ಸೈನಾ, ಪ್ರಣಯ್‌ಗೆ ಗೆಲುವು

Update: 2018-04-27 18:42 GMT

 ವುಹಾನ್, ಎ.27: ಇಲ್ಲಿ ನಡೆಯುತ್ತಿರುವ ಬ್ಯಾಡ್ಮಿಂಟನ್ ಏಶ್ಯಾ ಚಾಂಪಿಯನ್‌ಶಿಪ್‌ನ ಮಹಿಳೆಯರ ಸಿಂಗಲ್ಸ್ ನಲ್ಲಿ ಭಾರತದ ಮಹಿಳಾ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಮತ್ತು ಪುರುಷರ ಸಿಂಗಲ್ಸ್‌ನಲ್ಲಿ ಎಚ್.ಎಸ್.ಪ್ರಣಯ್ ಸೆಮಿಫೈನಲ್ ಪ್ರವೇಶಿಸಿದ್ದಾರೆ.

ಇದೇ ವೇಳೆ ಭಾರತದ ಕೆ. ಶ್ರೀಕಾಂತ್ ಮತ್ತು ಮಹಿಳೆಯರ ಸಿಂಗಲ್ಸ್ ನಲ್ಲಿ ಪಿ.ವಿ.ಸಿಂಧು ಅವರು ಕ್ವಾರ್ಟರ್ ಫೈನಲ್‌ನಲ್ಲಿ ಸೋತು ನಿರ್ಗಮಿಸಿದ್ದಾರೆ. ಸೈನಾ ನೆಹ್ವಾಲ್ ಕ್ವಾರ್ಟರ್ ಫೈನಲ್‌ನಲ್ಲಿ ದಕ್ಷಿಣ ಕೊರಿಯಾದ ಲೀ ಜಾಂಗ್ ಮಿ ವಿರುದ್ಧ 21-15, 21-13 ಅಂತರದಲ್ಲಿ ಜಯ ಗಳಿಸಿ ಸೆಮಿಫೈನಲ್‌ನಲ್ಲಿ ಅವಕಾಶ ದೃಢಪಡಿಸಿದರು. ಸೈನಾ ಮತ್ತು ಲೀ ಜಾಂಗ್ ನಡುವಿನ ಕ್ವಾರ್ಟರ್ ಫೈನಲ್ 43 ನಿಮಿಷಗಳಲ್ಲಿ ಮುಗಿಯಿತು.

 ಪುರುಷರ ಸಿಂಗಲ್ಸ್‌ನಲ್ಲಿ ಎಚ್.ಎಸ್ ಪ್ರಣಯ್ ಅವರು ಕೊರಿಯಾದ ಎರಡನೇ ಶ್ರೇಯಾಂಕದ ಸನ್ ವಾನ್ ಹೊ ಅವರನ್ನು 18-21, 23-21, 21-12 ಅಂತರದಲ್ಲಿ ಮಣಿಸಿ ಸೆಮಿಫೈನಲ್ ತಲುಪಿದರು. ಪುರುಷರ ಸಿಂಗಲ್ಸ್‌ನ ಕ್ವಾರ್ಟರ್‌ಫೈನಲ್‌ನಲ್ಲಿ ಶ್ರೀಕಾಂತ್ ಮಲೇಷ್ಯಾದ ಲೆಜೆಂಡ್ ಲೀ ಚಾಂಗ್ ವೇ ವಿರುದ್ಧ ಸೋಲು ಅನುಭವಿಸಿದರು. ಶ್ರೀಕಾಂತ್ ಅವರನ್ನು ಲೀ ಚಾಂಗ್ ಕೇವಲ 31 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ 21-12, 21-15 ಅಂತರದಲ್ಲಿ ಬಗ್ಗು ಬಡಿದು ಸೆಮಿಫೈನಲ್ ತಲುಪಿದರು.

ಪಿ.ವಿ.ಸಿಂಧು ಅವರು ಕೊರಿಯಾದ ಏಳನೇ ಶ್ರೇಯಾಂಕದ ಆಟಗಾರ್ತಿ ಸಂಗ್ ಜಿ ಹ್ಯೂನ್ ವಿರುದ್ಧ 19-21, 10-21 ಅಂತರದಲ್ಲಿ ಸೋಲು ಅನುಭವಿಸಿದರು.

 ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಜಯಿಸಿದ ಲೀ ಚಾಂಗ್ ಅವರು ಶ್ರೀಕಾಂತ್ ವಿರುದ್ಧ 5ನೇ ಜಯ ಗಳಿಸಿದ್ದಾರೆ. ಗೋಲ್ಡ್ ಕೋಸ್ಟ್‌ನಲ್ಲಿ ಇತ್ತೀಚೆಗೆ ನಡೆದ ಕಾಮನ್‌ವೆಲ್ತ್ ಗೇಮ್ಸ್‌ನ ಮಿಕ್ಸೆಡ್ ಟೀಮ್ ಇವೆಂಟ್‌ನಲ್ಲಿ ಶ್ರೀಕಾಂತ್ ಅವರು ಲೀ ಚಾಂಗ್‌ರನ್ನು ಮಣಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News