ಜೆಡಿಎಸ್‌ನ 7 ಬಂಡಾಯ ಶಾಸಕರ ಅನರ್ಹ ವಿಚಾರ: ಮೇ 7ರೊಳಗೆ ತೀರ್ಪು ಪ್ರಕಟಿಸಲು ಹೈಕೋರ್ಟ್ ನಿರ್ದೇಶನ

Update: 2018-04-24 14:26 GMT

ಬೆಂಗಳೂರು, ಎ.24: ಜೆಡಿಎಸ್‌ನ ಏಳು ಬಂಡಾಯ ಶಾಸಕರನ್ನು ಅನರ್ಹಗೊಳಿಸಿರುವ ಸಂಬಂಧದ ತೀರ್ಪನ್ನು ಮೇ 7ರೊಳಗೆ ಪ್ರಕಟಿಸುವಂತೆ ವಿಧಾನಸಭೆ ಸ್ಪೀಕರ್ ಗೆ ಹೈಕೋರ್ಟ್ ನಿರ್ದೇಶನ ನೀಡಿದೆ.

ಶಾಸಕರನ್ನು ಅನರ್ಹಗೊಳಿಸಲು ಸ್ಪೀಕರ್‌ಗೆ ನಿರ್ದೇಶಿಸಲು ಕೋರಿ ಜೆಡಿಎಸ್ ಶಾಸಕರಾದ ಬಾಲಕೃಷ್ಣ, ಬಿ.ಬಿ.ನಿಂಗಯ್ಯ ಸಲ್ಲಿಸಿದ್ದ ರಿಟ್ ಅರ್ಜಿ ಕುರಿತ ತೀರ್ಪನ್ನು ನ್ಯಾಯಮೂರ್ತಿ ರಾಘವೇಂದ್ರ ಎಸ್. ಚೌಹಾಣ್ ಅವರಿದ್ದ ಏಕಸದಸ್ಯ ನ್ಯಾಯಪೀಠ ನೀಡಿತು.

2016ರ ಜೂನ್ 11 ರಂದು ನಡೆದಿದ್ದ ರಾಜ್ಯಸಭೆ ಚುನಾವಣೆ ವೇಳೆ ಜೆಡಿಎಸ್ ಅಭ್ಯರ್ಥಿ ಎಂ. ಪಾರೂಕ್ ಅವರಿಗೆ ಎಲ್ಲ ಶಾಸಕರು ಮತ ಚಲಾಯಿಸುವಂತೆ ಪಕ್ಷ ವಿಪ್ ನೀಡಿತ್ತು, ಆದರೆ ವಿಪ್ ಉಲ್ಲಂಘನೆ ಮಾಡಿದ್ದ ಶಾಸಕರಾದ ಝಮೀರ್ ಅಹಮದ್ ಖಾನ್, ಎನ್. ಚೆಲುವರಾಯ ಸ್ವಾಮಿ, ಎಚ್.ಸಿ ಬಾಲಕೃಷ್ಣ, ಎ.ಬಿ ರಮೇಶ್ ಬಂಡಿಸಿದ್ದೇಗೌಡ, ಇಕ್ಬಾಲ್ ಅನ್ಸಾರಿ, ಅಖಂಡ ಶ್ರೀನಿವಾಸಮೂರ್ತಿ ಮತ್ತು ಭೀಮಾ ನಾಯ್ಕ ಅವರು ಬೇರೆ ಪಕ್ಷದ ಅಭ್ಯರ್ಥಿಗಳಿಗೆ ಮತ ಚಲಾಯಿಸಿದ್ದರು. ಈ ಹಿನ್ನೆಲೆಯಲ್ಲಿ 7 ಶಾಸಕರನ್ನು ಕ್ಷದಿಂದ ಅಮಾನತು ಮಾಡಲಾಗಿತ್ತು,

ಅಲ್ಲದೆ, ವಿಧಾನಸಭೆ ಸ್ಪೀಕರ್ ಅವರು ಏಳು ಜನ ಶಾಸಕರ ಸದಸ್ಯತ್ವ ಅನರ್ಹತೆ ಕುರಿತಂತೆ ಯಾವುದೇ ತೀರ್ಪನ್ನು ನೀಡಿರಲಿಲ್ಲ. ಹೀಗಾಗಿ, ಮಂಗಳವಾರ ಹೈಕೋರ್ಟ್ ನ್ಯಾಯಪೀಠವು ಜೆಡಿಎಸ್‌ನ ಏಳು ಬಂಡಾಯ ಶಾಸಕರನ್ನು ಅನರ್ಹಗೊಳಿಸುವ ಕುರಿತ ತೀರ್ಪನ್ನು ಮೇ 7ರೊಳಗೆ ಪ್ರಕಟಿಸುವಂತೆ ವಿಧಾನಸಭೆ ಸ್ಪೀಕರ್ ಕೋಳಿವಾಡ ಅವರಿಗೆ ನಿರ್ದೇಶನ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News