ರಾಹುಲ್ ರನ್ನು ಟೀಕಿಸುವ ಭರದಲ್ಲಿ ಶ್ರವಣಬೆಳಗೊಳವನ್ನು ಪರೋಕ್ಷವಾಗಿ ಅಪಹಾಸ್ಯ ಮಾಡಿದ ಅನಂತ ಕುಮಾರ್ ಹೆಗಡೆ
ಬೆಳಗಾವಿ, ಎ. 29: ‘ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ನಮ್ಮ ದೇಶದ ಅತ್ಯಂತ ದೊಡ್ಡ ಶ್ರದ್ಧಾ ಕೇಂದ್ರ ಹಾಸನದ ಶ್ರವಣಬೆಳಗೊಳಕ್ಕೂ ಹೋಗಿ ಬರಲಿ’ ಎಂದಿರುವ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ, ಪರೋಕ್ಷವಾಗಿ ಬಟ್ಟೆಯಿಲ್ಲದೆ ಹೋಗಬೇಕೆಂದು ಲೇವಡಿ ಮಾಡುವ ಮೂಲಕ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ರವಿವಾರ ಬೆಳಗಾವಿಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಅವರು, ರಾಹುಲ್ ಗಾಂಧಿಗೆ ದೇಶದಲ್ಲಿ ಹಿಂದೂ ಧರ್ಮವಿದೆ ಎಂಬುದು ಇದೀಗ ಗೊತ್ತಾಗಿದೆ. ಹೀಗಾಗಿ ಅವರು ಮಠ, ದೇವಸ್ಥಾನಗಳಿಗೆ ತೆರಳುತ್ತಿದ್ದಾರೆಂದು ಟೀಕಿಸಿದರು.
ಯಾರೋ ಹೇಳಿದರು ಎಂದು ಕಾವಿ ತೊಟ್ಟು ದೇಗುಲಕ್ಕೆ ಹೋದ, ಮಠಕ್ಕೆ ಹೋಗುವಾಗ ರುದ್ರಾಕ್ಷಿ ಧರಿಸಿಕೊಂಡ, ಮಸೀದಿಗೆ ಕೋಳಿಪುಕ್ಕ ಹಾಕಿಕೊಂಡು ಹೋದ, ಚರ್ಚ್‌ಗೆ ಕೊರಳಲ್ಲಿ ಶಿಲುಬೆ ಕಟ್ಟಿಕೊಂಡು ಹೋದ ಎಂದು ಅನಂತ ಕುಮಾರ್ ಹೆಗಡೆ ಏಕವಚನ ಪ್ರಯೋಗ ಮಾಡಿದರು.
ದೇವಸ್ಥಾನದಲ್ಲಿ ಕೊಟ್ಟ ತೀರ್ಥ ಹೇಗೆ ಸೇವಿಸಬೇಕೆಂದು ಗೊತ್ತಿಲ್ಲ. ರಾಹುಲ್ ಗಾಂಧಿಗೆ ನಾನು ಹೇಳುತ್ತೇನೆ, ನಮ್ಮ ದೇಶದ ಅತ್ಯಂತ ದೊಡ್ಡ ಶ್ರದ್ಧಾಕೇಂದ್ರ ಶ್ರವಣಬೆಳಗೊಳಕ್ಕೂ ಹೋಗಿಬನ್ನಿ ಎಂದು ಹೇಳುವ ಮೂಲಕ ಬಟ್ಟೆಯಿಲ್ಲದೆ ಹೋಗಿ ಎಂದು ಹೇಳಿದರು.
ಧರ್ಮದ ವಿಚಾರದಲ್ಲಿ ಬಿಜೆಪಿ ಎಂದಿಗೂ ರಾಜಿಯಾಗುವುದಿಲ್ಲ. ಆದರೆ, ಕಾಂಗ್ರೆಸ್ ಹಾಗಲ್ಲ. ಬರೀ ನಾಟಕ, ಅವರಿಗೆ ಯಾವುದೇ ಶ್ರದ್ಧೆಯಿಲ್ಲ. ಹೋಗಬೇಕು ಎಂದು ದೇಗುಲ, ಮಠ, ಮಂದಿರಗಳಿಗೆ ತೆರಳುತ್ತಾರೆ. ಈ ನಾಟಕದ ಕಂಪೆನಿ ಕಳೆದ 70 ವರ್ಷಗಳಿಂದ ದೇಶವನ್ನು ಆಳಿದೆ.
ಈ ಕಾಂಗ್ರೆಸ್ ನಾಟಕ ಕಂಪೆನಿ ಮುಂದಿನ ದಿನಗಳಲ್ಲಿ ದೇಶದಲ್ಲಿ ಇರಬಾರದು. ಎಲ್ಲಿವರೆಗೆ ನಮ್ಮ ದೇಶದಲ್ಲಿ ಕಾಂಗ್ರೆಸ್ ಇರುತ್ತದೆಯೋ ಅಲ್ಲಿವರೆಗೆ ಅಭಿವೃದ್ಧಿ ಸಾಧ್ಯವಿಲ್ಲ. ದೇಶ ಲೂಟಿ ಹೊಡೆಯುವುದು, ಧರ್ಮ ಅಪಮಾನ ಮಾಡುವುದೇ ಕಾಂಗ್ರೆಸ್ ಕೆಲಸ ಎಂದು ಅವರು ದೂರಿದರು.