2019 ಐಸಿಸಿ ವಿಶ್ವಕಪ್: ಜೂ.16ರಂದು ಭಾರತ-ಪಾಕ್ ಮುಖಾಮುಖಿ

Update: 2018-04-24 18:54 GMT

ಹೊಸದಿಲ್ಲಿ, ಎ.24: ಇಂಗ್ಲೆಂಡ್‌ನಲ್ಲಿ 2019ರಲ್ಲಿ ನಡೆಯಲಿರುವ ಐಸಿಸಿ ವಿಶ್ವಕಪ್‌ನಲ್ಲಿ ಭಾರತ ಜೂ.16ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ಎದುರಿಸಲಿದೆ.

ಭಾರತ ಮೊದಲ ಪಂದ್ಯದಲ್ಲಿ ಜೂನ್ 5 ರಂದು ದಕ್ಷಿಣ ಆಫ್ರಿಕ ತಂಡವನ್ನು ಎದುರಿಸುವ ಮೂಲಕ ವಿಶ್ವಕಪ್‌ನಲ್ಲಿ ಅಭಿಯಾನ ಆರಂಭಿಸಲಿದೆ.

 ವಿಶ್ವಕಪ್ ಟೂರ್ನಮೆಂಟ್ ಮೇ 30ರಿಂದ ಜುಲೈ 14ರ ತನಕ 12 ಕ್ರೀಡಾಂಗಣಗಳಲ್ಲಿ ನಡೆಯಲಿದೆ. ಭಾರತಕ್ಕೆ ಮೊದಲ ಪಂದ್ಯ ಜೂ.2ರಂದು ನಿಗದಿಯಾಗಿತ್ತು. ಇದೀಗ ದಿನ ಬದಲಾವಣೆಯಾಗಿದೆ. ಜೂನ್ 5ರಂದು ಭಾರತ ವಿಶ್ವಕಪ್‌ನಲ್ಲಿ ಅಭಿಯಾನ ಆರಂಭಿಸಲಿದೆ.

 ಲೋಧಾ ಸಮಿತಿ ಶಿಫಾರಸಿನಂತೆ ಐಪಿಎಲ್ ಮುಗಿದು ಅಂತರ್‌ರಾಷ್ಟ್ರೀಯ ಕ್ರಿಕೆಟ್ ಟೂರ್ನಿಗೆ ಅಣಿಯಾಗಲು ಆಟಗಾರರಿಗೆ 15 ದಿನಗಳ ಬಿಡುವು ಅಗತ್ಯ. ಈ ಕಾರಣದಿಂದಾಗಿ ವಿಶ್ವಕಪ್ ಕ್ರಿಕೆಟ್ ಟೂರ್ನಮೆಂಟ್‌ನ ದಿನ ಬದಲಾವಣೆಯಾಗಿದೆ.

ಕೋಲ್ಕತಾದಲ್ಲಿ ನಡೆಯುತ್ತಿರುವ 5 ದಿನಗಳ ಐಸಿಸಿ ಸಮಾವೇಶದಲ್ಲಿ ಈ ನಿರ್ಧಾರ ಪ್ರಕಟಗೊಂಡಿದೆ.

 ಭಾರತ 2011ರಲ್ಲಿ ವಿಶ್ವಕಪ್ ಗೆದ್ದುಕೊಂಡಿತ್ತು. 2015ರಲ್ಲಿ ಸೆಮಿಫೈನಲ್‌ನಲ್ಲಿ ನಿರ್ಗಮಿಸಿತ್ತು. ಭಾರತ ವಿಶ್ವಕಪ್ ಗೆಲ್ಲುವ ಬಲಿಷ್ಠ ತಂಡಗಳಲ್ಲಿ ಒಂದಾಗಿದೆ.

  ಇಂಗ್ಲೆಂಡ್ ಮತ್ತು ವೇಲ್ಸ್‌ನಲ್ಲಿ ನಡೆಯಲಿರುವ ವಿಶ್ವಕಪ್ ಟೂರ್ನಮೆಂಟ್‌ನಲ್ಲಿ 10 ತಂಡ ಹಣಾಹಣಿ ನಡೆಸಲಿವೆ. ಗ್ರೂಪ್ ಹಂತದಲ್ಲಿ 48 ಪಂದ್ಯಗಳು ನಡೆಯಲಿವೆೆ. ಪ್ರತಿಯೊಂದು ತಂಡಗಳು 9 ಪಂದ್ಯಗಳನ್ನು ಆಡಲಿವೆೆ. ಅಗ್ರ ನಾಲ್ಕು ತಂಡಗಳು ನಾಕೌಟ್ ಹಂತಕ್ಕೆ ಪ್ರವೇಶ ಪಡೆಯಲಿವೆ. 1992ರಲ್ಲಿ ಆಸ್ಟ್ರೇಲಿಯಲ್ಲಿ ನಡೆದ ಬೆನ್ಸನ್ ಆ್ಯಂಡ್ ಹೆಡ್ಜಸ್ ವಿಶ್ವಕಪ್ ಮಾದರಿಯಲ್ಲೇ 2019ರ ವಿಶ್ವಕಪ್ ನಡೆಯಲಿದೆ.

ಇಂಗ್ಲೆಂಡ್ ನಾಲ್ಕನೇ ಬಾರಿ ವಿಶ್ವಕಪ್ ಆಯೋಜಿಸಲಿದೆ. ಈ ಮೊದಲು 1975, 1979 ಮತ್ತು 1983ರಲ್ಲಿ ವಿಶ್ವಕಪ್ ನಡೆದಿತ್ತು.

   ‘‘ 2019ರ ಐಪಿಎಲ್ ಟೂರ್ನಿ ಮಾರ್ಚ್ 29ರಿಂದ ಮೇ 19ರ ತನಕ ನಡೆಯಲಿದೆ. ಆ ಬಳಿಕ ಅಂತರ್‌ರಾಷ್ಟ್ರೀಯ ಟೂರ್ನಿ ಆರಂಭಗೊಳ್ಳಲು 15 ದಿನಗಳ ಬಿಡುವು ಅಗತ್ಯ. ಈ ಕಾರಣದಿಂದಾಗಿ ವಿಶ್ವಕಪ್ ವೇಳಾಪಟ್ಟಿಯಲ್ಲಿ ಬದಲಾವಣೆಯಾಗಿದೆ. ಈ ಮೊದಲು ಜೂ.2ರಂದು ಪಂದ್ಯ ನಿಗದಿಯಾಗಿತ್ತು. ಆದರೆ ಆ ದಿನ ಆಡಲು ಸಾಧ್ಯವಾಗುವುದಿಲ್ಲ. ಭಾರತಕ್ಕೆ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕ ಮೊದಲ ಎದುರಾಳಿಯಾಗಿದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News