ಭಾರತೀಯರ ಹಿತ ರಕ್ಷಿಸುವಲ್ಲಿ ಕೇಂದ್ರ ಸರಕಾರ ವಿಫಲ: ರಣದೀಪ್ ಸಿಂಗ್ ಸುರ್ಜೆವಾಲಾ
ಬೆಂಗಳೂರು, ಎ. 25: ಕರ್ನಾಟಕ ರಾಜ್ಯದ ಬಹುತೇಕ ಐಟಿ ಉದ್ಯೋಗಿಗಳು ಅಮೆರಿಕಾದಲ್ಲಿ ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದು, ಭಾರತೀಯ ಉದ್ಯೋಗಿಗಳ ಹಿತ ಕಾಪಾಡುವಲ್ಲಿ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರಕಾರ ವಿಫಲವಾಗಿದೆ ಎಂದು ಎಐಸಿಸಿ ಮಾಧ್ಯಮ ಮುಖ್ಯಸ್ಥ ರಣದೀಪ್ ಸಿಂಗ್ ಸುರ್ಜೇವಾಲಾ ಆರೋಪಿಸಿದ್ದಾರೆ.
ಬುಧವಾರ ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಕೇಂದ್ರ ಸರಕಾರ ದೇಶದಲ್ಲಿ ಉದ್ಯೋಗ ಸೃಷ್ಟಿಸುವಲ್ಲಿ ಸಾಧ್ಯವಾಗುತ್ತಿಲ್ಲ. ಅಮೆರಿಕಾದಲ್ಲಿ ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿರುವ ಭಾರತೀಯರನ್ನು ನೋಡಿಕೊಂಡು ಕೇಂದ್ರ ಸರಕಾರ ಸುಮ್ಮನೆ ಕುಳಿತಿದೆ ಎಂದು ದೂರಿದರು.
ರಾಜ್ಯದಲ್ಲಿ ಉದ್ಯೋಗ ಸೃಷ್ಟಿ: 5 ವರ್ಷಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರ 50 ಲಕ್ಷ ಉದ್ಯೋಗ ಸೃಷ್ಟಿಸಿದೆ ಎಂದ ಅವರು, ಬೆಂಗಳೂರು ಐಟಿ ಹಬ್ ಆಗಿದೆ. ಇದಕ್ಕೆ ರಾಜೀವ್ ಗಾಂಧಿಯವರ ದೂರದೃಷ್ಟಿಯ ಫಲ ಎಂದು ಸ್ಮರಿಸಿದರು.
ಉದ್ಯೋಗ ಕಡಿತಗೊಳಿಸಲು ಅಮೆರಿಕಾ ಹೊಸ ಕಾನೂನು ತಂದಿದೆ. 2017ರಲ್ಲಿ ಎಚ್ ಒನ್ ವಿ ವೀಸಾ ಅಮೆರಿಕಾ ಜಾರಿಗೆ ತಂದಿದೆ. ಇದು ಅಲ್ಲಿನ ಭಾರತೀಯ ಉದ್ಯೋಗಿಗಳಿಗೆ ಬಾರಿ ಹೊಡೆತ ನೀಡಿದೆ ಎಂದ ಅವರು, ಇದರ ಬಗ್ಗೆ ಕೇಂದ್ರ ಸರಕಾರ ಧ್ವನಿಯೆತ್ತಿಲ್ಲ ಎಂದು ಟೀಕಿಸಿದರು.