ಇಂದು ಆರ್ ಸಿಬಿ-ಚೆನ್ನೈ ಸೂಪರ್ ಕಿಂಗ್ಸ್ ಮುಖಾಮುಖಿ

Update: 2018-04-24 18:51 GMT

ಬೆಂಗಳೂರು, ಎ.24: ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಎರಡು ವರ್ಷಗಳ ಬಳಿಕ ಮತ್ತೊಮ್ಮೆ ಮುಖಾಮುಖಿಯಾಗಲಿವೆ. ಈ ಎರಡು ತಂಡಗಳ ಐಪಿಎಲ್ ಹೋರಾಟಕ್ಕೆ ಚಿನ್ನಸ್ವಾಮಿ ಸ್ಟೇಡಿಯಂ ವೇದಿಕೆ ಸಿದ್ಧವಾಗಿದೆ.

ಸ್ಪಾಟ್ ಫಿಕ್ಸಿಂಗ್‌ನಲ್ಲಿ ಸಿಲುಕಿಹಾಕಿಕೊಂಡ ಕಾರಣ ಕಳೆದ ಎರಡು ಆವೃತ್ತಿಯ ಐಪಿಎಲ್‌ನಲ್ಲಿ ಚೆನ್ನೈ ತಂಡ ಆಡಿರಲಿಲ್ಲ. ಹೀಗಾಗಿ ಎರಡು ತಂಡಗಳ ಅಭಿಮಾನಿಗಳು ಆರ್‌ಸಿಬಿ-ಚೆನ್ನೈ ನಡುವಿನ ಹಣಾಹಣಿ ನೋಡುವುದರಿಂದ ವಂಚಿತರಾಗಿದ್ದರು.

ಎಂಎಸ್ ಧೋನಿ ನೇತೃತ್ವದ ಚೆನ್ನೈ ತಂಡ ಆರ್‌ಸಿಬಿ ವಿರುದ್ಧ ಹೆಡ್-ಟು-ಹೆಡ್ ದಾಖಲೆಯಲ್ಲಿ 13-7 ರಿಂದ ಮುನ್ನಡೆಯಲ್ಲಿದೆ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಉಭಯ ತಂಡಗಳು ಏಳು ಪಂದ್ಯಗಳನ್ನು ಆಡಿದ್ದು, ತಲಾ 3ರಲ್ಲಿ ಜಯ ಸಾಧಿಸಿ ಸಮಬಲ ಸಾಧಿಸಿವೆ. ಒಂದು ಪಂದ್ಯ ಫಲಿತಾಂಶರಹಿತವಾಗಿದೆ.

ಎರಡು ವರ್ಷಗಳ ಬಳಿಕ ಐಪಿಎಲ್‌ಗೆ ವಾಪಸಾಗಿರುವ ಧೋನಿ ಬಳಗ ಈತನಕ ಆಡಿರುವ 5 ಪಂದ್ಯಗಳ ಪೈಕಿ ನಾಲ್ಕರಲ್ಲಿ ಜಯ ಸಾಧಿಸಿದೆ. ವಿರಾಟ್ ಕೊಹ್ಲಿ ನಾಯಕತ್ವದ ಆರ್‌ಸಿಬಿ ಐದು ಪಂದ್ಯಗಳಲ್ಲಿ ಕೇವಲ 2ರಲ್ಲಿ ಜಯ ಸಾಧಿಸಿದೆ. ಕಳೆದ ವಾರ ತವರು ಮೈದಾನದಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ವಿರುದ್ಧ ಜಯ ಸಾಧಿಸಿರುವ ಆರ್‌ಸಿಬಿ ಗೆಲುವಿನ ಲಯ ಕಾಯ್ದುಕೊಳ್ಳುವ ವಿಶ್ವಾಸದಲ್ಲಿದೆ.

ಎಬಿಡಿ ವಿಲಿಯರ್ಸ್ ಫಾರ್ಮ್‌ಗೆ ಮರಳಿರುವುದು ಆತಿಥೇಯ ಆರ್‌ಸಿಬಿಗೆ ಸಿಹಿ ಸುದ್ದಿಯಾಗಿದೆ. ಡೆಲ್ಲಿ ವಿರುದ್ಧ ಪಂದ್ಯದಲ್ಲಿ 39 ಎಸೆತಗಳಲ್ಲಿ 90 ರನ್ ಗಳಿಸಿದ್ದ ಡಿವಿಲಿಯರ್ಸ್ ನೆರೆದಿದ್ದ ಅಭಿಮಾನಿಗಳನ್ನು ರಂಜಿಸಿದ್ದರು.

ಡಿವಿಲಿಯರ್ಸ್ ಏಕಾಂಗಿ ಹೋರಾಟದ ನೆರವಿನಿಂದ ಆರ್‌ಸಿಬಿ ತಂಡ 175 ರನ್ ಗುರಿಯನ್ನು ಇನ್ನೂ ಎರಡು ಓವರ್‌ಗಳು ಬಾಕಿ ಇರುವಾಗಲೇ ತಲುಪಿತ್ತು.

ರಾಜಸ್ಥಾನ ರಾಯಲ್ಸ್ ಹಾಗೂ ಮುಂಬೈ ಇಂಡಿಯನ್ಸ್ ವಿರುದ್ಧ ಕ್ರಮವಾಗಿ 57 ಹಾಗೂ ಔಟಾಗದೆ 92 ರನ್ ಗಳಿಸಿದ್ದ ಕೊಹ್ಲಿ ಪ್ರದರ್ಶನವು ಆರ್‌ಸಿಬಿಯ ಆತ್ಮವಿಶ್ವಾಸ ಹೆಚ್ಚಿಸಿದೆ. ಕೊಹ್ಲಿ ಹಾಗೂ ಡಿವಿಲಿಯರ್ಸ್ ಜೋಡಿ ಐಪಿಎಲ್‌ನಲ್ಲಿ 2,361 ರನ್ ಗಳಿಸಿದೆ. ಕ್ರಿಸ್ ಗೇಲ್ ಹಾಗೂ ಕೊಹ್ಲಿ ಜೋಡಿ 2,787 ರನ್ ಕಲೆ ಹಾಕಿ ಮೊದಲ ಸ್ಥಾನದಲ್ಲಿದೆ. ಶಿಖರ್ ಧವನ್ ಹಾಗೂ ಡೇವಿಡ್ ವಾರ್ನರ್ 2,357 ರನ್ ಗಳಿಸಿ ಮೂರನೇ ಸ್ಥಾನದಲ್ಲಿದ್ದಾರೆ.

ಕ್ವಿಂಟನ್ ಡಿಕಾಕ್ ಈವರೆಗೆ 112 ರನ್ ಗಳಿಸಿದ್ದು ದೊಡ್ಡ ಸ್ಕೋರ್ ಗಳಿಸುವ ವಿಶ್ವಾಸದಲ್ಲಿದ್ದಾರೆ. ಚೆನ್ನೈ ತಂಡದ ಪರ ವಾಟ್ಸನ್ ರಾಯಲ್ಸ್ ವಿರುದ್ಧ 57 ಎಸೆತಗಳಲ್ಲಿ 106 ರನ್ ಗಳಿಸಿದ್ದಾರೆ. ವಾಟ್ಸನ್ ತಂಡದ ಪರ ಗರಿಷ್ಠ ಸ್ಕೋರ್ ಗಳಿಸಿದ್ದಲ್ಲದೆ, ಗರಿಷ್ಠ ವಿಕೆಟ್‌ಗಳನ್ನು ಕಬಳಿಸಿದ್ದಾರೆ.

5 ಪಂದ್ಯಗಳಲ್ಲಿ 201 ರನ್ ಗಳಿಸುವ ಮೂಲಕ ಚೆನ್ನೈ ಪರ ಗರಿಷ್ಠ ವೈಯಕ್ತಿಕ ಸ್ಕೋರ್ ಗಳಿಸಿರುವ ಅಂಬಟಿ ರಾಯುಡು ಉತ್ತಮ ಪ್ರದರ್ಶನ ಮುಂದುವರಿಸುವ ವಿಶ್ವಾಸದಲ್ಲಿದ್ದಾರೆ. ಬ್ಯಾಟಿಂಗ್ ಸರದಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ನ ಸುರೇಶ್ ರೈನಾ(118 ರನ್)ಪ್ರಮುಖ ದಾಂಡಿಗನಾಗಿದ್ದು, ಧೋನಿ(139)ಹಾಗೂ ಡ್ವೇಯ್ನ್ ಬ್ರಾವೊ(104) ಕೂಡ ಮಹತ್ವದ ಕಾಣಿಕೆ ನೀಡಿದ್ದಾರೆ.

ಸ್ಟಾರ್ ಆಟಗಾರರನ್ನು ಒಳಗೊಂಡಿರುವ ಸಿಎಸ್‌ಕೆ ಬ್ಯಾಟಿಂಗ್‌ನ್ನು ಭೇದಿಸಲು ಆರ್‌ಸಿಬಿ ಬೌಲರ್‌ಗಳು ಬಹಳಷ್ಟು ಬೆವರಿಳಿಸಬೇಕಾಗಿದೆ. ತವರು ಮೈದಾನದಲ್ಲಿ ಎರಡು ಬಾರಿ ಎದುರಾಳಿ ತಂಡಕ್ಕೆ 200ಕ್ಕೂ ಅಧಿಕ ರನ್ ಬಿಟ್ಟುಕೊಟ್ಟಿರುವ ಆರ್‌ಸಿಬಿ ಬೌಲರ್‌ಗಳು ಬಿಗಿ ಬೌಲಿಂಗ್ ಮಾಡಬೇಕಾದ ಅಗತ್ಯವಿದೆ.

 ಕ್ರಮವಾಗಿ 5 ಹಾಗೂ 4 ವಿಕೆಟ್ ಪಡೆದಿರುವ ಸ್ಪಿನ್‌ದ್ವಯರಾದ ಯಜುವೇಂದ್ರ ಚಹಾಲ್ ಹಾಗೂ ವಾಶಿಂಗ್ಟನ್ ಸುಂದರ್ ಚೆನ್ನೈ ವಿರುದ್ಧ ಉತ್ತಮ ಪ್ರದರ್ಶನದ ನಿರೀಕ್ಷೆಯಲ್ಲಿದ್ದಾರೆ. ಈ ಋತುವಿನಲ್ಲಿ ಚೆನ್ನೈ ದಾಂಡಿಗರು ಸ್ಪಿನ್ ಬೌಲರ್‌ಗಳೆದುರು ಪರದಾಟ ನಡೆಸುತ್ತಿದ್ದಾರೆ.

ಚೆನ್ನೈ ತಂಡ ಸ್ಪಿನ್ನರ್‌ಗಳಿಗೆ 10 ವಿಕೆಟ್‌ಗಳನ್ನು ಕಳೆದುಕೊಂಡಿದ್ದು, ಪ್ರತಿ ಓವರ್‌ಗೆ 7.70 ರನ್ ಬಿಟ್ಟುಕೊಟ್ಟಿದೆ.

ಆರ್‌ಸಿಬಿ ಆಲ್‌ರೌಂಡರ್ ಕ್ರಿಸ್ ವೋಕ್ಸ್ ಈವರೆಗೆ 8 ವಿಕೆಟ್‌ಗಳನ್ನು ಕಬಳಿಸಿದ್ದು, ಉಮೇಶ್ ಯಾದವ್ ಕೂಡ 8 ವಿಕೆಟ್‌ಗಳನ್ನು ಕಬಳಿಸಿ ಉತ್ತಮ ಪ್ರದರ್ಶನ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News