ಭಾರತದ ಮಾಜಿ ಅಥ್ಲೀಟ್ ಟೋನಿ ಡೇನಿಯಲ್ ನಿಧನ

Update: 2018-04-25 18:56 GMT

ಹೊಸದಿಲ್ಲಿ, ಎ.25: ಭಾರತದ ಮಾಜಿ ಅಥ್ಲೀಟ್, ತಾಂತ್ರಿಕ ಸಮಿತಿಯ ಜಂಟಿ ಕಾರ್ಯದರ್ಶಿ ಹಾಗೂ ಅಧ್ಯಕ್ಷರಾಗಿರುವ ಡಾ.ಟೋನಿ ಡೇನಿಯಲ್(66ವರ್ಷ) ಇಂದು ನಿಧನರಾಗಿದ್ದು ಭಾರತದ ಅಥ್ಲೆಟಿಕ್ಸ್ ಫೆಡರೇಶನ್(ಎಎಫ್‌ಐ) ಶೋಕ ವ್ಯಕ್ತಪಡಿಸಿದೆ.

 ‘‘ಟೋನಿ ನಿಧನ ಎಎಫ್‌ಐಗೆ ತುಂಬಲಾರದ ನಷ್ಟ. ಟೋನಿ ಎಎಫ್‌ಐ ಕುಟುಂಬದ ಅನುಭವಿ ಸದಸ್ಯರಾಗಿದ್ದರು. ಎಎಫ್‌ಐ ಪರವಾಗಿ ಟೋನಿ ಕುಟುಂಬದವರಿಗೆ ದುಃಖ ಸಹಿಸುವ ಶಕ್ತಿ ಸಿಗಲಿ ಎಂದು ಪ್ರಾರ್ಥಿಸುವೆ’’ ಎಂದು ಎಎಫ್‌ಐ ಅಧ್ಯಕ್ಷ ಆದಿಲ್ ಜೆ.ಸುಮರಿವಾಲಾ ಹೇಳಿದ್ದಾರೆ.

 ‘‘ನಾನು ಇಂದು ಬೆಳಗ್ಗೆ 7 ಗಂಟೆಗೆ ಟೋನಿ ಅವರೊಂದಿಗೆ ಮಾತನಾಡಿದ್ದೆ. ಅವರ ನಿಧನದ ವಾರ್ತೆ ಕೇಳಿ ಆಘಾತವಾಯಿತು. ನಾನು ಹಳೆಯ ಸ್ನೇಹಿತನನ್ನು ಕಳೆದುಕೊಂಡಿದ್ದೇನೆ. ಭಾರತದಲ್ಲಿ ಹಲವು ಪ್ರಮುಖ ಸ್ಪರ್ಧೆಗಳನ್ನು ಆಯೋಜಿಸಲು ಅವರು ಪ್ರಮುಖ ಪಾತ್ರವಹಿಸಿದ್ದರು’’ ಎಂದು ಎಎಫ್‌ಐ ಕಾರ್ಯದರ್ಶಿ ಡೇನಿಯಲ್ ಸಿಕೆ ಹೇಳಿದ್ದಾರೆ.

ಮಾಜಿ ಅಥ್ಲೀಟ್ ಟೋನಿ ಡೇನಿಯಲ್ ಇಂದು ಬೆಳಗ್ಗೆ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಮೃತರು ಪತ್ನಿ ಹಾಗೂ ಪುತ್ರಿಯನ್ನು ಅಗಲಿದ್ದಾರೆ.

 ಕೇರಳದ ಎರ್ನಾಕುಲಂನಲ್ಲಿ ಜನಿಸಿರುವ ಟೋನಿ 1968 ಹಾಗೂ 1972ರ ನಡುವೆ ಜೂನಿಯರ್ ಹಾಗೂ ಸೀನಿಯರ್ ವಿಭಾಗದ ರಾಷ್ಟ್ರೀಯ ಚಾಂಪಿಯನ್‌ಶಿಪ್‌ಗಳಲ್ಲಿ ಕೇರಳ ರಾಜ್ಯ ಹಾಗೂ ವಿಶ್ವವಿದ್ಯಾನಿಲಯವನ್ನು ಪ್ರತಿನಿಧಿಸಿದ್ದಾರೆ. 1970ರಲ್ಲಿ ರಾಜ್ಯ ಸ್ಪ್ರಿಂಟ್ ಚಾಂಪಿಯನ್ ಆಗಿದ್ದರು. ಟೋನಿ ಜಿಲ್ಲಾ ಮಟ್ಟದಲ್ಲಿ ನಿರ್ಮಿಸಿರುವ ದಾಖಲೆ 30 ವರ್ಷಗಳ ಕಾಲ ಇತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News