ಚೀನಾದಲ್ಲಿ ಪತ್ತೆಯಾಯ್ತು ದೈತ್ಯ ಸೊಳ್ಳೆ!

Update: 2018-04-25 10:25 GMT

ಬೀಜಿಂಗ್,ಎ.25 : ಚೀನಾದ ಸಿಚುವಾನ್ ಪ್ರಾಂತ್ಯದಲ್ಲಿ ದೇಶದ ಕೀಟಶಾಸ್ತ್ರಜ್ಞರು  11.15 ಸೆಂ. ಮೀ ಉದ್ದದ ರೆಕ್ಕೆಗಳಿರುವ ದೈತ್ಯಗಾತ್ರದ ಸೊಳ್ಳೆಯೊಂದನ್ನು ಕಂಡು ಹಿಡಿದಿದ್ದಾರೆ.

ಜಗತ್ತಿನ ಅತ್ಯಂತ ದೊಡ್ಡ ಸೊಳ್ಳೆ ಜಾತಿಯಾದ ಹೊಲೊರುಸಿಯಾ ಮಿಕಾಡೋ ಗೆ  ಕಳೆದ ವರ್ಷದ ಆಗಸ್ಟ್ ತಿಂಗಳಲ್ಲಿ ಕಂಡು ಹಿಡಿಯಲಾದ ಈ ಸೊಳ್ಳೆ ಸೇರಿದೆ ಎಂದು ಪಶ್ಚಿಮ ಚೀನಾದ ಕೀಟಗಳ ಮ್ಯೂಸಿಯಂನ ಕ್ಯುರೇಟರ್ ಝಾವೊ ಲೀ ಹೇಳಿದ್ದಾರೆ.

ಮೊತ್ತ ಮೊದಲ ಬಾರಿಗೆ ಜಪಾನ್ ದೇಶದಲ್ಲಿ ಈ ಜಾತಿಯ ಸೊಳ್ಳೆಯನ್ನು ಪತ್ತೆ ಹಚ್ಚಲಾಗಿತ್ತು. ಆಗ ಬ್ರಿಟಿಷ್ ಕೀಟಶಾಸ್ತ್ರಜ್ಞ ಜಾನ್ ಒಬದಿಯ ವೆಸ್ಟ್ ವುಡ್ 1876ರಲ್ಲಿ ಅದಕ್ಕೆ ಆ ಹೆಸರು ನೀಡಿದ್ದರು. ಸಾಮಾನ್ಯವಾಗಿ ಈ ಜಾತಿಯ ಸೊಳ್ಳೆಗಳ ರೆಕ್ಕೆ  ಸುಮಾರು 8 ಸೆಂ.ಮೀ ಉದ್ದವಿದ್ದರೆ ಚೀನಾದಲ್ಲಿನ ಸೊಳ್ಳೆಯ ರೆಕ್ಕೆ 11.15 ಸೆಂ.ಮೀ ಉದ್ದವಿತ್ತು.

ಈ ಸೊಳ್ಳೆ ನೋಡಲು ಭಯಂಕರವಾಗಿದ್ದರೂ ರಕ್ತ ಹೀರುವುದಿಲ್ಲ. ವಯಸ್ಕ ಸೊಳ್ಳೆಗಳು ಕೇವಲ ಕೆಲವೇ ದಿನಗಳ ಕಾಲ  ಬದುಕುತ್ತವಲ್ಲದೆ  ಹೆಚ್ಚಾಗಿ ಮಕರಂದವನ್ನು ಹೀರುತ್ತವೆ ಎಂದು ಲೀ ಹೇಳಿದರು.

ಜಗತ್ತಿನಲ್ಲಿ ಸಾವಿರಾರು ಜಾತಿಯ ಸೊಳ್ಳೆಗಳಿದ್ದರೆ ಅವುಗಳಲ್ಲಿ ಕೇವಲ 100 ಜಾತಿಯ ಸೊಳ್ಳೆಗಳು ಮಾತ್ರ ರಕ್ತ ಹೀರುತ್ತವೆ ಹಾಗೂ ಮಾನವರಿಗೆ ಅಪಾಯಕಾರಿಯಾಗಿವೆ ಎಂದು ಅವರು ತಿಳಿಸಿದರು.

ಚೀನಾದ ಸಿಚುವಾನ್ ಪ್ರಾಂತ್ಯದಲ್ಲಿ ಈ ದೈತ್ಯ ಗಾತ್ರದ ಸೊಳ್ಳೆಗಳನ್ನು ಕ್ರೇನ್ ಫ್ಲೈ ಎಂದೂ ಕರೆಯಲಾಗುತ್ತದೆ.  ಈ ಸೊಳ್ಳೆಗಳಿಗೆ ಹೆಚ್ಚು ಎತ್ತರಕ್ಕೆ ಹಾರಲು ಸಾಧ್ಯವಾಗುವುದಿಲ್ಲ. ಅವುಗಳು ಹಾರಿದಾಗ ಜಿಗಿದಂತೆ ಕಾಣುತ್ತವೆ. ಸಾಕಷ್ಟು ಗಿಡಮರಗಳಿರುವೆಡೆಗಳಲ್ಲಿ ಈ ಸೊಳ್ಳೆಗಳು ಹೆಚ್ಚಾಗಿ ಕಂಡು ಬರುತ್ತವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News