ರಾಜ್ಯ ವಿಧಾನಸಭಾ ಚುನಾವಣೆ: ಒಟ್ಟು 3,374 ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ
ಬೆಂಗಳೂರು, ಎ.25: ರಾಜ್ಯ ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಲು ಮಂಗಳವಾರ ಕೊನೆಯ ದಿನವಾಗಿದ್ದು, ಒಟ್ಟು 3374 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, ಬಿಜೆಪಿ-282, ಕಾಂಗ್ರೆಸ್-250, ಜೆಡಿಎಸ್ 239, ಬಿಎಸ್‌ಪಿ-22, ಸಿಪಿಐ-3 ಸೇರಿದಂತೆ ಪಕ್ಷೇತರರು-1673 ಮಂದಿ ನಾಮಪತ್ರಗಳನ್ನು ಸಲ್ಲಿಸಿದ್ದಾರೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್‌ಕುಮಾರ್ ತಿಳಿಸಿದರು.
ಬುಧವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಳುಬಾಗಿಲು ಕ್ಷೇತ್ರದಲ್ಲಿ 60 ಮಂದಿ, ವರುಣಾ ಕ್ಷೇತ್ರದಲ್ಲಿ 35, ಹುಬ್ಬಳ್ಳಿ-ಧಾರವಾಡದಲ್ಲಿ 32 ಹಾಗೂ ರಾಯಚೂರಿನಲ್ಲಿ 30 ಮಂದಿ ನಾಮಪತ್ರ ಸಲ್ಲಿಸಿದ್ದಾರೆ. ಹಾಗೂ 95 ಕ್ಷೇತ್ರಗಳಲ್ಲಿ 15 ಕ್ಕಿಂತ ಹೆಚ್ಚು ಮಂದಿ ನಾಮಪತ್ರ ಸಲ್ಲಿಸಿದ್ದಾರೆ ಎಂದು ತಿಳಿಸಿದರು.
ಅಭ್ಯರ್ಥಿಗಳ ವಯೋಮಾನ: 40ರಿಂದ 51 ವರ್ಷದೊಳಗಿರುವ 1046 ಮಂದಿ ನಾಮಪತ್ರ ಸಲ್ಲಿಸಿದ್ದಾರೆ. 31ರಿಂದ 40 ವರ್ಷದೊಳಗೆ 854 ಮಂದಿ, 51ರಿಂದ 60 ವರ್ಷದೊಳಗೆ 750 ಮಂದಿ, 61 ರಿಂದ 70 ವರ್ಷದೊಳಗೆ 414ಮಂದಿ, 71 ರಿಂದ 80 ವರ್ಷದೊಳಗೆ 63 ಅಭ್ಯರ್ಥಿಗಳು ಹಾಗೂ 80ರಿಂದ 91 ವರ್ಷದೊಳಗಿನ 5 ಮಂದಿ ಅಭ್ಯರ್ಥಿಗಳು ನಾಮ ಪತ್ರ ಸಲ್ಲಿಸಿದ್ದಾರೆ.
ಮಹಿಳಾ ಅಭ್ಯರ್ಥಿಗಳ ಸಂಖ್ಯೆ: ಕಾಂಗ್ರೆಸ್-16, ಬಿಜೆಪಿ-17, ಬಿಎಸ್‌ಪಿ-2, ಜೆಡಿಎಸ್-14ಮಂದಿ ನಾಮಪತ್ರ ಸಲ್ಲಿಸಿರುವ ಮಹಿಳಾ ಅಭ್ಯರ್ಥಿಗಳು ಕಣದಲ್ಲಿದ್ದಾರೆ.