಾಜ್ಯ ಸರಕಾರವು ಐದು ವರ್ಷಗಳಲ್ಲಿ ಮಾಡಿರುವ ಸಾಧನೆ, ಅಭಿವೃದ್ಧಿ, ಜನರಿಗೆ ಕೊಟ್ಟ ಮಾತನ್ನು ಉಳಿಸಿಕೊಂಡ ಏಕೈಕ ಸರಕಾರ ಎಂಬ ಹೆಗ್ಗಳಿಕೆ ಪಾತ್ರವಾಗಿದೆ ಎಂದರು.

ನಾವು ನುಡಿದಂತೆ ನಡೆದಿದ್ದೇವೆ. ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ನಮ್ಮ ಸಾಧನೆಗಳನ್ನು ಜನತೆಯ ಮುಂದಿಡುತ್ತೇವೆ. ಸರಕಾರ ಹಾಗೂ ಪಕ್ಷದ ಘೋಷ ವಾಕ್ಯ ಇದೇ ಆಗಿರಲಿದೆ. ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿಯವರು ಈ ತಿಂಗಳ ಅಂತ್ಯಕ್ಕೆ ಮತ್ತೊಮ್ಮೆ ರಾಜ್ಯದಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ಅವರು ಹೇಳಿದರು.

ಅಂಬರೀಶ್ ಜೊತೆ ಬೇರೆ ವಿಚಾರ ಚರ್ಚಿಸಿಲ್ಲ: ಮಾಜಿ ಸಚಿವ ಅಂಬರೀಶ್ ತಮ್ಮ ವಿರುದ್ಧ ಅಸಮಾಧಾನ ಹೊರ ಹಾಕಿರುವ ಕುರಿತು ಮಾಧ್ಯಮಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ದಿನೇಶ್‌ಗುಂಡೂರಾವ್, ಅಂಬರೀಶ್ ಜೊತೆ ನಾನು ಯಾವುದೆ ಸಮೀಕ್ಷೆ ಕುರಿತು ಚರ್ಚೆ ಮಾಡಿಲ್ಲ ಎಂದರು.

ಅಂಬರೀಶ್ ನಮ್ಮ ಪಕ್ಷದ ಹಿರಿಯ ನಾಯಕರು. ಚುನಾವಣೆಯಲ್ಲಿ ಸ್ಪರ್ಧಿಸುವ ವಿಚಾರದ ಕುರಿತು ಆದಷ್ಟು ಬೇಗ ತೀರ್ಮಾನ ಮಾಡಿ. ನಿರ್ಧಾರ ಕೈಗೊಳ್ಳುವುದು ವಿಳಂಬವಾದಷ್ಟು ಕಷ್ಟವಾಗುತ್ತದೆ ಎಂಬುದರ ಕುರಿತು ಮಾತ್ರ ಅವರೊಂದಿಗೆ ಚರ್ಚಿಸಿದ್ದೇನೆ ಎಂದು ಅವರು ಹೇಳಿದರು.

ಪಕ್ಷದ ಆಂತರಿಕ ವಿಚಾರಗಳನ್ನು ಬಹಿರಂಗವಾಗಿ ಚರ್ಚಿಸಲು ಸಾಧ್ಯವಿಲ್ಲ. ಆ ರೀತಿಯಲ್ಲಿ ಚರ್ಚೆ ಮಾಡಬೇಕಾದರೆ ಬಹಳಷ್ಟು ವಿಚಾರಗಳನ್ನು ನಾವು ಚರ್ಚಿಸಬಹುದು. ಆದರೆ, ಇಂತಹ ವಿಚಾರಗಳ ಬಗ್ಗೆ ಪಕ್ಷದ ಚೌಕಟ್ಟಿನಲ್ಲಿ ಮಾತ್ರ ಚರ್ಚಿಸುವುದು ಉತ್ತಮ ಎಂದು ದಿನೇಶ್ ಗುಂಡೂರಾವ್ ತಿಳಿಸಿದರು.

ಈ ಸಂದರ್ಭದಲ್ಲಿ ಎಐಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥ ರಣದೀಪ್‌ಸಿಂಗ್ ಸುರ್ಜೇವಾಲಾ, ಸಂಚಾಲಕಿ ಪ್ರಿಯಾಂಕಾ ಚುತುರ್ವೇದಿ, ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ಗುಂಡೂರಾವ್, ರಾಜ್ಯಸಭಾ ಸದಸ್ಯ ಪ್ರೊ.ರಾಜೀವ್‌ಗೌಡ, ಮಾಜಿ ವಿಧಾನಪರಿಷತ್ ಸದಸ್ಯ ಸಲೀಮ್ ಅಹ್ಮದ್, ಕೆಪಿಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥ ಪ್ರೊ.ಕೆ.ಈ.ರಾಧಾಕೃಷ್ಣ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News