ಸೆಮಿಫೈನಲ್‌ನಲ್ಲಿ ಸೈನಾ ನೆಹ್ವಾಲ್, ಎಚ್.ಎಸ್.ಪ್ರಣಯ್‌ಗೆ ಸೋಲು

Update: 2018-04-28 18:45 GMT

ವುಹಾನ್, ಎ.28: ಇಲ್ಲಿ ನಡೆಯುತ್ತಿರುವ ಏಶ್ಯಾ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನ ಸೆಮಿಫೈನಲ್‌ನಲ್ಲಿ ಭಾರತದ ಸೈನಾ ನೆಹ್ವಾಲ್ ಮತ್ತು ಎಚ್.ಎಸ್.ಪ್ರಣಯ್ ಸೋತು ನಿರ್ಗಮಿಸಿದರು.

ಪುರುಷರ ಸಿಂಗಲ್ಸ್‌ನ ಸೆಮಿಫೈನಲ್‌ನಲ್ಲಿ ವಿಶ್ವದ ನಂ.10 ಆಟಗಾರ ಎಚ್.ಎಸ್.ಪ್ರಣಯ್ ಅವರು ಚೀನಾ ಮೂರನೇ ಶ್ರೇಯಾಂಕದ ಚೆನ್ ಲಾಂಗ್ ವಿರುದ್ಧ 16-21, 18-21 ಅಂತರದಲ್ಲಿ ಸೋತು ನಿರ್ಗಮಿಸಿದರು.

ಮಹಿಳೆಯರ ಸಿಂಗಲ್ಸ್‌ನ ಸೆಮಿಫೈನಲ್‌ನಲ್ಲಿ ಸೈನಾ ನೆಹ್ವಾಲ್ ಅವರು ತೈ ಝು ಯಿಂಗ್ ವಿರುದ್ಧ 25-27, 19-21ಅಂತರದಲ್ಲಿ ಸೋಲು ಅನುಭವಿಸಿದರು.ಇದರೊಂದಿಗೆ ಭಾರತದ ಇಬ್ಬರು ಆಟಗಾರರು ಕಂಚು ಪಡೆಯಲಿದ್ದಾರೆ.

ಪ್ರಣಯ್ ಇಂದಿನ ಪಂದ್ಯದಲ್ಲಿ ಧನಾತ್ಮಕವಾಗಿ ಆಟ ಆರಂಭಿಸಿದ್ದರು. ಆರಂಭದಲ್ಲಿ 5-2 ಮುನ್ನಡೆ ಪಡೆದಿದ್ದ ಪ್ರಣಯ್ ಬಳಿಕ ಹಿನ್ನಡೆ ಅನುಭವಿಸಿದರು. ಎದುರಾಳಿ ಲಾಂಗ್ ಅವರು 52 ನಿಮಿಷಗಳ ಆಟದಲ್ಲಿ ಗೆಲುವಿನ ನಗೆ ಬೀರಿದರು.

ಇದರೊಂದಿಗೆ ಏಶ್ಯಾ ಬ್ಯಾಡ್ಮಿಂಟನ್‌ನ ಮಹಿಳಾ ಮತ್ತು ಪುರುಷರ ಸಿಂಗಲ್ಸ್‌ನಲ್ಲಿ ಭಾರತದ ಸವಾಲು ಅಂತ್ಯಗೊಂಡಿದೆ.

ಶುಕ್ರವಾರ ನಡೆದ ಕ್ವಾರ್ಟರ್ ಫೈನಲ್‌ನಲ್ಲಿ ಭಾರತದ ಕೆ. ಶ್ರೀಕಾಂತ್ ಮತ್ತು ಮಹಿಳೆಯರ ಸಿಂಗಲ್ಸ್‌ನಲ್ಲಿ ಪಿ.ವಿ.ಸಿಂಧು ಅವರು ಕ್ವಾರ್ಟರ್ ಫೈನಲ್‌ನಲ್ಲಿ ಸೋತು ನಿರ್ಗಮಿಸಿದ್ದರು.

ಸೈನಾ ನೆಹ್ವಾಲ್ ಕ್ವಾರ್ಟರ್ ಫೈನಲ್‌ನಲ್ಲಿ ದಕ್ಷಿಣ ಕೊರಿಯಾದ ಲೀ ಜಾಂಗ್ ಮಿ ವಿರುದ್ಧ 21-15, 21-13 ಅಂತರದಲ್ಲಿ ಜಯ ಗಳಿಸಿ ಸೆಮಿಫೈನಲ್‌ನಲ್ಲಿ ಅವಕಾಶ ದೃಢಪಡಿಸಿದ್ದರು. ಪುರುಷರ ಸಿಂಗಲ್ಸ್‌ನಲ್ಲಿ ಎಚ್.ಎಸ್ ಪ್ರಣಯ್ ಅವರು ಕೊರಿಯಾದ ಎರಡನೇ ಶ್ರೇಯಾಂಕದ ಸನ್ ವಾನ್ ಹೊ ಅವರನ್ನು 18-21, 23-21, 21-12 ಅಂತರದಲ್ಲಿ ಮಣಿಸಿ ಸೆಮಿಫೈನಲ್ ತಲುಪಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News