ಐಎಸ್‌ಎಸ್‌ಎಫ್ ವಿಶ್ವಕಪ್ ಶೂಟಿಂಗ್ ಸ್ಪರ್ಧೆ : ಭಾರತದ ಶೀರಝ್ ಶೇಖ್ ಉತ್ತಮ ಸಾಧನೆ

Update: 2018-04-28 14:35 GMT

ಸಿಯೋಲ್, ಎ.28: ದಕ್ಷಿಣ ಕೊರಿಯಾದ ಚಾಂಗ್‌ವಾನ್‌ನಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್ ವಿಶ್ವಕಪ್‌ನ ಪುರುಷರ ಸ್ಕೀಟ್ ಸ್ಪರ್ಧೆಯಲ್ಲಿ ಭಾರತದ ಶೀರಝ್ ಶೇಖ್ ಅತ್ಯುತ್ತಮ ಪ್ರದರ್ಶನದೊಂದಿಗೆ 11ನೇ ಸ್ಥಾನಕ್ಕೆ ತಲುಪಿದ್ದು, ಸ್ಪರ್ಧೆಯಲ್ಲಿ ಇನ್ನೂ ಮೂರು ಅರ್ಹತಾ ಸುತ್ತು ಬಾಕಿಯಿವೆ.

  ಈ ಸ್ಪರ್ಧೆಯಲ್ಲಿರುವ ಇತರ ಇಬ್ಬರು ಭಾರತೀಯರಾದ ಸ್ಮಿತ್ ಸಿಂಗ್ ಮತ್ತು ಅಂಗದ್ ಬಾಜ್ವ ಅನುಕ್ರಮವಾಗಿ 23 ಹಾಗೂ 34ನೇ ಸ್ಥಾನದಲ್ಲಿದ್ದಾರೆ. ಮಹಿಳೆಯರ ವಿಭಾಗದಲ್ಲಿ ಅಮೆರಿಕದ ಖ್ಯಾತ ಶೂಟಿಂಗ್ ಸ್ಪರ್ಧಿ ಕಿಂಬರ್ಲಿ ರ್ಹೋಡ್ , ಫೈನಲ್ ಹಂತದಲ್ಲಿ 60 ಗುರಿಯ ಪೈಕಿ 58ನ್ನು ಯಶಸ್ವಿಯಾಗಿ ಸಾಧಿಸುವ ಮೂಲಕ ವಿಶ್ವದಾಖಲೆಯೊಂದಿಗೆ ಸ್ವರ್ಣಪದಕ ಗೆದ್ದರು. ಇದು ಕಿಂಬರ್ಲಿ ಅವರ 17ನೇ ವಿಶ್ವಕಪ್ ಸ್ವರ್ಣಪದಕದ ಸಾಧನೆಯಾಗಿದೆ. ಅಮೆರಿಕದವರಾದ ಕಿಂಬರ್ಲಿ ಮೂರು ಬಾರಿ ಒಲಿಂಪಿಕ್ ಪದಕ ಹಾಗೂ ಒಮ್ಮೆ ವಿಶ್ವಚಾಂಪಿಯನ್ ಗೆದ್ದಿದ್ದಾರೆ. ಭಾರತದ ಮಹಿಳಾ ಶೂಟಿಂಗ್ ಸ್ಪರ್ಧಿ ಸಾನಿಯಾ ಶೇಖ್ 22ನೇ ಸ್ಥಾನದಲ್ಲಿ ಸ್ಪರ್ಧೆ ಮುಗಿಸಿದರು.

   ಟೂರ್ನಿಯಲ್ಲಿ ತಮ್ಮ ಪ್ರಭುತ್ವ ಮುಂದುವರಿಸಿರುವ ಚೀನಾ ಹಾಗೂ ರಶ್ಯಾ ದೇಶಗಳು , ಇದುವರೆಗೆ ನಿರ್ಧಾರವಾದ 14 ಚಿನ್ನದ ಪದಕಗಳಲ್ಲಿ 7ನ್ನು ಗೆದ್ದುಕೊಂಡಿವೆ. ಆತಿಥೇಯ ದಕ್ಷಿಣ ಕೊರಿಯ, ಆಸ್ಟ್ರೇಲಿಯಾ, ಇಟಲಿ, ಸ್ಲೊವಾಕಿಯಾ, ಫಿನ್ಲಾಂಡ್, ಬೆಲರೂಸ್ ಮತ್ತು ಅಮೆರಿಕ ತಲಾ ಒಂದು ಸ್ವರ್ಣ ಪದಕ ಗೆದ್ದುಕೊಂಡಿವೆ. ಟೂರ್ನಿಯಲ್ಲಿ ಭಾರತಕ್ಕೆ ಏಕೈಕ ಪದಕ ದೊರೆತಿದ್ದು, ಪುರುಷರ 10 ಮೀ. ಏರ್‌ಪಿಸ್ತೂಲ್ ಸ್ಪರ್ಧೆಯಲ್ಲಿ ಶಹಝಾರ್ ರಿಝ್ವಿ ಬೆಳ್ಳಿ ಪದಕ ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News