ಪಾಕಿಸ್ತಾನ ಹಾಕಿ ದಂತಕತೆ ಮನ್ಸೂರ್‌ಗೆ ಸಹಾಯ ಹಸ್ತ ಚಾಚಿದ ಚೆನ್ನೈ ಹಾಕಿ ಸಂಸ್ಥೆ

Update: 2018-04-25 08:20 GMT

ಚೆನ್ನೈ, ಎ.25: ಕಳೆದ ಕೆಲವು ಸಮಯದಿಂದ ಹೃದಯ ಸಂಬಂಧಿ ಕಾಯಿಲೆಯಿಂದ ಬಳುತ್ತಿರುವ ಪಾಕ್ ಹಾಕಿ ತಂಡದ ಮಾಜಿ ಗೋಲ್‌ಕೀಪರ್ ಮನ್ಸೂರ್ ಅಹ್ಮದ್ ಭಾರತದಲ್ಲಿ ಹೃದಯ ಕಸಿ ಚಿಕಿತ್ಸೆ ಪಡೆಯುವ ಬಯಕೆ ವ್ಯಕ್ತಪಡಿಸಿದ ಮರುದಿನವೇ ಚೆನ್ನೈ ಹಾಕಿ ಅಸೋಸಿಯೇಶನ್ ಸ್ವಯಂ ಪ್ರೇರಿತವಾಗಿ ನೆರವಿಗೆ ಮುಂದಾಗಿದೆ. ಅಹ್ಮದ್‌ಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ತಮ್ಮ ಸಂಪರ್ಕದಲ್ಲಿದ್ದಾರೆ ಎಂದು ಚೆನ್ನೈನ ಪ್ರಮುಖ ಸರ್ಜನ್‌ಗಳು ದೃಢಪಡಿಸಿದ್ದಾರೆ.

‘‘ಮನ್ಸೂರ್ ಅಹ್ಮದ್ ವೈದ್ಯರುಗಳು ಅಹ್ಮದ್‌ರ ವೈದ್ಯಕೀಯ ದಾಖಲೆಗಳನ್ನು ನನಗೆ ಕಳುಹಿಸಿಕೊಟ್ಟಿದ್ದಾರೆ. ಸಹಾಯ ಮಾಡುವಂತೆ ಕೇಳಿದ್ದಾರೆ. ನಾವು ಇದರ ಕುರಿತು ಗಮನ ಹರಿಸಲಿದ್ದೇವೆ’’ ಎಂದು ಚೆನ್ನೈ ನಗರದ ಹಿರಿಯ ಹೃದಯ ಕಸಿ ಸರ್ಜನ್ ಡಾ.ಕೆ.ಆರ್. ಬಾಲಕೃಷ್ಣನ್ ತಿಳಿಸಿದ್ದಾರೆ.

ಪಾಕ್‌ನ ಮಾಜಿ ನಾಯಕ ಮನ್ಸೂರ್ ಕರಾಚಿಯ ಜಿನ್ನಾ ಪೋಸ್ಟ್‌ಗ್ರಾಜುವೇಟ್ ಮೆಡಿಕಲ್ ಸೆಂಟರ್‌ನಲ್ಲಿ ಡಾ.ಚೌಧರಿ ಪರ್ವೇಝ್‌ರಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಮೆರಿಕ ಹಾಗೂ ಭಾರತಕ್ಕೆ ತೆರಳಿ ಹೃದಯ ಕಸಿ ಮಾಡಿಕೊಳ್ಳುವಂತೆ ಮನ್ಸೂರ್‌ಗೆ ಡಾ. ಚೌಧರಿ ಸಲಹೆ ನೀಡಿದ್ದಾರೆ.

ಮನ್ಸೂರ್ 1990ರಲ್ಲಿ ಪಾಕ್ ಹಾಕಿ ತಂಡದ ನಾಯಕನಾಗಿದ್ದರು. 1994ರಲ್ಲಿ ವಿಶ್ವಕಪ್ ಹಾಗೂ ಚಾಂಪಿಯನ್ಸ್ ಟ್ರೋಫಿ ಜಯಿಲು ತಂಡದ ನೇತೃತ್ವವಹಿಸಿದ್ದರು. ಕಳೆದ 10 ವರ್ಷಗಳಿಂದ ಹೃದಯ ಸಂಬಂಧಿ ಕಾಯಿಲೆಗೆ ಒಳಗಾಗಿರುವ 49ರ ಹರೆಯದ ಅಹ್ಮದ್‌ಗೆ ವೈದ್ಯರು ಹೃದಯ ಕಸಿ ಮಾಡಿಕೊಳ್ಳುವಂತೆ ಸಲಹೆ ನೀಡಿದ್ದಾರೆ.

ಅಹ್ಮದ್ ಬಯಕೆ ಈಡೇರಿದರೆ ಭಾರತದಲ್ಲಿ ಹೃದಯ ಕಸಿ ಚಿಕಿತ್ಸೆಗೆ ಒಳಗಾಗಲು ಇನ್ನಷ್ಟು ಸಮಯ ಕಾಯಬೇಕಾಗುತ್ತದೆ. ಚೆನ್ನೈನಲ್ಲಿ ವಿದೇಶದ ರೋಗಿಗಳು ಹೃದಯ ಕಸಿ ಮಾಡಿಸಿಕೊಳ್ಳಬೇಕಾದರೆ ನಾಲ್ಕರಿಂದ 6 ತಿಂಗಳ ಕಾಲ ಕಾಯಬೇಕಾಗುತ್ತದೆ. ವೇಟಿಂಗ್ ಲಿಸ್ಟ್‌ನಲ್ಲಿ ಭಾರತೀಯರ ಹೆಸರು ಇಲ್ಲದಿದ್ದರೆ ಮಾತ್ರ ವಿದೇಶಿಗರಿಗೆ ಹೃದಯ ನೀಡಲಾಗುತ್ತದೆ. ಯಾವುದೇ ಭಾರತೀಯನಿಗೆ ಹೃದಯದ ಅಗತ್ಯವಿಲ್ಲ ಎಂದು ದೃಢಪಟ್ಟ ಬಳಿಕ ವಿದೇಶಿ ಪ್ರಜೆಗೆ ಹೃದಯ ಕಸಿ ನಡೆಸಬಹುದು ಎಂದು ಹೊಸ ಕಾನೂನು ತರಲಾಗಿದೆ.

ಮನ್ಸೂರ್ ಅಹ್ಮದ್‌ಗೆ ಚೆನ್ನೈ ವೈದ್ಯರ ಬಳಗ ಮಾತ್ರವಲ್ಲ ಭಾರತದ ಮಾಜಿ ನಾಯಕ ವಿ.ಭಾಸ್ಕರನ್ ಕೂಡ ಬೆಂಬಲ ವ್ಯಕ್ತಪಡಿಸಿದ್ದಾರೆ.

‘‘ನಾನು ಅಹ್ಮದ್ ಸಂಪರ್ಕ ಕಳೆದುಕೊಂಡು ಕೆಲವು ಸಮಯ ಕಳೆದಿದೆ. ಮನ್ಸೂರ್ ಓರ್ವ ಧೈರ್ಯವಂತ ಆಟಗಾರನಾಗಿದ್ದರು. ಅವರಿಗೆ ಅಸೌಖ್ಯವಾಗಿದೆ ಎಂದು ತಿಳಿದ ತಕ್ಷಣ ಮಾಜಿ ನಾಯಕ ಶಾಬಾಝ್ ಅಹ್ಮದ್ ಮೂಲಕ ಮನ್ಸೂರ್‌ರನ್ನು ಸಂಪರ್ಕಿಸಲು ಯತ್ನಿಸಿದ್ದೆ’’ ಎಂದು ಭಾಸ್ಕರನ್ ಹೇಳಿದ್ದಾರೆ.

ತನಗೆ ಆರ್ಥಿಕ ನೆರವಿನ ಅಗತ್ಯವಿಲ್ಲ. ಭಾರತ ಸರಕಾರ ವೈದ್ಯಕೀಯ ನೆಲೆಯಲ್ಲಿ ವೀಸಾ ನೀಡುವುದನ್ನು ನಿರೀಕ್ಷಿಸುತ್ತಿರುವೆ. ಪಂಜಾಬ್ ಮುಖ್ಯಮಂತ್ರಿಗಳು ಚಿಕಿತ್ಸೆಗಾಗಿ ಈಗಾಗಲೇ 100,000 ಯುಎಸ್ ಡಾಲರ್ ಬಿಡುಗಡೆ ಮಾಡಿದ್ದು, ಆಸ್ಪತ್ರೆಯ ವೆಚ್ಚಗಳನ್ನು ಪಾಕ್ ಮಾಜಿ ಆಲ್‌ರೌಂಡರ್ ಶಾಹಿದ್ ಅಫ್ರಿದಿ ಪ್ರತಿಷ್ಠಾನ ಭರಿಸುತ್ತಿದೆ ಎಂದು ಅಹ್ಮದ್ ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News