ಮಾರಕ ರೋಗ- ಮಲೇರಿಯಾ

Update: 2018-04-24 18:33 GMT

ಪ್ರತಿ ವರ್ಷ ಎಪ್ರಿಲ್ 25ರಂದು ವಿಶ್ವದಾದ್ಯಂತ ವಿಶ್ವ ಮಲೇರಿಯಾ ದಿನ ಎಂದು ಆಚರಿಸಲಾಗುತ್ತಿದೆ. ಮಲೇರಿಯಾ ರೋಗದಿಂದಾಗುವ ಜಾಗತಿಕ ತೊಂದರೆಗಳು ಮತ್ತು ಪರಿಣಾಮಗಳ ಬಗ್ಗೆ ಅರಿವು ಮೂಡಿಸಿ ರೋಗದ ಬಗ್ಗೆ ಜಾಗೃತಿ ಮೂಡಿಸುವ ಸದುದ್ದೇಶದಿಂದ ಈ ಆಚರಣೆಯನ್ನು ಜಾರಿಗೆ ತರಲಾಯಿತು. ವಿಶ್ವದಾದ್ಯಂತ ಸರಿಸುಮಾರು 3.3 ಬಿಲಿಯನ್ ಮಂದಿ ಈ ರೋಗಕ್ಕೆ ವರ್ಷವೊಂದರಲ್ಲಿ ತುತ್ತಾಗುತ್ತಿದ್ದು, 2012ರಲ್ಲಿ 6.5 ಲಕ್ಷ ಮಂದಿ ಸಾವನ್ನಪ್ಪಿದ್ದಾರೆ. 2013ರಲ್ಲಿ 5.8 ಲಕ್ಷ ಮಂದಿ ಜೀವತೆತ್ತಿದ್ದಾರೆ ಎಂದು ಅಂಕಿ ಅಂಶಗಳಿದ ತಿಳಿದುಬಂದಿದೆ.

ವಿಶ್ವಸಂಸ್ಥೆಯ 60ನೇ ವಾರ್ಷಿಕ ಸಮ್ಮೇಳನ 2007ರ ಮೇನಲ್ಲಿ ಜರುಗಿದಾಗ ಈ ವಿಶ್ವ ಮಲೇರಿಯಾ ದಿನದ ಆಚರಣೆಯನ್ನು ಜಾರಿಗೆ ತರಲಾಯಿತು. ಲ್ಯಾಟಿನ್ ಅಮೆರಿಕ, ಆಫ್ರಿಕಾ, ಏಶ್ಯಾಖಂಡಗಳ ಉಷ್ಣವಲಯದ ಪ್ರದೇಶಗಳಲ್ಲಿ ಹೆಚ್ಚಾಗಿ ಕಾಣಸಿಗುವ ಮಲೇರಿಯಾ, ಮಾರಣಾಂತಿಕ ಖಾಯಿಲೆ ಅಲ್ಲದಿದ್ದರೂ ಮನುಕುಲದ ಬಹುದೊಡ್ಡ ಶತ್ರು ಎಂದರೂ ತಪ್ಪಲ್ಲ. ಬೆಳೆಯುತ್ತಿರುವ ರಾಷ್ಟ್ರದ ಬಡ ಮತ್ತು ಮಧ್ಯಮ ವರ್ಗದ ಜನರಲ್ಲಿ ಕಾಣಸಿಗುವ ಮಲೇರಿಯಾ, ಮೂಲಭೂತ ಸೌಕರ್ಯದ ಕೊರತೆ, ಬಡತನ, ಅನಕ್ಷರತೆ ಇತ್ಯಾದಿ ಕಾರಣಗಳಿಂದಾಗಿ ಭಾರತದಂತಹ ರಾಷ್ಟ್ರಗಳನ್ನು ಬಹಳವಾಗಿ ಕಾಡುತ್ತಿದೆ. ಮಲೇರಿಯಾ ರೋಗದಿಂದ ಉಂಟಾಗುವ ಆರ್ಥಿಕ, ಸಾಮಾಜಿಕ ಪರಿಣಾಮಗಳಿಂದಾಗಿ ದೇಶದ ಪ್ರಗತಿಗೆ ಬಹಳ ದೊಡ್ಡ ಕಂಟಕವಾಗಿ ಮಲೇರಿಯಾ ಬೆಳೆದು ನಿಂತಿದೆ ಎಂದರೂ ತಪ್ಪಲ್ಲ. ಈ ನಿಟ್ಟಿನಲ್ಲಿ ಮಲೇರಿಯಾ ದಿನ ಆಚರಣೆ ಹೆಚ್ಚು ಅರ್ಥಪೂರ್ಣವಾಗಬೇಕಾದರೆ ನಾವೆಲ್ಲರೂ ಮಲೇರಿಯಾ ವಿರುದ್ಧ ಸಮರ ಸಾರಿ, ರೋಗವನ್ನು ಗೆಲ್ಲಬೇಕಾದ ಅನಿವಾರ್ಯತೆಯೂ ಇದೆ.

ಕಾರಣಗಳು
ಮಲೇರಿಯಾ ಅತೀ ಸಾಮಾನ್ಯವಾದ ಸಾಂಕ್ರಾಮಿಕ ರೋಗವಾಗಿದ್ದು, ಉಷ್ಣವಲಯ ಮತ್ತು ಉಪ-ಉಷ್ಣವಲಯಗಳಲ್ಲಿ ಹೆಚ್ಚು ಕಂಡುಬರುತ್ತದೆ. ಮಲೇರಿಯಾ ರೋಗ ಒಂದು ಉಗ್ರ ಸ್ವರೂಪದ ಸಾರ್ವಜನಿಕ ಆರೋಗ್ಯ ಪಿಡುಗು ಆಗಿದ್ದು, ಬಡತನದ ರೇಖೆಗಿಂತ ಕೆಳಗಿರುವವರಲ್ಲಿ ಹೆಚ್ಚು ಕಂಡುಬರುತ್ತದೆ ಮತ್ತು ಬಡತನಕ್ಕೆ ಇದು ಕೂಡಾ ಕಾರಣವಾಗಿದ್ದು, ಆರ್ಥಿಕ ಮುನ್ನಡೆಗೆ ಅಡ್ಡಿಆಗುತ್ತದೆ. ಪ್ಲಾಸ್ಮೋಡಿಯಂ ಜಾತಿಗೆ ಸೇರಿದ ಪ್ರೋಟೊಸೋವನ್ ಪರಾವಲಂಬಿಯೆ ಈ ರೋಗಕ್ಕೆ ಪ್ರಮುಖ ಕಾರಣ. ಈ ಪರಾವಲಂಬಿ ಜೀವಿಗಳಲ್ಲಿ ಐದುಜಾತಿಗಳು ಮಾನವರಿಗೆ ಮಲೇರಿಯಾ ಸೋಂಕು ತಗಲಿಸಬಹುದು. ಪ್ಲಾಸ್ಮೋಡಿಯಂ ವೈವಾಕ್ಸ್, ಫಾಲ್ಸಿಫೆರಮ್, ಓವಾಲೆ ಮತ್ತು ಮಲೇರಿಯಾ ಎಂಬ ಐದು ಜಾತಿಗಳಲ್ಲಿ ಫಾಲ್ಸಿಫೆರಮ್ ಜಾತಿಯ ರೋಗಾಣು ಅತ್ಯಂತ ಗುರುತರವಾದ ಮಲೇರಿಯಾ ರೋಗಕ್ಕೆ ಕಾರಣವಾಗುತ್ತದೆ. ಸುಮಾರು ಶೇ. 80 ಮಲೇರಿಯಾ ಪ್ರಕರಣಗಳಿಗೆ ಫಾಲ್ಸಿಫೆರಂ ಕಾರಣವಾಗಿದ್ದು ಮಲೇರಿಯಾದಿಂದ ಸಂಭವಿಸುವ ಸಾವುಗಳಲ್ಲಿ ಸುಮಾರು ಶೇ. 90 ಪಾಲು ಇದರದ್ದೇ ಆಗಿರುತ್ತದೆ.

ಹೇಗೆ ಹರಡುತ್ತದೆ?
ಮಲೇರಿಯಾ ರೋಗ ಕೇವಲ ಹೆಣ್ಣು ಅನಾಫಿಲಿಸ್ ಸೊಳ್ಳೆಗಳಿಂದ ಮಾತ್ರ ಹರಡುತ್ತದೆ. ಮಲೇರಿಯಾ ಸೋಂಕಿತ ವ್ಯಕ್ತಿಯ ರಕ್ತವನ್ನು ಹೀರಿಕೊಂಡ ಸೊಳ್ಳೆಯು ಸೋಂಕಿತವಾಗುತ್ತವೆ. ಅನಾಫಿಲಿಸ್ ಹೆಣ್ಣುಸೊಳ್ಳೆ, ಸೋಂಕಿತ ವ್ಯಕ್ತಿಯನ್ನು ಚುಚ್ಚಿದಾಗ ಸಣ್ಣ ಪ್ರಮಾಣದಲ್ಲಿ ಹೀರಿಕೊಳ್ಳಲಾದ ರಕ್ತದಲ್ಲಿ ಸೂಕ್ಷ್ಮ ಮಲೇರಿಯಾ ಪರವಲಂಬಿಗಳಿರುತ್ತದೆ. ಒಂದು ವಾರಗಳ ಬಳಿಕ ಸೋಂಕಿತ ಸೊಳ್ಳೆಯು ಪುನಃ ವ್ಯಕ್ತಿಯ ರಕ್ತ ಹೀರಿಕೊಳ್ಳುವಾಗ ಈ ಪರಾವಲಂಬಿಗಳು ಸೊಳ್ಳೆಯ ಎಂಜಲಿನೊಂದಿಗೆ ಬೆರೆತು, ಕಡಿತಕ್ಕೊಳಗಾದ ವ್ಯಕ್ತಿಯ ರಕ್ತದಲ್ಲಿ ಸೇರಿಕೊಳ್ಳುತ್ತದೆ. ಹೀಗೆ ಸೋಂಕಿತ ಹೆಣ್ಣು ಅನಾಫಿಲಿಸ್ ಸೊಳ್ಳೆ ಆರೋಗ್ಯವಂತ ವ್ಯಕ್ತಿಗೆ ಕಚ್ಚುವುದರಿಂದ ಜನರು ಮಲೇರಿಯಾ ರೋಗಕ್ಕೆ ತುತ್ತಾಗುತ್ತಾರೆ. ಕೇವಲ ಹೆಣ್ಣು ಸೊಳ್ಳೆಗಳು ರಕ್ತವನ್ನು ಹೀರುತ್ತದೆ. ಹಾಗಾಗಿ ಗಂಡು ಸೊಳ್ಳೆಗಳು ರೋಗವನ್ನು ಹರಡಿಸುವುದಿಲ್ಲ. ಅನಾಫಿಲಿಸ್ ಜಾತಿಯ ಹೆಣ್ಣು ಸೊಳ್ಳೆಗಳು ರಾತ್ರಿಯ ವೇಳೆ ರಕ್ತಹೀರಲು ಇಚ್ಛಿಸುತ್ತವೆ. ಅವು ಮುಸ್ಸಂಜೆಯ ವೇಳೆ ಆಹಾರಕ್ಕಾಗಿ ಸಂಚರಿಸಲಾರಂಭಿಸಿ ಆಹಾರ ಹೀರಿಕೊಳ್ಳುವವರೆಗೂ ರಾತ್ರಿ ಹೊತ್ತು ಅವುಗಳ ಸಂಚಾರವನ್ನು ಮುಂದುವರಿಸುತ್ತದೆ. ರಕ್ತದಾನದ ಮೂಲಕವೂ ಮಲೇರಿಯಾ ಪರಾವಲಂಬಿಗಳು ಹರಡಬಹುದು. ಆದರೆ ಈ ರೀತಿಯಿಂದ ಹರಡುವುದು ಬಹಳ ಅಪರೂಪ.

ಮಲೇರಿಯಾ ರೋಗ ಹರಡುವ ಅನಾಫಿಲಿಸ್ ಸೊಳ್ಳೆ ತನ್ನ ವಂಶಾಭಿವೃದ್ಧಿ ನಡೆಸಲು ಮನುಷ್ಯನನ್ನು ಅವಲಂಬಿಸಿರುತ್ತದೆ. ಹೀಗೆ ಮನುಷ್ಯ ಸೋಂಕಿತ ಸೊಳ್ಳೆಯಿಂದ ಆರೋಗ್ಯವಂತ ಮನುಷ್ಯನ ರಕ್ತವನ್ನು ಸೇರಿದ ಬಳಿಕ, ಈ ಪರಾವಲಂಬಿಗಳು ಕೆಂಪು ರಕ್ತಕಣಗಳೊಳಗೆ ವೃದ್ಧಿಯಾಗುತ್ತದೆ ಮತ್ತು ಮಲೇರಿಯಾ ರೋಗದ ಲಕ್ಷ್ಷಣಗಳು ಕಾಣಿಸತೊಡಗುತ್ತದೆ.

ಮಲೇರಿಯಾ ಸಾಂಕ್ರಮಿಕ ರೋಗಗಳನ್ನು ತಡೆಗಟ್ಟುವ ಕೆಲವು ಲಸಿಕೆಗಳು ಇನ್ನೂ ವಿಕಸನದ ಹಂತದಲ್ಲಿಯೇ ಇದೆ. ಉನ್ನತ ಸ್ಥರದ ರಕ್ಷಣೆ ನೀಡುವ ಮಲೇರಿಯಾ ಲಸಿಕೆ ಸದ್ಯಕ್ಕೆ ಲಭ್ಯವಿಲ್ಲದ ಕಾರಣ ರೋಗವನ್ನು ತಡೆಗಟ್ಟುವ ನಿಟ್ಟಿನಲ್ಲಿ ಸೊಳ್ಳೆ ನಿಯಂತ್ರಣ ಮತ್ತು ಸೊಳ್ಳೆಗಳ ನಿರ್ಮೂಲನಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಮಲೇರಿಯಾ ರೋಗ ಹೆಚ್ಚಿರುವ ಜಾಗಗಳಲ್ಲಿ ಮಲೇರಿಯಾ ಸೋಂಕಿನ ಸಾಧ್ಯತೆ ಕಡಿಮೆಗೊಳಿಸಲು ರೋಗ ನಿರೋಧಕ ಔಷಧಿಗಳನ್ನು ನಿರಂತರವಾಗಿ ಸೇವಿಸಬೇಕಾಗುತ್ತದೆ. ಆದರೂ, ಪರಾವಲಂಬಿ ಪ್ಲಾಸ್ಮೋಡಿಯಂ ಜೀವಿಗಳು, ಇಂತಹ ಹಲವಾರು ಔಷಧಿಗಳ ವಿರುದ್ಧ ಹೋರಾಡುವಷ್ಟರ ಮಟ್ಟಿಗೆ ವಿಕಸನಗೊಂಡಿದೆ. ಈ ಕಾರಣದಿಂದಲೇ ಮಲೇರಿಯಾ ರೋಗದ ಪರಿಣಾಮಕಾರಿ ನಿಯಂತ್ರಣಕ್ಕೆ ಹೆಚ್ಚಿನ ಮುತುವರ್ಜಿಯಿಂದ ಕೆಲಸ ಮಾಡಬೇಕಾದ ಅನಿವಾರ್ಯತೆ ಬಂದೊದಗಿದೆ.

ರೋಗದ ಲಕ್ಷಣಗಳು   
 ವಿಪರೀತ ಜ್ವರ, ನಡುಗುವಿಕೆ, ಗಂಟು ಅಥವಾ ಕೀಲುನೋವು, ವಾಂತಿ, ರಕ್ತಹೀನತೆ, ತಲೆ ಸುತ್ತುವುದು, ಉಸಿರು ಕಟ್ಟುವಿಕೆ ಮುಂತಾದವುಗಳು ಕಾಣಿಸಿಕೊಳ್ಳುತ್ತದೆ. ರೋಗದ ತೀವ್ರತೆ ಜಾಸ್ತಿಯಾದಲ್ಲಿ ಅಕ್ಷಿಪಟಲದ ಹಾನಿ, ಸೆಳೆತ ಅಥವಾ ಅಪಸ್ಮಾರ ಮತ್ತು ಮೂತ್ರದಲ್ಲಿ ರಕ್ತ ಬರುವ ಸಾಧ್ಯತೆಯೂ ಇದೆ. ಮಲೇರಿಯಾ ರೋಗದಲ್ಲಿ ಬರುವ ಜ್ವರವೂ ಕೂಡಾ ಪ್ಲಾಸ್ಮೋಡಿಯಂ ಪರಾವಲಂಬಿ ಜಾತಿಯ ಪ್ರಭೇದಕ್ಕೆ ಅನುಗುಣ ವಾಗಿ ಇರುತ್ತದೆ. ವೈವಾಕ್ಸ್ ಮತ್ತು ಓವಾಲೆ ಸೋಂಕು ತಗಲಿದ್ದಲ್ಲಿ, ಎರಡು ದಿನಗಳಿಗೊಮ್ಮೆ ನಾಲ್ಕರಿಂದ 6 ಗಂಟೆಗಳ ಕಾಲ ಹಠಾತ್ ಚಳಿ ಮತ್ತು ನಡುಕ, ಜ್ವರ ಮತ್ತು ಬೆವರುವಿಕೆ ಸಂಭವಿಸುತ್ತದೆ. ಪ್ಲಾಸ್ಮೋಡಿಯಂ ಮಲೇರಿಯಾ ಪ್ರಭೇದಗಳಲ್ಲಿ ಮೂರು ದಿನಗಳಿಗೊಮ್ಮೆ ಜ್ವರ ಮತ್ತು ಬೆವರುವಿಕೆ ಕಾಣಿಸಿಕೊಳ್ಳಬಹುದು. ಫಾಲ್ಸಿಪೆರಂ ಪ್ರಭೇದದ ಮಲೇರಿಯಾ ಪ್ರತಿ 36-48ಗಂಟೆಗಳಿಗೊಮ್ಮೆ ಮರುಕಳಿಸುವ ಜ್ವರವಾಗಿದ್ದು ಅಷ್ಟೇನೂ ತೀವ್ರವಾಗಿರುವುದಿಲ್ಲ. ಆದರೆ ಬಹುಮಟ್ಟಿಗೆ ಸತತ ಜ್ವರಕ್ಕೆ ಕಾರಣವಾಗಬಹುದು. ಅತೀ ತೀವ್ರ ಮಲೇರಿಯಾ ಸಾಮಾನ್ಯ ವಾಗಿ ಫಾಲ್ಸಿಫೆರಂ ಸೋಂಕಿನಿಂದ ಉಂಟಾಗುತ್ತದೆ. ಸೋಂಕು ತಗಲಿದ 6-14 ದಿನಗಳ ನಂತರ ಕಾಣಿಸಿಕೊಳ್ಳುತ್ತದೆ. ಸಕಾಲದಲ್ಲಿ ಸೂಕ್ತ ಚಿಕಿತ್ಸೆ, ದೊರಕದಿದ್ದರೆ ತೀವ್ರ ಮಲೇರಿಯಾದ ಪರಿಣಾಮದಿಂದ ಕೋಮಾಸ್ಥಿತಿ ಮತ್ತು ಸಾವು ಸಂಭವಿಸಬಹುದು.

ಚಿಕ್ಕ ಮಕ್ಕಳು ಮತ್ತು ಗರ್ಭಿಣಿಯರು ಇದಕ್ಕೆ ಸುಲಭವಾಗಿ ತುತ್ತಾಗುತ್ತಾರೆ. ಹಿಗ್ಗಿದ ಗುಲ್ಮಗ್ರಂಥಿ, ತೀವ್ರ ತಲೆನೋವು, ಮೆದುಳಿನ ರಕ್ತಹೀನತೆ, ಹಿಗ್ಗಿದ ಯಕೃತ್ತು, ಮೂತ್ರಪಿಂಡಗಳ ವೈಫಲ್ಯಗಳು ಸಂಭವಿಸಬಹುದು. ಮೂತ್ರಪಿಂಡಗಳ ವೈಫಲ್ಯದಿಂದ ಕರಿಮೂತ್ರ ಜ್ವರ ಕೂಡಾ ಉಂಟಾಗಬಹುದು. ಮಕ್ಕಳಲ್ಲಿ ತೀವ್ರ ಮಲೇರಿಯಾ ಬಂದಲ್ಲಿ, ಅರಿವಿನ ಶಕ್ತಿ ಕುಂಟಿತಗೊಳಿಸ ಬಹುದು. ಮೆದುಳಿನ ಮಲೇರಿಯಾ ಜ್ವರದಿಂದ ನರ ಮಂಡಲಕ್ಕೂ ಹಾನಿಯಾಗುವ ಸಾಧ್ಯತೆ ಇದೆ. ಅಪಸ್ಮ್ಮಾರ ಮತ್ತು ಅಕ್ಷಿಪಟಲ ಬಿಳಿಯಾಗುವುದು ಮೆದುಳಿನ ಜ್ವರದ ಸಂಕೇತವಾಗಿರುತ್ತದೆ. ತೀವ್ರತರ ಮಲೇರಿಯಾ ಫಾಲ್ಸಿಫೆರಂ ಪ್ರಭೇದಗಳಲ್ಲಿ ಕಾಣಸಿಗುತ್ತದೆ.

 ಯಕೃತ್ತಿನಲ್ಲಿ ಅವ್ಯಕ್ತ ಪರಾವಲಂಬಿಗಳ ಇರುವಿಕೆಯ ಕಾರಣದಿಂದಾಗಿ, ಸೋಂಕು ತಗಲಿದ ತಿಂಗಳುಗಳ ಅಥವಾ ವರ್ಷಗಳ ಬಳಿಕವೂ ರೋಗ ಮರುಕಳಿಸಬಹುದು. ಹಾಗಾಗಿ ರಕ್ತದಲ್ಲಿ ಪರಾವಲಂಬಿಗಳು ಇಲ್ಲದಿರುವುದನ್ನು ಕಂಡು, ಮಲೇರಿಯಾ ಇಲ್ಲ ಎಂಬ ತೀರ್ಮಾನಕ್ಕೆ ಬರಬಾರದು. ಈ ರೀತಿಯ ದೀರ್ಘಕಾಲದ ಮಲೇರಿಯಾ ವೈವಾಕ್ಸ್ ಮತ್ತು ಓವಾಲೆ ಪ್ರಭೇದಗಳಲ್ಲಿ ಕಂಡುಬರುತ್ತದೆ ಮತ್ತು ಈ ರೀತಿಯ ರೋಗಾಣುವಿನಿಂದ ಮಲೇರಿಯಾ ಬಂದಿದ್ದಲ್ಲಿ ಸಂಪೂರ್ಣವಾಗಿ ಮಲೇರಿಯಾ ನಿರ್ಮೂಲನವಾಗುವಂತೆ ಸೂಕ್ತ ಔಷಧ ಸರಿಯಾದ ಪ್ರಮಾಣದಲ್ಲಿ ತೆಗೆದುಕೊಳ್ಳುವುದು ಅತೀ ಅವಶ್ಯ.

ತಡೆೆಗಟ್ಟುವುದು ಹೇಗೆ?
ಸಾಮಾನ್ಯವಾಗಿ ಎಲ್ಲಾ ಸಾಂಕ್ರಮಿಕ ರೋಗಗಳಲ್ಲಿ ಇರುವಂತೆ ರೋಗ ನಿಯಂತ್ರಣಕ್ಕೆ ಮತ್ತು ತಡೆಗಟ್ಟುವುದಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಮಲೇರಿಯಾ ನಿಯಂತ್ರಣದಲ್ಲಿ ಸಾರ್ವಜನಿಕರ ಪಾತ್ರ ಮತ್ತು ಸಹಕಾರ ಅತೀ ಅವಶ್ಯ. ಸಾರ್ವಜನಿಕ ಸ್ಥಳಗಳಲ್ಲಿ ಸೊಳ್ಳೆಗಳು ಬೆಳೆಯದಂತೆ ಮುನ್ನೆಚ್ಚರಿಕೆ ವಹಿಸುವುದಲ್ಲದೆ ಸಾರ್ವಜನಿಕ ಸ್ಥಳಗಳ ಶುಚಿತ್ವವನ್ನು ಕಾಪಾಡಿಕೊಳ್ಳಬೇಕು.

Writer - ಡಾ. ಮುರಲೀ ಮೋಹನ್, ಚೂಂತಾರು

contributor

Editor - ಡಾ. ಮುರಲೀ ಮೋಹನ್, ಚೂಂತಾರು

contributor

Similar News