ಅಭಿವೃದ್ಧಿ ಕಾರ್ಯಕ್ಕೆ ನನ್ನಿಂದಲೇ ಲಂಚ ಕೇಳಿದರೆಂದ ಬಿಜೆಪಿ ಶಾಸಕ!

Update: 2018-04-27 12:06 GMT

ಲಕ್ನೋ, ಎ.27: ತಮ್ಮ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಳ್ಳಲು ಸಹರಣಪುರ ಜಿಲ್ಲಾ ಪಂಚಾಯತ್ ಸಹಾಯಕ ಇಂಜಿನಿಯರ್ ಅಲೋಕ್ ಗೌರ್ ಎಂಬವರು ರೂ.50,000 ಲಂಚದ ಬೇಡಿಕೆಯಿಟ್ಟರೆಂದು ಉತ್ತರ ಪ್ರದೇಶದ ರಾಮಪುರ್ ಮನಿಹರನ್ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಬಿಜೆಪಿಯ ದಲಿತ  ಶಾಸಕ ದೇವೇಂದ್ರ ಕುಮಾರ್ ನಿಮ್ ಆರೋಪಿಸಿದ್ದಾರೆ.

ಲಂಚದ ಹಣದಲ್ಲಿ ಅತ್ಯುನ್ನತ ಅಧಿಕಾರಿಯ ತನಕ ಎಲ್ಲರಿಗೂ ಪಾಲಿದೆ ಎಂದೂ ಆ ಇಂಜಿನಿಯರ್ ಹೇಳಿದ್ದಾರೆಂದು ಶಾಸಕ ತಿಳಿಸಿದ್ದಾರೆ. ಶಾಸಕರ ಈ ಆರೋಪ ತನ್ನನ್ನು ಪ್ರಾಮಾಣಿಕವೆಂದು ಕರೆದುಕೊಳ್ಳುತ್ತಿರುವ ಆದಿತ್ಯನಾಥ್ ಸರಕಾರಕ್ಕೆ ತೀವ್ರ ಮುಜುಗರ ಸೃಷ್ಟಿಸಿದೆ.

‘‘ನಿಮಗೆ ಲಂಚ ನೀಡಲು ಮನಸ್ಸಿಲ್ಲದೇ ಇದ್ದರೆ ನೀವು ಯಾರಿಗೆ ಬೇಕಾದರೂ ದೂರಬಹುದು. ಲಂಚ ಮೇಲಿನಧಿಕಾರಿಯ ತನಕವೂ ಹೋಗುತ್ತದೆ. ನನಗೆ ಎಲ್ಲಿಂದ ಹಣ ದೊರೆಯುತ್ತದೆ?’’ ಎಂದು ಇಂಜಿನಿಯರ್ ಹೇಳಿದರೆಂದು ಶಾಸಕ ಹೇಳಿಕೊಂಡಿದ್ದಾರೆ.

ರಾಜ್ಯದ ಪಂಚಾಯತ್ ರಾಜ್ ಸಚಿವರಿಗೆ ಬರೆದ ಪತ್ರವೊಂದರಲ್ಲಿ ನಿಮ್ ಈ ಆರೋಪ ಮಾಡಿದ್ದಾರೆ.

ಆದರೆ ಸರಕಾರಿ ಇಂಜಿನಿಯರ್ ತನ್ನ ಮೇಲೆ ಶಾಸಕ ಹೊರಿಸಿದ ಆರೋಪವನ್ನು ನಿರಾಕರಿಸಿದ್ದಾರೆ. ಯಾವುದಾದರೂ ಗುತ್ತಿಗೆದಾರ ಶಾಸಕರಿಗೆ ದೂರು ನೀಡುವಂತೆ ಹೇಳಿರಬಹುದು ಎಂದು ಅವರು ಹೇಳಿದ್ದಾರೆ.
ಈ ದೂರಿನ ಬಗ್ಗೆ ಪ್ರತಿಕ್ರಿಯಿಸಿದ ರಾಜ್ಯದ ಪಂಚಾಯತ್ ರಾಜ್ ಸಚಿವ ಭೂಪೇಂದರ್ ಸಿಂಗ್ ಚೌಧುರಿ, ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಹೇಳಿದ್ದಾರಲ್ಲದೆ, ಅಧಿಕಾರಿ ತಪ್ಪಿತಸ್ಥ ಎಂದು ಕಂಡು ಬಂದರೆ ಕ್ರಮ ಕೈಗೊಳ್ಳಲಾಗುವುದು ಎಂದೂ ತಿಳಿಸಿದ್ದಾರೆ.

ಬಿಜೆಪಿ ಅಧಿಕಾರಕ್ಕೆ ಬಂದಂದಿನಿಂದ ಸರಕಾರಿ ಅಧಿಕಾರಿಗಳು ತಮ್ಮ ಮಾತು ಕೇಳುತ್ತಿಲ್ಲ ಎಂದು ಹಲವಾರು ಶಾಸಕರು ಮತ್ತು ಬಿಜೆಪಿ ಕಾರ್ಯಕರ್ತರು ದೂರುತ್ತಿರುವುದು ಸಾಮಾನ್ಯವಾಗಿ ಬಿಟ್ಟಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News