ಕೋಲ್ಕತಾಕ್ಕೆ ಆರ್‌ಸಿಬಿ ಸವಾಲು

Update: 2018-04-28 18:50 GMT

ಬೆಂಗಳೂರು, ಎ.28: ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡ ಇಂಡಿಯನ್‌ಪ್ರೀಮಿಯರ್ ಲೀಗ್ ಟ್ವೆಂಟಿ-20 ಟೂರ್ನಿಯ ಪಂದ್ಯದಲ್ಲಿ ರವಿವಾರ ಕೋಲ್ಕತಾ ನೈಟ್ ರೈಡರ್ಸ್‌ ತಂಡವನ್ನು ಎದುರಿಸಲಿದೆ.

ಆರ್‌ಸಿಬಿ ತಂಡ ನಾಲ್ಕು ಸೋಲು ಮತ್ತು ಎರಡು ಪಂದ್ಯಗಳಲ್ಲಿ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದೆ. ಇದೇ ವೇಳೆ ಕೋಲ್ಕತಾ ತಂಡ 3 ಗೆಲುವು ಮತ್ತು 4 ಪಂದ್ಯಗಳಲ್ಲಿ ಸೋಲು ಅನುಭವಿಸಿ ನಾಲ್ಕನೇ ಸ್ಥಾನ ಪಡೆದಿದೆ.

ಕಳೆದ ವಾರ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಆಘಾತಕಾರಿ ಸೋಲು ಅನುಭವಿಸಿತ್ತು. ಶುಕ್ರವಾರ ರಾತ್ರಿ ನಡೆದ ಪಂದ್ಯದಲ್ಲಿ ಕೆಕೆಆರ್ ತಂಡಕ್ಕೆ ಡೆಲ್ಲಿ ಡೇರ್‌ಡೆವಿಲ್ಸ್ ಸೋಲುಣಿಸಿತ್ತು.

ಎರಡು ಬಾರಿ ಟ್ರೋಫಿ ಎತ್ತಿದ್ದ ಕೆಕೆಆರ್ ತಂಡ ಗೆಲುವಿನ ಹಳಿಗೆ ಮರಳಲು ಹೆಣಗಾಡುತ್ತಿದೆ. ಕಳೆದ ಬಾರಿ ಕೆಕೆಆರ್ ಮತ್ತು ಆರ್‌ಸಿಬಿ ಮುಖಾಮುಖಿಯಾಗಿದ್ದವು. ಇದರಲ್ಲಿ ಕೆಕೆಆರ್ 177 ರನ್‌ಗಳ ಸವಾಲನ್ನು ಯಶಸ್ವಿಯಾಗಿ ಬೆನ್ನಟ್ಟಿ ಗೆಲುವಿನ ದಡ ಸೇರಿತ್ತು. ಸುನೀಲ್ ನರೇನ್ 19 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ತಂಡದ ಗೆಲುವಿಗೆ ನೆರವಾಗಿದ್ದರು.

   ಸ್ಪಿನ್ನರ್‌ಗಳಾದ ನರೇನ್, ಕುಲ್‌ದೀಪ್ ಯಾದವ್ ಮತ್ತು ಪಿಯೂಷ್ ಚಾವ್ಲಾ ಮೊದಲ ಪಂದ್ಯದಲ್ಲಿ ಕೆಕೆಆರ್ ತಂಡದ ಗೆಲುವಿಗೆ ನೆರವಾಗಿದ್ದರು.

ಆರ್‌ಸಿಬಿ ತಂಡದ ಸ್ಟಾರ್ ಆಟಗಾರ ಎಬಿಡಿವಿಲಿಯರ್ಸ್ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 30 ಎಸೆತಗಳಲ್ಲಿ 68 ರನ್ ಸಿಡಿಸಿದ್ದರು. ಡೆಲ್ಲಿ ವಿರುದ್ಧ ಏಕಾಂಗಿ ಹೋರಾಟದ ಮೂಲಕ ಆರ್‌ಸಿಬಿಗೆ ಗೆಲುವು ತಂದು ಕೊಟ್ಟಿದ್ದರು. ಡಿವಿಲಿಯರ್ಸ್ 39 ಎಸೆತಗಳಲ್ಲಿ 90 ರನ್ ಸಿಡಿಸಿದ್ದರು. ನಾಯಕ ವಿರಾಟ್ ಕೊಹ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ 57ರನ್ ಮತ್ತು ಮುಂಬೈ ಇಂಡಿಯನ್ಸ್ ವಿರುದ್ಧ ಔಟಾಗದೆ 92 ರನ್ ಗಳಿಸಿದ್ದರು. ಆದರೆ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ವಿಫಲರಾಗಿದ್ದರು. ಕೇವಲ 18 ರನ್ ಸಿಡಿಸಿದ್ದರು. ಆರ್‌ಸಿಬಿ ತಂಡದ ಆರಂಭಿಕ ದಾಂಡಿಗ ಕ್ವಿಂಟನ್ ಡಿ ಕಾಕ್ ಈ ವರೆಗೆ 165 ರನ್ ಗಳಿಸಿದ್ದಾರೆ. ಕಳೆದ ಪಂದ್ಯದಲ್ಲಿ ಅವರು 37 ಎಸೆತಗಳಲ್ಲಿ 53 ರನ್ ಸಿಡಿಸಿದ್ದರು.

ಕೆಕೆಆರ್ ಕಳೆದ ಪಂದ್ಯದಲ್ಲಿ ಡೆಲ್ಲಿ ವಿರುದ್ಧ 55 ರನ್‌ಗಳ ಅಂತರದಲ್ಲಿ ಸೋಲು ಅನುಭವಿಸಿತ್ತು. ಇದೀಗ ಗೆಲುವಿನ ಹಳಿಗೆ ಮರಳಲು ನೋಡುತ್ತಿದೆ. ರಾಬಿನ್ ಉತ್ತಪ್ಪ, ಕ್ರಿಸ್ ಲಿನ್ ಮತ್ತು ದಿನೇಶ್ ಕಾರ್ತಿಕ್ ತಂಡ ಗೆಲ್ಲಲು ದೊಡ್ಡ ಕೊಡುಗೆ ನೀಡಬೇಕಾಗಿದೆ.

ಈ ತನಕ ಉತ್ತಪ್ಪ 164ರನ್, ಲಿನ್ 191ರನ್, ನಿತೀಶ್ ರಾಣಾ 173ರನ್, ರಸೆಲ್ 163 ರನ್ ಮತ್ತು ದಿನೇಶ್ ಕಾರ್ತಿಕ್ 212 ರನ್ ಕಲೆ ಹಾಕಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News