×
Ad

ದೇಶದಲ್ಲೆ ಮೊದಲ ಬಾರಿಗೆ ಎಂ-3 ಇವಿಎಂ ಮತಯಂತ್ರ ಬಳಕೆ: ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್‌ಕುಮಾರ್

Update: 2018-04-25 19:10 IST

ಬೆಂಗಳೂರು, ಎ.25: ದೇಶದಲ್ಲೆ ಮೊದಲ ಬಾರಿಗೆ ಎಂ-3 ತಂತ್ರಜ್ಞಾನದ ಇವಿಎಂ ಯಂತ್ರಗಳನ್ನು ಬಿಬಿಎಂಪಿ ವ್ಯಾಪ್ತಿಯ 7 ವಿಧಾನಸಭಾ ಕ್ಷೇತ್ರಗಳಲ್ಲಿ ಬಳಕೆ ಮಾಡಲಾಗುತ್ತಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ತಿಳಿಸಿದರು.

ಬುಧವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ರಾಜರಾಜೇಶ್ವರಿ ನಗರ, ಶಿವಾಜಿನಗರ, ಶಾಂತಿ ನಗರ, ಗಾಂಧಿ ನಗರ, ರಾಜಾಜಿನಗರ, ಚಿಕ್ಕಪೇಟಿ ಸೇರಿದಂತೆ ಏಳು ಕ್ಷೇತ್ರಗಳಲ್ಲಿ ಎಂ.3 ಇವಿಎಂ ಮತಯಂತ್ರಗಳನ್ನು ಪ್ರಾಯೋಗಿಕವಾಗಿ ಬಳಸಲಾಗುತ್ತಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಎಂ-3 ಯಂತ್ರಗಳನ್ನೆ ಬಳಕೆ ಮಾಡಲಾಗುವುದು ಎಂದು ತಿಳಿಸಿದರು. 

ಎಂ-3 ಇವಿಎಂ ಮತಯಂತ್ರಗಳು ಅತ್ಯಾಧುನಿಕ ತಂತ್ರಜ್ಞಾನದಿಂದ ಕೂಡಿದ್ದು, ಇವುಗಳ ಕಂಟ್ರೋಲ್ ಯೂನಿಟ್ ಮತ್ತು ಪ್ಯಾಲೆಟ್ ಯೂನಿಟ್‌ಗಳನ್ನು ಬಿಇಎಲ್ ಸಂಸ್ಥೆ ಸಿದ್ಧಪಡಿಸಿರುವ ತಂತ್ರಾಂಶವನ್ನು ಮಾತ್ರ ಸ್ವೀಕರಿಸುತ್ತಿದೆ. ಇನ್ನುಳಿದಂತೆ ಯಾವುದೆ ತಂತ್ರಾಂಶವನ್ನು ಇದಕ್ಕೆ ಅಳಡಿಸಲು ಸಾಧ್ಯವಾಗುವುದಿಲ್ಲ ಎಂದು ಅವರು ಹೇಳಿದರು.

ಎಂ-3 ಕಂಟ್ರೋಲ್ ಯೂನಿಟ್‌ಗಳಲ್ಲಿ 24 ಬ್ಯಾಲೆಟ್ ಯೂನಿಟ್‌ಗಳನ್ನು ಜೋಡಣೆ ಮಾಡಬಹುದಾಗಿದೆ. ಒಟ್ಟಾರೆಯಾಗಿ 384 ಅಭ್ಯರ್ಥಿ ಹೆಸರುಗಳನ್ನು ಸೇರಿಸಬಹುದಾಗಿದೆ. ಆದರೆ, ಎಂ-2 ಯಂತ್ರದಲ್ಲಿ 64 ಅಭ್ಯರ್ಥಿಗಳನ್ನು ಹೆಸರುಗಳನ್ನು ಸೇರಿಸಲು ಮಾತ್ರ ಅವಕಾಶವಿತ್ತು. 4 ಬ್ಯಾಲೆಟ್ ಯೂನಿಟ್‌ಗಳನ್ನು ಮಾತ್ರ ಜೋಡಣೆ ಮಾಡಬಹುದಾಗಿತ್ತು ಎಂದು ಅವರು ಮಾಹಿತಿ ನೀಡಿದರು.

ಬೆಂಗಳೂರು 7 ವಿಧಾನಸಭಾ ಕ್ಷೇತ್ರಗಳಲ್ಲಿ ಎಂ-3 ಇವಿಎಂ ಮತಯಂತ್ರಗಳು ಬಳಕೆಯಾಗುತ್ತಿರುವುದರಿಂದ ಇದಕ್ಕಾಗಿ 2700 ಬ್ಯಾಲೆಟ್ ಯೂನಿಟ್, 2250 ಕಂಟ್ರೋಲ್ ಯೂನಿಟ್, 2350 ವಿವಿಪ್ಯಾಟ್‌ಗಳನ್ನು ಆಯೋಗವು ಈಗಾಗಲೆ ತರಿಸಿಕೊಂಡಿದೆ ಎಂದು ಅವರು ಹೇಳಿದರು.

ಎಂ-2 ಇವಿಎಂ: ಇನ್ನುಳಿದಂತೆ ರಾಜ್ಯದ 217 ವಿಧಾನಸಭಾ ಕ್ಷೇತ್ರಗಳಲ್ಲಿ ಎಂ-2 ಮತಯಂತ್ರಗಳು ಬಳಕೆಯಾಗುತ್ತಿದ್ದು, ಇದಕ್ಕಾಗಿ 92141 ಬ್ಯಾಲೆಟ್ ಯೂನಿಟ್, 82,580 ಕಂಟ್ರೋಲ್ ಯೂನಿಟ್ ಹಾಗೂ 84,145 ವಿವಿ ಪ್ಯಾಟ್‌ಗಳನ್ನು ಬಳಸಲಾಗುತ್ತಿದೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News