×
Ad

ಅಮಿತ್ ಶಾ- ಕುಮಾರಸ್ವಾಮಿ ಭೇಟಿಯ ದಾಖಲೆ ಬಿಡುಗಡೆಗೆ ಹಿಂದೇಟು ಏಕೆ: ಶೋಭಾ ಕರಂದ್ಲಾಜೆ ಪ್ರಶ್ನೆ

Update: 2018-04-29 19:10 IST

ಬೆಂಗಳೂರು, ಎ. 29: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮತ್ತು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಭೇಟಿ ಮಾಡಿದ ಬಗ್ಗೆ ದಾಖಲೆ ಬಿಡುಗಡೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಿಂದೇಟು ಹಾಕುತ್ತಿರುವುದೇಕೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಶೋಭಾ ಕರಂದ್ಲಾಜೆ ಪ್ರಶ್ನಿಸಿದ್ದಾರೆ.

ರವಿವಾರ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಮಿತ್ ಶಾ ಮತ್ತು ಕುಮಾರಸ್ವಾಮಿ ವಿಮಾನದಲ್ಲಿ ಭೇಟಿಯಾಗಿದ್ದು, ಇಬ್ಬರೂ ಜೊತೆಗಿರುವ ಫೋಟೊ ಬಿಡುಗಡೆ ಮಾಡುವೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಚುನಾವಣೆ ಯುದ್ದ ಕಾಲವಿದ್ದಂತೆ, ಆರೋಪ ಸಾಬೀತು ಮಾಡಲು ಇದಕ್ಕಿಂತ ಸೂಕ್ತ ಸಮಯ ಬೇಕೆ ಎಂದು ಕೇಳಿದರು.

ಝಡ್ ಭದ್ರತೆಯಲ್ಲಿರುವ ಅಮಿತ್ ಶಾಗೆ ಪೊಲೀಸ್ ಭದ್ರತೆ ಒದಗಿಸುವುದು, ಗುಪ್ತಚರ ದಳವೂ ಅವರ ಅಧೀನದಲ್ಲಿದೆ. ಅಮಿತ್ ಶಾ ಪ್ರವಾಸ ವೇಳೆ ಕದ್ದು ಮುಚ್ಚಿ ಎಲ್ಲೂ ಓಡಾಡುತ್ತಿಲ್ಲ. ಭೇಟಿ ಮಾಡಿದ್ದು ನಿಜವೇ ಆಗಿದ್ದರೆ ಕೂಡಲೇ ದಾಖಲೆ ಬಿಡುಗಡೆ ಮಾಡಬೇಕು. ಇಲ್ಲವೇ ಶಾ ಅವರ ಕ್ಷಮೆ ಕೋರಬೇಕೆಂದು ಆಗ್ರಹಿಸಿದರು.

ಕೇವಲ ಪ್ರಚಾರಕ್ಕಾಗಿ ಹಾಗೂ ಜನರನ್ನು ದಾರಿ ತಪ್ಪಿಸಲು ಸಿದ್ದರಾಮಯ್ಯ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ಬಿಜೆಪಿ ನಾಯಕರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುತ್ತಿದ್ದಾರೆ. ಸಾಧನೆಗಳ ಮೇಲೆ ಮತ ಕೇಳಲಿಕ್ಕೆ ಮುಖ ಇಲ್ಲದೆ, ಒಂದು ಕ್ಷೇತ್ರದಿಂದ ಮತ್ತೊಂದು ಕ್ಷೇತ್ರಕ್ಕೆ ಪಲಾಯನ ಮಾಡಿರುವ ಸಿದ್ದರಾಮಯ್ಯ ಹೇಡಿತನಕ್ಕೆ ಸಾಕ್ಷಿ ಎಂದು ವಾಗ್ದಾಳಿ ನಡೆಸಿದರು.

ಏಜೆನ್ಸಿ ಸಿದ್ದಪಡಿಸಿದ ಪ್ರಣಾಳಿಕೆ: ರಾಜ್ಯದಲ್ಲಿ 5 ವರ್ಷ ಆಡಳಿತ ನಡೆಸಿದ ಕಾಂಗ್ರೆಸ್ ಸರಕಾರಕ್ಕೆ ಗಂಭೀರತೆಯೂ ಇಲ್ಲ ಚಾಕಚಕ್ಯತೆಯೂ ಇಲ್ಲ. ಅಧಿಕಾರದಿಂದ ನಿರ್ಗಮಿಸುವ ಸಂದರ್ಭದಲ್ಲೂ ಇದು ಬಿಂಬಿತವಾಗಿದೆ. ಪ್ರಣಾಳಿಕೆಯಲ್ಲಿ ನೂರಾರು ತಪ್ಪುಗಳಿದ್ದು, ಕನ್ನಡಕ್ಕೆ ಅಪಮಾನ ಮಾಡಲಾಗಿದೆ ಎಂದು ಅವರು ದೂರಿದರು.

ಕಾಂಗ್ರೆಸ್‌ನ ಯಾವುದೇ ನಾಯಕರು ಪ್ರಣಾಳಿಕೆಯನ್ನು ಓದಿಲ್ಲವೆಂಬುದು ಇದರಿಂದ ಸ್ಪಷ್ಟವಾಗಿದೆ. ಕಳೆದೆರಡು ವರ್ಷಗಳಿಂದ ಪ್ರಚಾರಕ್ಕೆ ಪಿಆರ್ ಏಜೆನ್ಸಿಗಳನ್ನು ಬಳಸಿಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಇದೀಗ ಪ್ರಣಾಳಿಕೆಯನ್ನೂ ಪಿಆರ್ ಏಜೆನ್ಸಿಗಳಿಂದ ಸಿದ್ದಪಡಿಸಿದ್ದಾರೆಂದು ಲೇವಡಿ ಮಾಡಿದರು.


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News