ಕೊರಿಯ ಮಾತುಕತೆಯಲ್ಲಿ ಮಧ್ಯಸ್ಥಿಕೆಗೆ ಅಮೆರಿಕಕ್ಕೆ ಅರ್ಹತೆಯಿಲ್ಲ: ಇರಾನ್

Update: 2018-04-28 17:29 GMT

ಟೆಹರಾನ್, ಎ. 28: ದಕ್ಷಿಣ ಮತ್ತು ಉತ್ತರ ಕೊರಿಯಗಳ ನಡುವಿನ ಉದ್ವಿಗ್ನತೆ ನಿವಾರಣೆ ಪ್ರಯತ್ನಗಳನ್ನು ಇರಾನ್ ಶನಿವಾರ ಸ್ವಾಗತಿಸಿದೆ. ಆದರೆ ಇದರಲ್ಲಿ ಪಾತ್ರವಹಿಸುವ ಅರ್ಹತೆಯನ್ನು ಅಮೆರಿಕ ಹೊಂದಿಲ್ಲ, ಯಾಕೆಂದರೆ ಅದು ತನ್ನ ಬದ್ಧತೆಗಳನ್ನು ಗೌರವಿಸಿಲ್ಲ ಎಂದು ಅದು ಎಚ್ಚರಿಸಿದೆ.

ಉತ್ತರ ಕೊರಿಯದ ನಾಯಕ ಕಿಮ್ ಜಾಂಗ್ ಉನ್ ಮತ್ತು ದಕ್ಷಿಣ ಕೊರಿಯದ ಅಧ್ಯಕ್ಷ ಮೂನ್ ಜೇ-ಇನ್ ನಡುವಿನ ಸಭೆಯು ಪ್ರಾದೇಶಿಕ ಮತ್ತು ಜಾಗತಿಕ ಸ್ಥಿರತೆಯತ್ತ ಇಡಲಾದ ಜವಾಬ್ದಾರಿಯುತ ಹಾಗೂ ಪರಿಣಾಮಕಾರಿ ಹೆಜ್ಜೆಯಾಗಿದೆ ಎಂದು ಸಚಿವಾಲಯದ ವಕ್ತಾರ ಬಹ್ರಮ್ ಘಾಸಿಮಿ ಹೇಳಿದ್ದಾರೆ.

 ‘‘ಆದರೆ, ಕೊರಿಯ ಪರ್ಯಾಯ ದ್ವೀಪದ ಉದ್ವಿಗ್ನತೆ ನಿವಾರಣೆಯ ಐತಿಹಾಸಿಕ ಪ್ರಕ್ರಿಯೆಯನ್ನು ಅದರಲ್ಲಿ ಭಾಗಿಯಾಗಿರುವ ಎರಡು ಪ್ರಧಾನ ಪಕ್ಷಗಳೇ ನಿಭಾಯಿಸಬೇಕು. ಹಾಗೂ ಅದರಲ್ಲಿ ವಿದೇಶಗಳಿಗೆ ಹಸ್ತಕ್ಷೇಪ ನಡೆಸಲು ಅವಕಾಶ ನೀಡಬಾರದು’’ ಎಂದರು.

‘‘ಪರಮಾಣು ಒಪ್ಪಂದಕ್ಕೆ ಸಂಬಂಧಿಸಿ ಇರಾನ್‌ನ 40 ವರ್ಷಗಳ ಅನುಭವದ ಆಧಾರದಲ್ಲಿ ಹೇಳುವುದಾದರೆ, ಅಮೆರಿಕ ಸರಕಾರ ಘನತೆವೆತ್ತ ಹಾಗೂ ವಿಶ್ವಾಸಾರ್ಹ ಭಾಗೀದಾರನಾಗಿಲ್ಲ. ಅದು ತನ್ನ ಅಂತಾರಾಷ್ಟ್ರೀಯ ಬದ್ಧತೆಗಳನ್ನು ಗೌರವಿಸುವುದಿಲ್ಲ’’ ಎಂದು ಘಾಸಿಮಿ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News