ಮತಾಂಧರನ್ನು ಸೋಲಿಸಿ, ಶೋಷಿತರಿಗೆ ದನಿಯಾಗಬಲ್ಲವರನ್ನು ಗೆಲ್ಲಿಸೋಣ: ಬೆಂಗಳೂರಿನಲ್ಲಿ ಜಿಗ್ನೇಶ್ ಮೆವಾನಿ
ಬೆಂಗಳೂರು, ಎ.25: ಚುನಾವಣೆಯಲ್ಲಿ ಮತಾಂಧರನ್ನು ಸೋಲಿಸುವ ಜೊತೆಗೆ ಶೋಷಿತರ ನೋವಿಗೆ ದನಿಯಾಗಬಲ್ಲ ಅಭ್ಯರ್ಥಿಗಳನ್ನು ಗೆಲ್ಲಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ದಲಿತ ನಾಯಕ, ಗುಜರಾತಿನ ವಡ್‌ಗಾಂ ಕ್ಷೇತ್ರದ ಶಾಸಕ ಜಿಗ್ನೇಶ್ ಮೆವಾನಿ ಕರೆ ನೀಡಿದರು.
ಬುಧವಾರ ನಗರದ ಕ್ವೀನ್ಸ್ ರಸ್ತೆಯ ದಾರುಸ್ಸಲಾಂ ಕಟ್ಟಡದಲ್ಲಿ ನಡೆದ ದಲಿತ-ಮುಸ್ಲಿಮ್-ಕ್ರೈಸ್ತ ಮುಖಂಡರ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು. ಈ ಚುನಾವಣೆಯಲ್ಲಿ ಸಂವಿಧಾನ ವಿರೋಧಿ ಶಕ್ತಿಗಳನ್ನು ಸೋಲಿಸಬೇಕಾಗಿದೆ ಎಂದ ಅವರು, ಬುದ್ಧ, ಬಸವ, ಅಂಬೇಡ್ಕರ್, ಸೂಫಿ ಸಂತರ ತತ್ವಗಳನ್ನು ಮನದಾಳಕ್ಕೆ ಇಳಿಸಿಕೊಂಡ ನಾಡಿನಲ್ಲಿ ದ್ವೇಷದ ವಿಷ ಬಿತ್ತುವ ಮತಾಂಧ ಶಕ್ತಿಗಳಿಗೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸೋಣ ಎಂದರು.
2019ರ ಲೋಕಸಭಾ ಚುನಾವಣೆಗೂ ಮುನ್ನ ಕರ್ನಾಟಕದ ಚುನಾವಣೆಯ ಸೋಲು ಗೆಲುವು ಇಡೀ ದೇಶದ ಭವಿಷ್ಯದ ದಿಕ್ಕನ್ನು ತೀರ್ಮಾನಿಸಲಿದೆ. ಈ ದೇಶ ಮತ್ತು ನಮ್ಮ ನಾಡು ಎತ್ತ ಮುಖ ಮಾಡಿದೆ, ಎತ್ತ ಸಾಗಲಿದೆ ಎಂಬ ಮುನ್ನೋಟದೊಂದಿಗೆ ನಾವು ಈ ಚುನಾವಣೆಗೆ ಸಕ್ರಿಯವಾಗಿ ಸ್ಪಂದಿಸಬೇಕಾಗಿದೆ ಎಂದು ಹೇಳಿದರು.
ಈಗಾಗಲೇ ದೇಶದಲ್ಲಿ ಹಣದ ಓಡಾಟ ನಿಂತು ಹೋಗಿದ್ದು, ವ್ಯಾಪಾರ ವಹಿವಾಟು ಕುಸಿದಿದೆ ಎಂದ ಅವರು, ಧಾರ್ಮಿಕ ದ್ವೇಷ, ದುರ್ಬಲ ಸಮುದಾಯಗಳ ಮೇಲಿನ ದೌರ್ಜನ್ಯ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.
ಸಭೆಯಲ್ಲಿ ವಿಚಾರವಾದಿ ಎ.ಕೆ.ಸುಬ್ಬಯ್ಯ, ನಿವೃತ್ತ ಐಪಿಎಸ್ ಅಧಿಕಾರಿ ಯು.ನಿಸಾರ್ ಅಹ್ಮದ್ ಸೇರಿ ಪ್ರಮುಖರಿದ್ದರು.